ಬೆಂಗಳೂರಲ್ಲಿ ‘ಒಂದು ಮಲೆನಾಡ ಸಂಜೆ’
ಬೆಂಗಳೂರಲ್ಲಿ ‘ಒಂದು ಮಲೆನಾಡ ಸಂಜೆ’
ಸುಗಮಸಂಗೀತ, ಹಾಸ್ಯ ಪ್ರಹಸನ, ಯಕ್ಷಗಾನ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳು ಒಂದರ ನಂತರ ಒಂದು, ಮಲೆನಾಡ ಸೋನೆಯಂತೆ.
ಕಳೆದ 15 ವರ್ಷಗಳಿಂದ ಮಲೆನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ‘ಕಾಳಿಂಗ ನಾವಡ ಪ್ರತಿಷ್ಠಾನ’ ಈಗ ಬೆಂಗಳೂರಿನಲ್ಲಿ ಮಲೆನಾಡನ್ನು ಅನಾವರಣಗೊಳಿಸಲಿದೆ. ಸುಗಮ ಸಂಗೀತ, ಕಿರುತೆರೆ, ಯಕ್ಷಗಾನ, ನಾಟಕ ಮುಂತಾದ ಕ್ಷೇತ್ರದಲ್ಲಿ ‘ಕಾಳಿಂಗ ನಾವಡ ಪ್ರತಿಷ್ಠಾನ’ ಕ್ರಿಯಾಶೀಲವಾಗಿದೆ.
ಬೆಂಗಳೂರಿನಲ್ಲಿ ನ.23ರ ‘ಕಾಳಿಂಗ ನಾವಡ ಪ್ರತಿಷ್ಠಾನ’ದ ಕಾರ್ಯಕ್ರಮ ಶಂಕರಪುರದ ಶಂಕರಮಠದ ಆವರಣದಲ್ಲಿರುವ ವಿದ್ಯಾವಿಹಾರ ಸಭಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ಶುರು. ಸುಗಮಸಂಗೀತ, ಹಾಸ್ಯ ಪ್ರಹಸನ, ಯಕ್ಷಗಾನ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳು ರಾತ್ರಿ 9.30ರವರೆಗೂ ಒಂದರ ನಂತರ ಒಂದು, ಮಲೆನಾಡ ಸೋನೆಯಂತೆ.
ಮಲೆನಾಡ ಸಂಜೆ ಕಾರ್ಯಕ್ರಮದ ಅಂಗವಾಗಿ ಕವಿರತ್ನ ಕಾಳಿದಾಸ ಯಕ್ಷಗಾನ ಕಾರ್ಯಕ್ರಮವನ್ನು ‘ಕಾಳಿಂಗ ನಾವಡ ಪ್ರತಿಷ್ಠಾನ’ ಪ್ರದರ್ಶಿಸಲಿದೆ. ಪ್ರತಿಷ್ಠಾನದ ಸಂಚಾಲಕ ರಮೇಶ್ ಬೇಗಾರ್ ಭಾಗವತಿಕೆಯಾಂದಿಗೆ ಯಕ್ಷಗಾನ ಪ್ರದರ್ಶನದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಮಲೆನಾಡಿನ ಆಹಾರ ಸಂಸ್ಕೃತಿಯೂ ‘ಒಂದು ಮಲೆನಾಡ ಸಂಜೆ’ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ. ಮಲೆನಾಡಿನ ಕಲಾವಿದ ಜೋಡಿ ಎಸ್.ವಿ.ಪದ್ಮನಾಭ ಹಾಗೂ ಶೃಂಗೇರಿ ಸತೀಶ್ ಅವರ ವ್ಯಂಗ್ಯ ಚಿತ್ರಗಳ ಪ್ರದರ್ಶನವೂ ಇದೆ. ಇವುಗಳೊಂದಿಗೆ- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೃಂಗೇರಿ ಶಾರದಾ ಪೀಠದ ಗೌರಿ ಶಂಕರ್ ಅವರ ಕುರಿತ ನುಡಿಚಿತ್ರ ‘ಒಂದು ಮಲೆನಾಡ ಸಂಜೆ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿದೆ.
ಬೆಂಗಳೂರಲ್ಲೇ ಕೂತು ಮಲೆನಾಡ ಪರಿಸರವನ್ನು ಆಸ್ವಾದಿಸುವ ‘ಒಂದು ಮಲೆನಾಡ ಸಂಜೆ’ಯನ್ನು ಯಾರು ತಪ್ಪಿಸಿಕೊಂಡಾರು ? ಅದು ಮಲೆನಾಡ ಸಂಜೆ ಮಾತ್ರವಲ್ಲ , ಸಹೃದಯರ ಸಂಜೆಯೂ ಹೌದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications