ಹಿಪ್ಪರಗಿ ಅಣೆಕಟ್ಟು ಮೋಕ್ಷಕ್ಕಾಗಿ ಅಥಣಿ ನಿವಾಸಿಗಳ ಪ್ರತಿಭಟನೆ
ಹಿಪ್ಪರಗಿ ಅಣೆಕಟ್ಟು ಮೋಕ್ಷಕ್ಕಾಗಿ ಅಥಣಿ ನಿವಾಸಿಗಳ ಪ್ರತಿಭಟನೆ
30 ವರ್ಷಗಳ ಕಾಮಗಾರಿ ಈ ವರ್ಷವಾದರೂ ಮುಗಿಯುತ್ತಾ ?
ಅಥಣಿ ತಾಲ್ಲೂಕಿನ ನಿವಾಸಿಗಳು ಎಸ್ಸೆಂ.ಕೃಷ್ಣ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಯಾಕೆಂದರೆ ಅಥಣಿ ತಾಲ್ಲೂಕಿಗೆ ಸಮೃದ್ಧ ಕುಡಿಯುವ ನೀರು ಒದಗಿಸುವ ಹಿಪ್ಪರಗಿ ಅಣೆಕಟ್ಟು ಕಾಮಗಾರಿಯನ್ನು ಸರಕಾರ ಪೂರ್ತಿಗೊಳಿಸುತ್ತಿಲ್ಲ.
ಹಿಪ್ಪರಗಿ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಶುರು ಹಚ್ಚಿಕೊಂಡು ಆಗಲೇ 30 ವರ್ಷಗಳು ಕಳೆದವು. ಅಣೆಕಟ್ಟು ಕಾರ್ಯ ಪೂರ್ತಿಯಾಗಿದ್ದರೂ ಆಣೆಗೆ ಮುಖ್ಯವಾದ ಗೇಟುಗಳನ್ನೇ ಅಳವಡಿಸಲಾಗಿಲ್ಲ. ಈ ಅಣೆಕಟ್ಟಿಗಾಗಿ ಈಗಾಗಲೇ 54 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ಆಣೆಕಟ್ಟಿಗೆ ಅಂತ ಆರಂಭದಲ್ಲಿ ತೆಗೆದಿರಿಸಲಾಗಿರುವ ಹಣ 950 ಕೋಟಿ ರೂಪಾಯಿ.
ಇತ್ತೀಚೆಗೆ ಬರ ಪರಿಹಾರಕ್ಕಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದ ರಾಜಕಾರಣಿಗಳ ಪೈಕಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹಿಪ್ಪರಗಿ ಡ್ಯಾಮ್‌ಗೆ ಡಿಸೆಂಬರ್ ಅಂತ್ಯದೊಳಗೆ ಗೇಟು ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಆದರೆ ಕೃಷ್ಣಾ ನದಿ ನೀರು ತಳ ಸೇರುವ ಮುನ್ನವೇ ಅಣೆಕಟ್ಟಿಗೆ ಗೇಟು ಅಳವಡಿಸಿದರೆ ಅಥಣಿಯ ಜನರಿಗೆ ಒಂದಿಷ್ಟು ಪ್ರಯೋಜನವಾಗುತ್ತದೆ.
ಈ ಬಾರಿ ಕೃಷ್ಣಾ ನದಿ ನೀರು ಇಂಗಿ ಹೋಗಿದ್ದ ಸಂದರ್ಭದಲ್ಲಿ ಅಥಣಿಯ ಜನರು ಮಹಾರಾಷ್ಟ್ರದ ಕೋಯ್ನಾ ಮತ್ತು ಕಲಮ್‌ವಾಡಿ ಅಣೆಕಟ್ಟಿನಿಂದ ನೀರು ಬಿಡುವಂತೆ ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಿದ್ದರು. ಪ್ರತಿಭಟನೆಗಳು, ರ್ಯಾಲಿಗಳು ನಡೆದಿದ್ದವು.
ಈಗ ಅಥಣಿಯವರು ಎಸ್ಸೆಂ. ಕೃಷ್ಣ ಸರಕಾರದ ವಿರುದ್ಧ ಪ್ರತಿಭಟನೆಯನ್ನು ತೊಡಗಿದ್ದಾರೆ.
ಹಿಪ್ಪರಗಿ ಡ್ಯಾಮ್‌ಗೆ ಬೇಗನೇ ಮೋಕ್ಷ ಸಿಗಲಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications