• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುಕುಲ ಪರಂಪರೆಯ ಪುನರುತ್ಥಾನ

By Staff
|

ಗುರುಕುಲ ಪರಂಪರೆಯ ಪುನರುತ್ಥಾನ

ಕನಕಪುರದಿಂದ ಅರ್ಧ ತಾಸಿನ ಹಾದಿಯಲ್ಲಿ ಸಿಗುವ ಓಂ ಶಾಂತಿಧಾಮದಲ್ಲಿ ಗುರುಕುಲ ರೀತಿಯ ಅಪರೂಪದ ಶಿಕ್ಷಣ ದಾಸೋಹ. ವೇದ ಪಠಿಸುವ ವಟು ಇಲ್ಲಿ ಕಂಪ್ಯೂಟರ್‌ ಮೌಸನ್ನೂ ಹಿಡಿಯುತ್ತಾನೆ.

*ದಟ್ಸ್‌ಕನ್ನಡ ಬ್ಯೂರೋ

ಬೆಂಗಳೂರಿನಿಂದ 93 ಕಿ.ಮೀ. ದೂರದಲ್ಲಿ ಕಾವೇರಿ- ಅರ್ಕಾವತಿ ಸಂಗಮದ ಹಸಿರು ಹಾಸಿನ ಸುಂದರ ತಾಣ. ಬಗಲಲ್ಲೇ ಕಾವೇರಿ ಕಲರವ. ಅಲ್ಲಿ ವೇದ ಘೋಷ. ಬಿಳಿ ಧೋತಿ- ವಸ್ತ್ರ ತೊಟ್ಟ ಪುಟ್ಟ ಮಕ್ಕಳು ಲಯಬದ್ಧವಾಗಿ ಸಂಸ್ಕೃತ ಉಚ್ಚರಿಸುತ್ತಾರೆ. ಎದುರಿಗೆ ಪದ್ಮಾಸನ ಹಾಕಿ ಕುಳಿತು ಬೋಧಿಸುತ್ತಿರುವ ಗುರು.

ಕಾರ್ಪೊರೇಟ್‌ ತಿಕ್ಕಾಟದ ವಾತಾವರಣದಲ್ಲಿ ಶಾಂತಿಯ ಹುಡುಕಿಕೊಂಡು ಹೋಗುವ ಯಾರೇ ಆಗಲಿ, ಈ ಜಾಗದಲ್ಲಿ ಕೂತರೆ ಕಿವಿಮೇಲೆ ಬೀಳುವ ಮಂತ್ರಗಳು ಮಂತ್ರಮುಗ್ಧರನ್ನಾಗಿಸುವುದು ದಿಟ. ಅದು ಶಾಂತಿಧಾಮ. ಅಲ್ಲಿ ಗುರುಕುಲ ರೀತಿಯ ಶಿಕ್ಷಣ ಜೀವಂತ. ಜನಜಂಗುಳಿಯಿಂದ ದೂರ ಹೋಗಿ ಹಸಿರು ಹೊನ್ನು ಹಾಸ ಮೇಲೆ ಕುಳಿತು ಮುಗಿಲೆತ್ತರಕ್ಕೆ ತಲುಪುವಂತೆ ಶಾಂತಿಃ...ಶಾಂತಿಃ... ಶಾಂತಿಃ ಎಂದು ಮಕ್ಕಳು ಹೇಳುವ ಪರಿಯೇ ಸೊಗಸು.

Guru and Shishyas in Shantidhamaದೆಹಲಿಯ ರಾಷ್ಟ್ರೀಯ ಮುಕ್ತ ವಿದ್ಯಾಲಯ ಗೊತ್ತುಪಡಿಸಿದ ಸಾಮಾನ್ಯ ಶಿಕ್ಷಣ ಪಠ್ಯಕ್ರಮದ ಜೊತೆಗೆ ಚತುರ್ವೇದಾಧ್ಯಯನ- ವೇದಾಂಗಗಳು, ಯೋಗ ಕಲಿಕೆ ಇಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಕಾಲದ ಜೊತೆಗೆ ಮಕ್ಕಳ ಬುದ್ಧಿಯ ಸಾಣೆಗೊಡ್ಡಲು ಕಂಪ್ಯೂಟರ್‌ ಶಿಕ್ಷಣವೂ ಉಂಟು. ಗೋವಿಗೆ ಹುಲ್ಲು ತಿನ್ನಿಸಿ ಮೈದಡುವುವ ಹುಡುಗ ಬೇಕಾದ ಆಟವನ್ನೂ ಆಡಬಹುದು. ಇಷ್ಟೆಲ್ಲ ಮಾಡಲು ನಿಮ್ಮ ಮಗು ಮನೆಯನ್ನು ತೊರೆದು ಕ್ಷೇತ್ರದಲ್ಲೇ ಇದ್ದುಕೊಂಡು ವಿದ್ಯಾರ್ಜನೆ ಮಾಡಬೇಕು. ವಯಸ್ಸು 9-10 ವರ್ಷಗಳಿಗೆ ಮೀರಿರಬಾರದು. ಮುಖ್ಯವಾಗಿ ವಿದ್ಯೆ, ವಸತಿ, ಸಾತ್ವಿಕ ಆಹಾರ ಎಲ್ಲವೂ ಇಲ್ಲಿ ಉಚಿತ ! ಕಲಿಯುವ ಆಸಕ್ತಿ ಮತ್ತು ಸೂಕ್ತ ಮನೋಭಾವ ಇರುವ ಎಲ್ಲರಿಗೂ ಶಾಂತಿಧಾಮ ಸ್ವಾಗತ ಕೋರುತ್ತದೆ. ಶಾಂತಿಧಾಮದಲ್ಲಿ ಜಾತಿ ಮತಗಳ ಭೇದವಿಲ್ಲ . ಇದು ಸರ್ವ ಜನಾಂಗದ ಶಾಂತಿಯ ತೋಟ.

ಇದು ಪಾಠ ಪ್ರವಚನಗಳಿಗಷ್ಟೇ ಸೀಮಿತವಾದ ಶಾಲೆಯಲ್ಲ . ವೈದ್ಯಕೀಯ, ಆಧ್ಯಾತ್ಮಿಕ ಮತ್ತು ಅನ್ಯ ಸಾಮಾಜಿಕ ಸೇವೆಗಳಲ್ಲಿ ವಿವಿಧೋದ್ದೇಶ ಯೋಜನೆಗಳನ್ನು ಹಮ್ಮಿಕೊಂಡಿರುವ ಅನನ್ಯ ವಿಶ್ವ ವೈದಿಕ ಯೋಜನೆಯಿದು.

Recipient enjoying time with cattleಭಾರತದ ಸಾಂಸ್ಕೃತಿಕ ಬೇರುಗಳು ಸಡಿಲವಾಗುತ್ತಿರುವ ಈ ದಿನಗಳಲ್ಲಿ ಸನಾತನ ಧರ್ಮದ ಪುನರುತ್ಥಾನದ ಕೈಂಕರ್ಯಕ್ಕೆ ಪಣ ತೊಟ್ಟ ಕೆಲವು ಸಮಾನ ಮನಸ್ಕರು 1991ರಲ್ಲಿ ಹುಟ್ಟುಹಾಕಿದ್ದು ವಿಶ್ವ ಮಂಡಳಿ ಟ್ರಸ್ಟ್‌. ಅದು ನೋಂದಾವಣೆ ಮಾಡಿಕೊಂಡು ಶಾಂತಿಧಾಮ ಎಂದು ಹೆಸರಾಯಿತು.

ಚತುರಾಶ್ರಮಗಳ ಬ್ರಹ್ಮಚರ್ಯ, ಸನ್ಯಾಸ- ಸಾಧಕರಿಗೆ ನೆರವೀಯುವ ಮೂಲಭೂತ ಸೌಕರ್ಯ ಕಲ್ಪಿಸಿ ಪರಿಸರ ಅಭಿವೃದ್ಧಿಪಡಿಸುವುದು, ಪ್ರಕೃತಿ ಚಿಕಿತ್ಸೆ, ಆಧ್ಯಾತ್ಮ, ಯುವವಿಕಾಸ, ಆರೋಗ್ಯ, ರಜಾಕಾಲದ ಪಠ್ಯೇತರ ಚಟುವಟಿಕೆಗಳು, ಚಿಣ್ಣರಿಂದ ವಯೋವೃದ್ಧರವರೆಗೆ ವಿವಿಧ ರೀತಿಯ ತರಪೇತಿಗಳು, ವೈದ್ಯಕೀಯ ಸಲಹೆ, ಚಿಕಿತ್ಸೆ ಮತ್ತು ಔಷಧಿ ವಿತರಣೆ- ಇವು ಶಾಂತಿಧಾಮದ ವಿಶಾಲ ಯೋಜನೆಯ ವ್ಯಾಪ್ತಿ. ಇದಲ್ಲದೆ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ರಮಗಳನ್ನೂ ಸಂಸ್ಥೆ ಹಮ್ಮಿಕೊಳ್ಳುತ್ತಿದೆ.

ಮಕ್ಕಳಿಗಷ್ಟೇ ಅಲ್ಲ

E- Learning with Veda seekingಸಾರ್ವಜನಿಕರಿಗೂ ವೇದಗಳ ಕುರಿತ ಅಲ್ಪಾವಧಿ ತರಗತಿಗಳನ್ನು ಶಾಂತಿಧಾಮ ವಿನ್ಯಾಸ ಮಾಡಿದೆ. ಕಲಿಯುವವರಿಗೆ ಆಸಕ್ತಿ ಮುಖ್ಯ. ವಯಸ್ಸಿನ ನಿರ್ಬಂಧ ಇಲ್ಲ. ವಾನಪ್ರಸ್ಥಿಗಳಾಗಿ ಇಲ್ಲಿಯೇ ತಂಗುವವರಿಗೆ ಸಾತ್ವಿಕ ಆಹಾರ, ಕುಟೀರ, ತುರ್ತು ಮದ್ದು ನೀಡುವಿಕೆ ಮೊದಲಾದ ಸವಲತ್ತನ್ನೂ ಕಲ್ಪಿಸಲಾಗುತ್ತಿದೆ. ಗುರುಕುಲದಲ್ಲಿ ಸೇವೆ ಸಲ್ಲಿಸುವ ಮೂಲಕ ವಾನಪ್ರಸ್ತಿಗಳು ತಮ್ಮ ಅನುಭವವನ್ನು ಧಾರೆ ಎರೆಯಬಹುದು.

ವಾಟಿಕಾವನ

ಪ್ರತಿನಿತ್ಯ ಶಾಂತಿಧಾಮಕ್ಕೆ ಬರುವ ರೋಗಿಗಳು ಮತ್ತು ಸಂದರ್ಶಕರಿಗೆ ಹಣ್ಣು ಕೊಟ್ಟು ಕಳಿಸಬೇಕೆಂಬುದು ಧಾಮದ ಕನಸು. ಆ ಕಾರಣಕ್ಕೇ ಅತ್ಯಾಧುನಿಕ ವೈಜ್ಞಾನಿಕ ರೀತಿಯಲ್ಲಿ ಹತ್ತು ಎಕರೆ ಜಾಗೆಯಲ್ಲಿ ವಾಟಿಕಾವನ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

ಆರೋಗ್ಯ ಸೇವೆ

ಶಾಂತಿಧಾಮದ ಸುತ್ತಮುತ್ತಲ 21 ಹಳ್ಳಿಗಳ 17 ಸಾವಿರ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸುವುದು ಸಂಸ್ಥೆ ಮಾಡುತ್ತಿರುವ ಶ್ಲಾಘನೀಯ ಕೆಲಸಗಳಲ್ಲೊಂದು. ಸಂಚಾರಿ ಔಷಧಾಲಯವನ್ನೂ ಇಟ್ಟುಕೊಂಡಿರುವ ಶಾಂತಿಧಾಮ ಒಂದು ಸಣ್ಣ ಪ್ರಯೋಗಾಲಯ, 5-6 ಒಳರೋಗಿಗಳು ವಿರಮಿಸಬಹುದಾದ ಕೋಣೆಯ ವ್ಯವಸ್ಥೆ ಮಾಡಿಕೊಂಡಿದೆ. ಪೂರ್ಣಾವಧಿ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಸಣ್ಣ ಚಿಕಿತ್ಸಾ ಘಟಕ ಇದೆ.

ಇತ್ತೀಚೆಗೆ ಕರ್ನಾಟಕದ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಶಾಂತಿಧಾಮದ ಹೊಸ ಕಟ್ಟಡ ಉದ್ಘಾಟಿಸಿ, ಸಾಮವೇದ ಭವನದ ನಿರ್ಮಾಣಕ್ಕೆ ಕೆಸರು ಕಲ್ಲು ಹಾಕಿದರು. ಹಸಿರ ಪರಿಸರದ ಗುರು- ಶಿಷ್ಯ ಪರಂಪರೆಯನ್ನು ಬಾಯಿತುಂಬಾ ಹೊಗಳಿದರು.

ಸಂಸ್ಥೆಯ ಇಚ್ಛಾಶಕ್ತಿ, ಉಮೇದಿ ದೊಡ್ಡದಿದೆ. ದೊಡ್ಡ ಹಳ್ಳಕ್ಕೆ ಸೇರಬೇಕಾದ ಹನಿಗಳೂ ಸಾಕಷ್ಟು. ಆ ಹನಿ ನೀವೂ ಆಗಬಹುದು. ಶಾಂತಿಧಾಮಕ್ಕೆ ಸ್ವಯಂ ಸೇವಕ, ಮಾರ್ಗದರ್ಶಕ, ದಾನಿ- ಏನು ಬೇಕಾದರೂ ಆಗಬಹುದು. ಹಣ ಕೊಡುವ ಮನಸ್ಸಿದ್ದರೆ ಓಂ ಶಾಂತಿಧಾಮ, ಬೆಂಗಳೂರು ಹೆಸರಿಗೆ ಚೆಕ್‌ ಅಥವಾ ಡಿಡಿ ಕಳಿಸಿ. ಆದಾಯಕರ ಕಾಯಿದೆ ಸಾಕ್ಷನ್‌ 80ಜಿ ಅಡಿಯಲ್ಲಿ ದೇಣಿಗೆಗೆ ವಿನಾಯಿತಿಯೂ ಇದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-

ಓಂ ಶಾಂತಿಧಾಮ, ಆಡಳಿತ ಕಚೇರಿ,

2ನೇ ಮುಖ್ಯರಸ್ತೆ, ಶಾಸ್ತ್ರಿ ನಗರ,

ಕೆ.ಆರ್‌.ರಸ್ತೆ, ಬೆಂಗಳೂರು- 560 028.

ದೂರವಾಣಿ ಸಂಖ್ಯೆ- 6765328, 6761057

ಇ- ಮೇಲ್‌ : shantidhm@bgl.vsnl.net.in

ಒಂದು ಭಾನುವಾರ ಶಾಂತಿಧಾಮವನ್ನು ನೋಡಿಕೊಂಡು ಬನ್ನಿ. ಅದಕ್ಕೆ ವಾಹನದ ವ್ಯವಸ್ಥೆ ಬೇಕಾದರೆ ಆಡಳಿತ ಕಚೇರಿಯವರು ಮಾಡಿಕೊಡುತ್ತಾರೆ. ನೋಡಿ- www.omshantidhama.org.

ಶಾಂತಿಧಾಮದ ಕೆಲಸಗಳ ಬಗ್ಗೆ ನಿಮಗೇನನ್ನಿಸುತ್ತದೆ ?

ಪೂರಕ ಓದಿಗೆ-

ಪ್ರಾಚೀನ ಗುರುಕುಲಗಳು ಹೇಗಿದ್ದವು?

ಮಲೆನಾಡ ಮಡಿಲಲ್ಲಿ ಗುರುಕುಲ ಪದ್ಧತಿಯ ಎರಡು ಪ್ರಯೋಗ

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more