ಒಂದು ಲಕ್ಷ ಮಂದಿ ತಿಂದು ತೇಕಿದ ಸುನಾಮಿ ರಕ್ಕಸ ಮತ್ತೆ ಬರುವನಾ?

ಒಂದು ಲಕ್ಷ ಮಂದಿ ತಿಂದು ತೇಕಿದ ಸುನಾಮಿ ರಕ್ಕಸ ಮತ್ತೆ ಬರುವನಾ?
ಕರ್ನಾಟಕದಲ್ಲಿ ಮತ್ತೆ ಸುನಾಮಿಯ ಭಯವಿಲ್ಲ - ತಜ್ಞರ ಅಭಯ

ನವದೆಹಲಿ : ಪ್ರಳಯಾಂತಕ ಸುನಾಮಿ ಅಲೆಗಳು ಮರುಕಳಿಸುತ್ತವಾ? ಈ ಕುರಿತು ಎಚ್ಚರಿಕೆ ಹಾಗೂ ನಿರಾಕರಣೆಯ ಸುದ್ದಿಗಳು ಕೇಂದ್ರ ಸಚಿವಾಲಯದಿಂದ ಹೊರಬೀಳುತ್ತಿರುವ ನಡುವೆ ದಕ್ಷಿಣ ಏಷ್ಯಾದಲ್ಲಿ ಸುನಾಮಿಗೆ ಬಲಿಯಾದವರ ಸಂಖ್ಯೆ 1 ಲಕ್ಷವನ್ನು ಮೀರಿದೆ ಎಂದು ಅಂತರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ ಅಂದಾಜು ಮಾಡಿದೆ.

ಶ್ರೀಲಂಕಾದಲ್ಲಿ 22,799 ಮಂದಿ ಸಾವನ್ನಪ್ಪಿದ್ದು, 5,000ಮಂದಿ ನಾಪತ್ತೆಯಾಗಿದ್ದಾರೆ. ಸುಮಾರು 6ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. 93,407 ಮಂದಿ ವಿವಿಧ ಶಾಲೆ, ದೇವಸ್ಥಾನ, ಚರ್ಚ್‌, ಮತ್ತಿತರ ನಿರಾಶ್ರಿತರ ಕೇಂದ್ರಗಳಲ್ಲಿ ತಂಗಿದ್ದಾರೆ. ಇಂಡೋನೇಷ್ಯದಲ್ಲಿ 45,268, ಭಾರತದಲ್ಲಿ 12ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಸಾವಿರಾರು ಜನ ನಾಪತ್ತೆಯಾಗಿದ್ದಾರೆ. ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಈವರೆಗೆ 7000ಮಂದಿ ಮೃತಪಟ್ಟಿದ್ದಾರೆ.

ಕೊಳೆತು ನಾರುತ್ತಿರುವ ಶವಗಳನ್ನು ತೆಗೆಯುವ ಕೆಲಸ ಮುಂದುವರೆದಿದೆ. ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ವಿಮಾನದಲ್ಲಿ ಆಹಾರ ಪಟ್ಟಣಗಳನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಸಮುದ್ರದ ಬಳಿ ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಮತ್ತೆ ಸುನಾಮಿ : ಈ ನಡುವೆ ಮುಂದಿನ 48ಗಂಟೆಗಳಲ್ಲಿ ಹಿಂದೂ ಮಹಾಸಾಗರದಿಂದ ಮತ್ತೆ ಸುನಾಮಿ ಅಪ್ಪಳಿಸುವ ಸಾಧ್ಯತೆಗಳು ಕೇಳಿ ಬರುತ್ತಿವೆ. ಕಡಲು ತೀರದ ರಾಜ್ಯಗಳು ಮತ್ತು ದ್ವೀಪಗಳಲ್ಲಿ ಮುಂಜಾಗ್ರತೆ ವಹಿಸುವಂತೆ ಕೇಂದ್ರ ಸರಕಾರ ಎಚ್ಚರಿಸಿದೆ. ಜನವರಿ 1ರವರೆಗೂ ಈ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿರುತ್ತವೆ. ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ, ಲಕ್ಷದೀಪ, ಅಂಡಮಾನ್‌ ಮತ್ತು ನಿಕೋಬರ್‌ನ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಗೃಹ ಕಚೇರಿ ಸೂಚನೆ ನೀಡಿದೆ.

ತಮಿಳುನಾಡಿನ ನಾಗಪಟ್ಟಣಂ ಮೇಲೆ ಮತ್ತೆ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿರುವುದರಿಂದ, ಸ್ಥಳ ಬದಲಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಜನರು ಓಡುತ್ತಿದ್ದಾರೆ. ವಿಮಾನ, ಹಡಗು, ರೈಲಿನಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಲಗೇಜು ಹಿಡಿದು ಸಿಕ್ಕಸಿಕ್ಕ ವಾಹನಗಳಲ್ಲಿ ಜನ ಪ್ರಯಾಣ ಮಾಡುತ್ತಿದ್ದಾರೆ.

ತುರ್ತುಪರಿಸ್ಥಿತಿ ನಿಬಾಯಿಸಲು ವಾಯುಪಡೆ, ನೌಕಾಪಡೆ, ಭೂಪಡೆಗಳಿಗೆ ಸದಾ ಜಾಗೃತವಾಗಿರುವಂತೆ ಸರಕಾರ ಸೂಚನೆ ನೀಡಿದೆ. ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪೋಲೀಸರು ನೆರವು ನೀಡಲು ಸಜ್ಜಾಗಿದ್ದಾರೆ.

ಕಂಪನ : ಅಂಡಮಾನ್‌ ಮತ್ತು ಇಂಡೋನೇಷ್ಯಾದಲ್ಲಿ ಗುರವಾರ ಬೆಳಿಗ್ಗೆಯಿಂದ ಸರಣಿ ಲಘು ಭೂಕಂಪಗಳಾಗುತ್ತಿವೆ. ರಿಕ್ಟರ್‌ ಸ್ಕೇಲ್‌ ಪ್ರಕಾರ ಭೂಕಂಪದ ತೀವ್ರತೆ 5ರಷ್ಟಿತ್ತು ಎಂದು ವರದಿಗಳು ತಿಳಿಸಿವೆ. ಆದರೆ ಯಾವುದೇ ದೊಡ್ಡ ತೊಂದರೆ ಸಂಭವಿಸಿಲ್ಲ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+