ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಸುರಿದ ಒಂದಿಷ್ಟು ಮಳೆ ಆಟಕ್ಕುಂಟು ಲೆಕ್ಕಕ್ಕಿಲ್ಲವಲ್ಲ !

By Staff
|
Google Oneindia Kannada News

ರಾಜ್ಯದಲ್ಲಿ ಸುರಿದ ಒಂದಿಷ್ಟು ಮಳೆ ಆಟಕ್ಕುಂಟು ಲೆಕ್ಕಕ್ಕಿಲ್ಲವಲ್ಲ !
ಸದ್ಯದಲ್ಲೇ ರಾಜ್ಯಾದ್ಯಂತ ಲೋಡ್‌ಶೆಡ್ಡಿಂಗ್‌

*ದಟ್ಸ್‌ಕನ್ನಡ ಬ್ಯೂರೊ

ರಾಜ್ಯದಲ್ಲಿ ಮಳೆಗಾಲ ಶಾಸ್ತ್ರಕ್ಕಿಷ್ಟು ಎಂಬಂತೆ ಬಂದಿದ್ದರೂ, ರೈತನೊಬ್ಬ ತೃಪ್ತಿಪಡುವಷ್ಟು ಸುರಿಯುವ ಕೃಪೆ ತೋರಲಿಲ್ಲ. ಹೋಮ ಹವನ, ಪೂಜೆ ಪ್ರಾರ್ಥನೆಗಳಿಗೇನೋ ಎಂಬಂತೆ ಪ್ರಸಾದ ರೂಪದಲ್ಲಿ ಮಳೆ ಸುರಿಯುತ್ತಿದೆಯೇ ಹೊರತು ನೀರಾವರಿಗೆಗೆ ಬೇಕಾದಷ್ಟು, ಹೊಲಗದ್ದೆಗೆ ಅನುಕೂಲವಾಗುವಂತೆ ಮಳೆ ಬಂದಿಲ್ಲ. ಜೋಗ ಮೈದುಂಬಿಯೇ ಇಲ್ಲ. ಒಣ ಬಂಡೆಯ ಮೇಲೆ ಒಂದಿಷ್ಟು ನೀರು ಹರಿಯುತ್ತಿದೆ. ರುದ್ರರಮಣೀಯ ದೃಶ್ಯ ಜೋಗದಲ್ಲಿಲ್ಲ. ಕೆಆರ್‌ಎಸ್‌ನಲ್ಲಿ ಕೂಡ ನೀರು ಹರಿಯುತ್ತಿದೆ. ಆದರೆ ಯಥೇಷ್ಟ ಎಂಬ ಪದಕ್ಕೆ ಅಲ್ಲಿ ಅರ್ಥವಿಲ್ಲ.

ರಾಜ್ಯದಲ್ಲಿ ಕುಡಿಯುವ ನೀರಿಗೋಸ್ಕರ ಯೋಜನೆಗಳು, ಹೊಸ ಕ್ರಮಗಳ ಬಗ್ಗೆ ಆಗ್ರಹಗಳು ಕೇಳಿ ಬರುತ್ತಲೇ ಇವೆ. ಈ ನಡುವೆ ತಮಿಳುನಾಡು ಸರಕಾರ ಸುಪ್ರಿಂ ಕೋರ್ಟ್‌ನಲ್ಲಿ ತಗಾದೆ ಶುರು ಮಾಡಿದೆ. ರಾಜ್ಯದಲ್ಲಿ ಕಾವೇರಿಗಡ್ಡವಾಗಿ ಹೊಸ ನೀರಾವರಿ ಯೋಜನೆಗಳನ್ನು ಶುರು ಮಾಡಬಾರದು ಎನ್ನುವುದು ತಮಿಳುನಾಡಿನ ಆಗ್ರಹ. ಈ ಆಗ್ರಹವನ್ನು ರಾಜ್ಯ ಸರಕಾರ ಪ್ರತಿಭಟಿಸುವ ಬದಲಾಗಿ ಹಳೇ ಯೋಜನೆಗಳನ್ನೇ ಮುಂದುವರೆಸುತ್ತಿದ್ದೇವೆಯೇ ಹೊರತು ಹೊಸ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಿದೆ. ರಾಜ್ಯದಲ್ಲಿ ತುಸು ನೀರು ತುಂಬಿಕೊಂಡು ಹರಿಯುತ್ತಿರುವ ಕಾವೇರಿಗಡ್ಡ ಹೊಸ ನೀರಾವರಿ ಯೋಜನೆಯನ್ನು ನಿರ್ಮಿಸುವ ಹಕ್ಕೂ ರಾಜ್ಯಕ್ಕಿಲ್ಲ ಎಂದಂತಾಯಿತು.

ನೀರ ಮಾತು

ರಾಣಿ ಬೆನ್ನೂರಿನಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಮಳೆ ನೀರು ಸಂಗ್ರಹ ಯೋಜನೆಯನ್ನು ಸರಕಾರ ಕೈಗೆತ್ತಿಕೊಳ್ಳಲಿದೆ. ಇಲ್ಲಿನ ಗ್ರಾಮ ಪಂಚಾಯತ್‌ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಗ್ರಾಮೀಣ ನೀರು ಸರಬರಾಜು ಸಚಿವ ಕೆ.ಬಿ.ಕೋಳಿವಾಡ ಈ ಭರವಸೆ ನೀಡಿದ್ದಾರೆ. ಆದರೆ ಈ ಯೋಜನೆಯ ರೂಪು ರೇಷೆಗಳಿನ್ನೂ ಸಚಿವರಲ್ಲಿ ಸ್ಪಷ್ಟವಿಲ್ಲದೇ ಇರುವುದರಿಂದ ಕಾಮಗಾರಿಗಳು ಯಾವಾಗ ಆರಂಭವಾಗುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕನಿಷ್ಠ ಮುಂದಿನ ಮಳೆಗಾಲದಲ್ಲಾದರೂ ಮಳೆ ನೀರು ಸಂಗ್ರಹ ಎಂಬ ಯೋಜನೆ ಅರ್ಥ ಪೂರ್ಣವಾಗಿ ಜಾರಿಯಾಗಬಹುದು.

ಈ ನಡುವೆ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ಮತ್ತೆ ಲೋಡ್‌ ಶೆಡ್ಡಿಂಗ್‌ ಶುರುವಾಗಲಿದೆ. ಇನ್ನೆರಡು ವಾರದಲ್ಲಿ ಒನಕೆ ಧಾರೆ ಮಳೆ ಬಂದು ಎಲ್ಲ ಜಲಾನಯನ ಪ್ರದೇಶಗಳಲ್ಲಿ ನೀರು ಯದ್ವಾ ತದ್ವಾ ಹರಿದರೆ ಮಾತ್ರ ಸಾಕಷ್ಟು ವಿದ್ಯುತ್‌ ಪ್ರವಹಿಸಬಹುದು. ಆ ಬಗೆಗಿನ ನಂಬಿಕೆ ಹೊರಟು ಹೋಗಿರುವುದರಿಂದ ಜನ ಲೋಡ್‌ಶೆಡ್ಡಿಂಗ್‌ ಎದುರಿಸಲು ರೆಡಿಯಾಗುವುದಷ್ಟೇ ಉಳಿದ ದಾರಿ.

ಚಿತ್ತಾಪುರ ತಾಲ್ಲೂಕಿನಲ್ಲಿ ಬೆಣ್ಣೆ ತೊರೆ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರು ತಮಗೆ ಪರಿಹಾರ ನೀಡಬೇಕು ಎಂದು ಜು. 26ರ ಶನಿವಾರ ಪ್ರತಿಭಟನೆ ನಡೆಸಿದರು. ಸುಮಾರು 2, 400 ಎಕರೆ ಜಾಗವನ್ನು ಬೆಣ್ಣೆ ತೊರೆ ಎಡದಂಡೆ ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಿರಾಶ್ರಿತರಾಗಿರುವ ರೈತರು ತಮಗೆ ಸೂಕ್ತ ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಕೊನೆಯದಾಗಿ- ದೇವರೆ, ಈ ಸರಕಾರಕ್ಕೆ ಮರ ನೆಡುವ, ಕನಿಷ್ಠ ಇರುವ ಮರಗಳನ್ನು ಕಡಿಯದೇ ಇರುವ ಬುದ್ಧಿ ಕೊಡು. ಎಲ್ಲ ತಪ್ಪನ್ನೂ ಮನ್ನಿಸಿ ಮಳೆಯೇ ಇಳಿದು ಬಾ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X