ರಾಜಕೀಯ ರಂಗಿನ ನಡುವೆ ಒಕ್ಕಲಿಗರ ಸಂಘದ ಚುನಾವಣೆ

ರಾಜಕೀಯ ರಂಗಿನ ನಡುವೆ ಒಕ್ಕಲಿಗರ ಸಂಘದ ಚುನಾವಣೆ
ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ. ಜುಲೈ 13 ರ ಭಾನುವಾರ ಸಂಘದ ಚುನಾವಣೆ. ಈ ಸಂದರ್ಭದಲ್ಲಿ ಚುನಾವಣಾ ರಂಗಿನ ಕುರಿತೊಂದು ವರದಿ.

ಬೆಂಗಳೂರು : ವಿವಿಧ ರಾಜಕೀಯ ಪಕ್ಷಗಳ ಪರೋಕ್ಷ ಬೆಂಬಲದಿಂದಾಗಿ ಒಕ್ಕಲಿಗರ ಸಂಘದ ಚುನಾವಣೆಗೆ ರಂಗು ಬಂದಿದೆ.

49 ಸಾವಿರ ಸದಸ್ಯರನ್ನು ಹೊಂದಿರುವ ಸಂಘಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಣ, ಚಿನ್ನದ ಉಂಗುರ ಹಂಚಿಕೆಯಾಗುತ್ತಿದ್ದು , ಗುಂಡು ಪಾರ್ಟಿಗಳು ಎಗ್ಗಿಲ್ಲದೆ ಸಾಗಿವೆ. ಈ ಬಾರಿ ಸ್ಥಾನಾಕಾಂಕ್ಷಿಗಳ ಸಂಖ್ಯೆಯೂ ಏರಿದೆಯಲ್ಲದೆ, ಅಧಿಕಾರ ದಕ್ಕಿಸಿಕೊಳ್ಳಲು ಇನ್ನಿಲ್ಲದ ಹಣಾಹಣಿ ಕಂಡು ಬಂದಿದೆ.

ಬಹುತೇಕ ಹಳೇ ಮೈಸೂರು ಭಾಗದ ಸದಸ್ಯರನ್ನು ಹೊಂದಿರುವ ಸಂಘದ ಒಟ್ಟು 35 ಸ್ಥಾನಗಳಿಗೆ 133 ಮಂದಿ ಕಣಕ್ಕಿಳಿದಿದ್ದು , ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಹದಿನೈದು ಸ್ಥಾನಗಳು ಮೀಸಲು. ಇದಕ್ಕೆ 68 ಮಂದಿ ನಡುವೆ ಪೈಪೋಟಿ ಏರ್ಪಟ್ಟಿದೆ. ಉಳಿದ ಜಿಲ್ಲೆಗಳ 20 ಸ್ಥಾನಗಳಿಗೆ 60 ಮಂದಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ನಾಲ್ಕು ಪ್ರಮುಖ ಗುಂಪುಗಳು ಚುನಾವಣಾ ಕಣದಲ್ಲಿವೆ. ಹಾಲಿ ಅಧ್ಯಕ್ಷ ಡಾ.ಸಿ.ವಿಠಲ್‌, ಮಾಜಿ ಸಂಸದ ಪ್ರೊ.ಕೆ.ವೆಂಕಟಗಿರಿಗೌಡ, ಹಾಲಿ ಸದಸ್ಯ ಕೆಂಚಪ್ಪಗೌಡ ಹಾಗೂ ಪ್ರೊ.ಮಲ್ಲಯ್ಯ ಗುಂಪಿನ ನಡುವೆ ಹಣಾಹಣಿ ಏರ್ಪಟ್ಟಿದೆ. ನಿರ್ದಿಷ್ಟ ಪಕ್ಷಾಧಾರಿತ ಗುಂಪು ಕಾಣುತ್ತಿಲ್ಲ .

ವಿಧಾನ ಪರಿಷತ್‌ನ ಹಾಲಿ ಸದಸ್ಯ ಪುಟ್ಟಣ್ಣ , ಶಾಸಕ ಬಿ.ಎನ್‌.ಬಚ್ಚೇಗೌಡರ ಸಹೋದರ ಬಿ.ಎನ್‌.ಗೋಪಾಲಗೌಡ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಖ್ಯಾತ ನ್ಯಾಯವಾದಿ ಸಿ.ಎಚ್‌.ಹನುಮಂತರಾಯರ ಶಿಷ್ಯ ಎ.ಪಿ.ರಂಗನಾಥ್‌, ಸಚಿವ ಡಿ.ಕೆ.ಶಿವಕುಮಾರ್‌ ಬೆಂಬಲಿಗ ರಮೇಶ್‌, ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನಾರಾಯಣಗೌಡ- ಹೀಗೆ ರಾಜಕೀಯ ನಂಟಿನ ಅಭ್ಯರ್ಥಿಗಳ ದಂಡೇ ಕಣದಲ್ಲಿದೆ.

ಹತ್ತಾರು ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಒಕ್ಕಲಿಗರ ಸಂಘದ ಕೆಲವು ಪದಾಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ವೃತ್ತಿ ಶಿಕ್ಷಣ ಸೀಟು ಮಾರಾಟ ದಂಧೆ ರೂಢಿಸಿಕೊಂಡಿದ್ದಾರೆ.

ಸಮುದಾಯದ ಹೆಮ್ಮೆಯ ಸಂಕೇತವಾಗಿದ್ದ ಒಕ್ಕಲಿಗರ ಸಂಘ ಕೆಲವು ವರ್ಷಗಳಿಂದ ಈಚೆಗೆ ಸಮುದಾಯದ ಹಿತರಕ್ಷಣೆಯಿಂದ ದೂರ ಸರಿದ ಆರೋಪ ಎದುರಿಸುತ್ತಿದೆ. ಹೀಗಾಗಿ ಕೆಲವು ಹಳಬರ ಬಗ್ಗೆ ಮತದಾರರಲ್ಲಿ ಅಸಮಾಧಾನ ಉಂಟಾಗಿದೆ. ಹೀಗಾಗಿ ಹೊಸ ಮುಖಗಳಿಗೆ ಅದರಲ್ಲೂ ಯುವಕರ ಕೈಗೆ ಸಂಘವನ್ನು ಕೊಟ್ಟು ಹಿಂದಿನ ಪ್ರತಿಷ್ಠೆ ಮರಳಿ ಗಳಿಸುವಂತಾಗಬೇಕು ಎಂಬ ಚಿಂತನೆಯಲ್ಲಿ ಅವರು ಇದ್ದಾರೆ.

ಹಾಗೆಂದ ಮಾತ್ರಕ್ಕೆ ಹಳಬರೆಲ್ಲ ಭ್ರಷ್ಟರು ಎಂದು ಅರ್ಥವಲ್ಲ . ಪ್ರೊ.ವೆಂಕಟಗಿರಿಗೌಡ, ಡಾ.ಅಪ್ಪಾಜಿಗೌಡ, ಶಿಕ್ಷಣಾಧಿಕಾರಿ ದೊಡ್ಡ ಸಿದ್ಧಪ್ಪ ಅವರಂತಹ ಸೇವಾ ಮನೋಭಾವದವರೂ ಇದ್ದಾರೆ. ಆದರೆ ಹಳಬರಲ್ಲಿ ಬಹುತೇಕ ಮಂದಿ ಸಂಘದ ಹಣ ಲಪಟಾಯಿಸಿದ ಆರೋಪಕ್ಕೆ ಗುರಿಯಾದವರು. ಬಿಷಪ್‌ ಕಾಟನ್‌ ಶಾಲೆ ಶಿಕ್ಷಕಿಯಾಬ್ಬರ ಭ್ರೂಣ ನಾಪತ್ತೆ ಮಾಡಿದ ಆರೋಪಕ್ಕೆ ಒಳಗಾಗಿ ಸಿಒಡಿ ತನಿಖೆ ಎದುರಿಸುತ್ತಿರುವವರು, ಸಂಘದ ಹಣದಿಂದ ಮಕ್ಕಳ ಮದುವೆ ಮಾಡಿದವರು, ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಿದವರು- ಹೀಗೆ ಆಪಾದನೆಗಳ ಸರಮಾಲೆ ಹೊತ್ತ ಅನೇಕರು ಕಣದಲ್ಲಿದ್ದಾರೆ.

ಇನ್ನೊಂದೆಡೆ ಅಣ್ಣ-ತಮ್ಮ , ಅಪ್ಪ-ಮಗಳ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಲಿ ಸದಸ್ಯ ಜಯರಾಂ ಹಾಗೂ ಅವರ ಸಹೋದರ ಪ್ರಸನ್ನಕುಮಾರ್‌ ಬೇರೆ ಬೇರೆ ಗುಂಪುಗಳಿಂದ ಕಣಕ್ಕಿಳಿದಿದ್ದಾರೆ.

ಸಮಾಜ ಸೇವಕ ಎಂ.ಕೆ.ಪುಟ್ಟಲಿಂಗಯ್ಯ ಅವರ ಸಹೋದರ ಶಿವಲಿಂಗಯ್ಯ ಹಾಗೂ ಮಗಳು ಗಾಯತ್ರಿದೇವಿ ನಡುವೆ ಪೈಪೋಟಿ ಏರ್ಪಟ್ಟಿದೆ. ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷೆ ಸ್ವರ್ಣ ಪ್ರಭಾಕರ್‌, ಲಕ್ಷ್ಮಿದೇವಮ್ಮ ಕೂಡ ಕಣದಲ್ಲಿದ್ದಾರೆ.

ಹಣ, ಹೆಂಡದ ಆಮಿಷವಷ್ಟೇ ಅಲ್ಲದೇ ಚುನಾವಣೆ ಗೆಲ್ಲುವ ಏಕೈಕ ದೃಷ್ಟಿಯಿಂದ ಅನ್ಯಜಾತಿಯವರನ್ನು ಸಂಘಕ್ಕೆ ಸದಸ್ಯರಾಗಿ ಮಾಡಿರುವ ನಿದರ್ಶನವೂ ಇದೆ.

(ಸ್ನೇಹಸೇತು : ವಿಜಯಕರ್ನಾಟಕ)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+