ಪಂಪ ಮಹಾಕವಿಯ 1100 ನೇ ಜಯಂತಿ : ಆ.16ರಿಂದ ಉತ್ಸವ
ಪಂಪ ಮಹಾಕವಿಯ 1100 ನೇ ಜಯಂತಿ : ಆ.16ರಿಂದ ಉತ್ಸವ
ವಿಧಾನಸೌಧ ಮುಂಭಾಗದಲ್ಲಿ ಪಂಪ ಮಹಾಕವಿ ಪ್ರತಿಮೆ ಸ್ಥಾಪನೆಗೆ ಆಗ್ರಹ
ಪಂಪ ಮಹಾಕವಿಯ 1100ನೇ ಜಯಂತಿ ಉತ್ಸವದ ಅಂಗವಾಗಿ ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಹಾವೀರ ಮಿಷನ್ ಏರ್ಪಡಿಸಿರುವ ಈ ಕವಿ ಉತ್ಸವವನ್ನು , ಆ.16ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಟಿ.ಎನ್.ಚತುರ್ವೇದಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಮಹಾಕವಿ ಪಂಪ ಎನ್ನುವ ಗ್ರಂಥವನ್ನು ರಾಜ್ಯಪಾಲರು ಬಿಡುಗಡೆ ಮಾಡುವರು.
ಖ್ಯಾತ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಕವಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ಕವಿ ವಿಭೂತಿಗೆ ನಮನ ಎನ್ನುವ ವಿಶೇಷ ಕವಿಗೋಷ್ಠಿ ನಡೆಯುವುದು.
ಪಂಪ ಪ್ರಶಸ್ತಿ ಪುರಸ್ಕೃತರಾದ ಡಾ.ಜಿ.ಎಸ್.ಶಿವರುದ್ರಪ್ಪ , ಡಾ.ಎಂ.ಚಿದಾನಂದಮೂರ್ತಿ ಹಾಗೂ ಜೈನ ವಿದ್ವಾಂಸ ಡಾ.ಹೊ.ಶ್ರೀ.ಮದನಕೇಸರಿ ಅವರನ್ನು ಪಂಪ ಜಯಂತಿ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಪ್ರತಿಮೆ ಸ್ಥಾಪನೆಗೆ ಆಗ್ರಹ : ಪಂಪ ಮಹಾಕವಿಯ 1100 ನೇ ಜಯಂತಿ ಸಂದರ್ಭದಲ್ಲಿ ವಿಧಾನಸೌಧ ಅಥವಾ ಕನ್ನಡ ಭವನದ ಮುಂಭಾಗದಲ್ಲಿ ಪಂಪ ಕವಿಯ ಪ್ರತಿಮೆ ಸ್ಥಾಪಿಸುವಂತೆ ಮಹಾವೀರ ಮಿಷನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications