ಯೋಜನಾ ಆಯೋಗವೆಂಬ ನಗೆಪಾಟಲಿನ ಸರಕು : ಬಿಜೆಪಿ ಕಟು ಟೀಕೆ
ಯೋಜನಾ ಆಯೋಗವೆಂಬ ನಗೆಪಾಟಲಿನ ಸರಕು : ಬಿಜೆಪಿ ಕಟು ಟೀಕೆ
ಮನಮೋಹನ್‌ಸಿಂಗ್ ಸರ್ಕಾರದ ಮೇಲೆ ಎಡಪಕ್ಷಗಳ ಸವಾರಿ..
ಎಡಪಕ್ಷಗಳ ಒತ್ತಾಯಕ್ಕೆ ಮಣಿದು ಯೋಜನಾ ಆಯೋಗದ ಸಮಾಲೋಚಕ ಗುಂಪುಗಳನ್ನು ರದ್ದುಪಡಿಸುವುದು ಹಾಗೂ ಆಯೋಗದಲ್ಲಿ ವಿದೇಶಿ ಪರಿಣಿತರಿಗೆ ಅವಕಾಶ ಮಾಡಿಕೊಡುವ ಸರ್ಕಾರದ ನಿರ್ಧಾರ ಸರಿಯಾದುದಲ್ಲ . ಈ ನಿರ್ಧಾರ ದೇಶ ಹಾಗೂ ವಿದೇಶಗಳಿಗೆ ತಪ್ಪು ಸಂದೇಶಗಳನ್ನು ನೀಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಯಡಿಯೂರಪ್ಪನವರ ಹುಟ್ಟುಹಬ್ಬ ಕಾರ್ಯಕ್ರಮದ ಸಂದರ್ಭದಲ್ಲಿ ವೆಂಕಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿಗಳು ಯೋಜನಾ ಆಯೋಗದ ಅಧ್ಯಕ್ಷರಾಗಿದ್ದು, ಸ್ವತಂತ್ರ ತೀರ್ಮಾನಗಳನ್ನು ಕೈಗೊಳ್ಳಬಹುದಾಗಿದೆ. ಆದರೆ ಪ್ರಸ್ತುತ ಆಯೋಗದ ನಡಾವಳಿಗಳು ಸರ್ಕಾರದ ಹಾಗೂ ಪ್ರಧಾನಮಂತ್ರಿಗಳ ಘನತೆಗೆ ತಕ್ಕದಾಗಿಲ್ಲ . ಪ್ರಧಾನಿಯವರ ಹಕ್ಕುಗಳ ಕುರಿತೇ ಪ್ರಶ್ನಿಸುವಂತಾಗಿದೆ. ಯೋಜನಾ ಆಯೋಗ ನಗೆಪಾಟಲಿನ ಸರಕಾಗಿದೆ ಎಂದು ವೆಂಕಯ್ಯ ಹೇಳಿದರು.
ಪ್ರಧಾನಿ ಮನಮೋಹನ್‌ಸಿಂಗ್ ಸರ್ಕಾರ ಹಲವು ಒತ್ತಡಗಳಿಗೆ ಈಡಾಗಿದೆ. ಯೋಜನಾ ಆಯೋಗದ ನಿರ್ಧಾರಗಳಿಂದಾಗಿ ಸರ್ಕಾರವನ್ನು ಎಡಪಕ್ಷಗಳು ನಿರ್ದೇಶಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ವೆಂಕಯ್ಯ ಹೇಳಿದರು.
ಯೋಜನಾ ಆಯೋಗ ವಿದೇಶಿ ಪರಿಣಿತರ ಸಲಹೆ ಪಡೆಯುವುದಕ್ಕೆ ಬಿಜೆಪಿಯ ಅಡ್ಡಿಯಿಲ್ಲ . ಆದರೆ ದಾಖಲೆಗಳನ್ನು ಹೊರಗಿನವರಿಗೆ ನೀಡುವುದಕ್ಕೆ ತಮ್ಮ ಪಕ್ಷದ ತಕರಾರಿದೆ ಎಂದು ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದರು.
ಜನಸ್ತೋಮ : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಯಡಿಯೂರಪ್ಪನವರ 61ನೇ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆಮೂಲೆಗಳಂದ ಸಾವಿರಾರು ಜನರು ಆಗಮಿಸಿದ್ದಾರೆ. ಜನರ ಜಮಾವಣೆಯಿಂದಾಗಿ ಶುಕ್ರವಾರ ಬೆಳಗ್ಗೆ ಪ್ಯಾಲೇಸ್ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು .
ಯಡಿಯೂರಪ್ಪನವರ ಹುಟ್ಟುಹಬ್ಬ ಸಮಾರಂಭದಲ್ಲಿ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದುದು ಕಾರ್ಯಕ್ರಮದ ವಿಶೇಷ. ಹುಟ್ಟುಹಬ್ಬದ ಅಂಗವಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications