ವರ್ಷದೊಳಗೊಂದು ಪವಾಡ : ಮಾಗೋಡಿನ ಹಸಿರು ಕ್ರಾಂತಿಯ ಕತೆ
ವರ್ಷದೊಳಗೊಂದು ಪವಾಡ : ಮಾಗೋಡಿನ ಹಸಿರು ಕ್ರಾಂತಿಯ ಕತೆ
ಅಸಾಧ್ಯಗಳನ್ನು ಸಾಧ್ಯಮಾಡಲು ನೀಡ್ಸ್ ಪಟ್ಟ ಕಷ್ಟ ಬವಣೆಗಳು ಹತ್ತಾರು
ವರ್ಷದ ಹಿಂದೆ ಇಲ್ಲಿನ 300 ಎಕರೆಗಳ ಈ ಪ್ರದೇಶ ಗೋಮಾಳವಾಗಿತ್ತು. ಸರ್ಕಾರೇತರ ಸಂಘಟನೆಯ ಶ್ರಮದ ಪರಿಣಾಮ ಮಾಗೋಡು ಎಲ್ಲರ ಗಮನವನ್ನು ಸೆಳೆದಿದೆ. ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ(ನೀಡ್ಸ್) ಈ ಗ್ರಾಮದತ್ತ ಅಂದು ಕಣ್ಣಾಡಿಸಿತು. ವಿಶ್ವಬ್ಯಾಂಕ್‌ನ ಸುಜಲ ಜಲಾನಯನ ಯೋಜನೆಯನ್ನು ನೀಡ್ಸ್ ನಿರ್ವಹಿಸಬೇಕಾಗಿತ್ತು.
ಹಸಿರು ಕ್ರಾಂತಿ : ನೀಡ್ಸ್‌ನ ಸದಸ್ಯರು ಮಾಗೋಡಿನ ವ್ಯರ್ಥವಾದ ಬಂಜರು ಭೂಮಿಯಲ್ಲಿ ಸಸಿಗಳನ್ನು ನೆಡಲು ಉತ್ಸಾಹದಿಂದ ಮುಂದಾದರು. ಈ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರ ವಿರೋಧವನ್ನು ಎದುರಿಸಬೇಕಾಯಿತು. ಗ್ರಾಮದ ಜಾನುವಾರುಗಳು ಹುಲ್ಲು ಮೇಯುತ್ತ ಸುತ್ತಾಡಲು ಅನುಕೂಲವಾಗಿದ್ದ ಈ ಭೂಮಿ ಕೈತಪ್ಪುವುದಲ್ಲ ಎನ್ನುವ ಆತಂಕ ಗ್ರಾಮಸ್ಥರಲ್ಲಿತ್ತು.
ಸಸಿಗಳ ಬೆಳವಣಿಗೆಯಿಂದ ಸಾಕಷ್ಟು ಆದಾಯ ಹಾಗೂ ಅನುಕೂಲಗಳನ್ನು ಗ್ರಾಮಸ್ಥರಿಗೆ ನೀಡ್ಸ್ ವಿವರಿಸಿತು. ವಿಶ್ವಬ್ಯಾಂಕ್‌ಗೆ ಕ್ರಿಯಾ ವರದಿ ಸಲ್ಲಿಸಬೇಕಾಗಿದೆ. ಹೀಗಾಗಿ ಸಸಿಗಳನ್ನು ನೆಡಲು ಹದಿನೈದು ಎಕರೆಗಳನ್ನು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ನೀಡ್ಸ್ ಮನವೊಲಿಸಿತ್ತು. ಮನವರಿಕೆಯಾದ ನಂತರ ಗ್ರಾಮಸ್ಥರು ಸಮ್ಮತಿಸಿದರು. ಅರಣ್ಯ ಇಲಾಖೆಯ ನೆರವು ಪಡೆದು ನೀಡ್ಸ್ ತನ್ನ ಕೆಲಸ ಪ್ರಾರಂಭಿಸಿತು.
ಸಸಿಗಳನ್ನು ಎನ್‌ಜಿಓಗಳ ಸಹಕಾರದಿಂದ ಬಂಜರು ಭೂಮಿಯಲ್ಲಿ ನೆಡಲಾಯಿತು. ನೀಡ್ಸ್ 30 ಹೆಕ್ಟೇರ್‌ನಲ್ಲಿ ಸಸಿಗಳನ್ನು ಬೆಳೆಸಿದೆ. ವಿಶ್ವಬ್ಯಾಂಕ್ ನೆರವಿನಿಂದ ಕೆರೆಗಳ ಹೂಳೆತ್ತವುದು, 26 ಮೀಟರ್ ಮಣ್ಣಿನ ತಡೆಗೋಡೆ, ಇಂಗು ಗುಂಡಿಗಳು, ಹಳೆಯ ಟ್ಯಾಂಕ್ ಗಳ ದುರಸ್ಥಿ, ಹೊಸ ಟ್ಯಾಂಕ್‌ಗಳ ನಿರ್ಮಾಣ, ಪರಿಸರ ರಕ್ಷಣೆ ಮತ್ತಿತರ ಯೋಜನೆಗಳನ್ನು ಯಶಸ್ವಿಯಾಗಿ ನೀಡ್ಸ್ ನಿಭಾಯಿಸಿದೆ.
ಸಹಕಾರ : ಗ್ರಾಮಸ್ಥರು,ಯುವಕರು ಮತ್ತು ಮಹಿಳೆಯರ ಸಹಕಾರವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲಿ ಬೆಳೆಸಲಾಗಿರುವ ಅಸಂಖ್ಯ ಗಿಡಗಳೇ ನಿದರ್ಶನ. ನಲವತ್ತು ಮಂದಿ 35 ದಿನಗಳ ಕಾಲ ವಿವಿಧ ಸಸಿಗಳನ್ನು ಇಲ್ಲಿ ನೆಡಲು ಶ್ರಮಿಸಿದ್ದಾರೆ. 2600ಕ್ಕೂ ಅಧಿಕ ವೈವಿಧ್ಯಮಯ ಸಸಿಗಳು ಇಲ್ಲಿವೆ. ಗಿಡಗಳಿಗೆ ನಿರಂತರ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನೀಡ್ಸ್ ಅಧ್ಯಕ್ಷ ಎಸ್.ಎಲ್. ಪವರ್ ಅಭಿಪ್ರಾಯಪಟ್ಟಿದ್ದಾರೆ.
(ಏಜನ್ಸಿಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications