ಜನತೆಗೆ ವಿಕಾಸಸೌಧ ಅರ್ಪಣೆ : ‘ವಿಕಾಸ ಸೌಧ’ ಅನ್ವರ್ಥವಾಗಲಿ
ಜನತೆಗೆ ವಿಕಾಸಸೌಧ ಅರ್ಪಣೆ : ‘ವಿಕಾಸ ಸೌಧ’ ಅನ್ವರ್ಥವಾಗಲಿ
ವಿಧಾನಸೌಧ ಕ್ಲೋನ್ಡ್ !! ಸಿಜೇರಿಯನ್ ಚಿಕಿತ್ಸೆಯಲ್ಲಿ ‘ವಿಕಾಸಸೌಧ’ ಜನನ
‘ವಿಕಾಸ ಸೌಧ’ದ ವಿಕಾಸದತ್ತ ಒಂದು ಇಣುಕು ನೋಟ: -
ಕೆಂಪೇಗೌಡನ ಬೆಂಗಳೂರಿನ ವಿಧಾನ ಸೌಧದ ತದ್ರೂಪಿ ‘ವಿಕಾಸ ಸೌಧ’ ವು ಎಸ್. ಎಂ. ಕೃಷ್ಣರ ಕಲ್ಪನೆ. ಅವರು 2000ದ ಮಾರ್ಚ್ 27ರ ತಮ್ಮ ಬಜೆಟ್ ಭಾಷಣದಲ್ಲಿ ಈ ಸೌಧದ ನಿರ್ಮಾಣದ ವಿಷಯ ಮೊದಲಿಗೆ ಪ್ರಸ್ತಾಪಿಸಿದ್ದರು. ಬಳಿಕ 2001ರಲ್ಲಿ ತಾಂತ್ರಿಕ ಮಂಜೂರು ನೀಡಲಾಗಿತ್ತು.
7.5 ಎಕರೆ ಪ್ರದೇಶದಲ್ಲಿ 58,274 ಚದರ ಮೀ ವಿಸ್ತೀರ್ಣದ ಕಟ್ಟಡ 4 ಮೇಲ್ಮಹಡಿ ಹಾಗೂ 3 ತಳ ಮಹಡಿ ಸೇರಿದಂತೆ 8 ಮಹಡಿಗಳ ಭವನ. ಸೌರ ಶಕ್ತಿ, ಮಳೆ ನೀರು ಸಂಗ್ರಹಣೆ, ಆಧುನಿಕ ಒಳಾಂಗಣ, ರಹಸ್ಯ ಮುದ್ರಣಾಲಯ, ವಾಹನ ನಿಲುಗಡೆ ವ್ಯವಸ್ಥೆ, ಸುರಕ್ಷತೆಗೆ ವಿಶೇಷ ವ್ಯವಸ್ಥೆ, 15 ಸಭಾಂಗಣಗಳು ಸೇರಿದಂತೆ ಇತರ ಅವಶ್ಯ ರಚನೆಗಳನ್ನು ಒಳಗೊಂಡಿದೆ.
ಕೇವಲ ನಾಲ್ಕು ವರ್ಷಗಳಲ್ಲೇ ಉದ್ಘಾಟನೆಗೊಂಡ ಸೌಧವನ್ನು ನಿರ್ಮಿಸಿದ ಕಾಂಟ್ರಾಕ್ಟರ್ಸ್ ‘ ಶಿರ್ಕೆ’. ಅವರಿಗೆ ನಿರ್ಮಾಣಕ್ಕೆ 36 ತಿಂಗಳ ಅವಧಿ ನೀಡಲಾಗಿತ್ತು. 77. 41 ಕೋಟಿಗೆ ಟೆಂಡರಾಗಿದ್ದ ಇದರ ನಿರ್ಮಾಣ ಕಾಮಗಾರಿ 100 ಕೋಟಿಕ್ಕಿಂತ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ. ಇಲ್ಲಿಂದ ವಿಧಾನ ಸೌಧಕ್ಕೆ ಕಾಲುದಾರಿ ಕಲ್ಪಿಸಲಾಗಿದೆ.
ಕೆಂಗಲ್ ಹನುಮಂತಯ್ಯ ನಿರ್ಮಿಸಿದ ವಿಧಾನ ಸೌಧದ ವಾಸ್ತುವಿನ ತದ್ರೂಪಿಯಾಗಿ ಮೈದಾಳಿದ ಕಟ್ಟಡ ವಿಕಾಸ ಸೌಧ. ಅಲ್ಲಿ -ಇಲ್ಲಿ ಹರಿದು ಹಂಚಿ ಹೋಗಿದ್ದ ಸರಕಾರಿ ಕಛೇರಿಗಳನ್ನು ಒಂದೆಡೆ ತರುವುದು ಹಾಗೂ ಸಚಿವಾಲಯಕ್ಕೆ ಆಧುನಿಕ ಕೊಠಡಿ ವ್ಯವಸ್ಥೆ ಕಲ್ಪಿಸುವುದು ವಿಕಾಸಸೌಧದ ಉದ್ದೇಶ. ಇನ್ನು ಸಚಿವರೊಳಗೆ ಕೊಠಡಿ ಕಚ್ಛಾಟವಿರಲಿಕ್ಕಿಲ್ಲ. ವಿಧಾನ ಸಭೆ ಸ್ವಲ್ಪ ನಿರಾಳವಾಗ ಬಹುದು. ವಿಕಾಸಸೌಧ ಕಟ್ಟಿದ ನಿವೇಶನದಲ್ಲಿ ಈ ಹಿಂದೆ ಸರಕಾರಿ ಮುದ್ರಣಾಲಯವಿತ್ತು.
ಕೆಂಗಲ್ ಹನುಮಂತಯ್ಯನವರು ಕಟ್ಟಿದ ಸೌಧ ‘ವಿಧಾನ’ಕ್ಕೆ ಸಂಬಂಧಿಸಿದ್ದು. ಕೃಷ್ಣ ಅವರ ಆಳ್ವಿಕೆ ಅವಧಿಯಲ್ಲಿ ನಿರ್ಮಿಸಲಾದ ಮರಿ ಸೌಧ ‘ವಿಕಾಸ ’ ಕ್ಕೆ ಸಂಬಂಧಿಸಿದ್ದು! ಹೊಸ ಕಟ್ಟಡ ಅನ್ವರ್ಥವಾಗಲಿ. ಭವ್ಯ ಕಟ್ಟಡದ ಹೊಸ ಕುರ್ಚಿಯಲ್ಲಿ ಕುಳಿತು ದೇಶ ಆಳುವವರು ಹೊಸ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳಲಿ ಎಂದು ದಟ್ಸ್‌ಕನ್ನಡ.ಕಾಂ ನಿರೀಕ್ಷಿಸುತ್ತದೆ.
(ಇನ್‌ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications