ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸಿಗೊಂದು ಕೊಸರಿಗೊಂದು ಮೊಬೈಲು

By Staff
|
Google Oneindia Kannada News

ಕಾಸಿಗೊಂದು ಕೊಸರಿಗೊಂದು ಮೊಬೈಲು
ನಿನ್ನೆ ಮೊನ್ನೆಯವರೆಗೆ ಅಗ್ಗದ ದರದಾಟದ ಮೂಲಕ ಮೊಬೈಲ್‌ ಕಂಪನಿಗಳು ಪೋಟಿ ನಡೆಸುತ್ತಿದ್ದವು. ಆದರೀಗ ರಿಲಯನ್ಸ್‌ 501 ರುಪಾಯಿಗೊಂದು ಮೊಬೈಲ್‌ ಕೈಗಿಕ್ಕುತ್ತಿದೆ. ನಿಜವಾಗಿಯೂ ಅದು ಕೊಡುವ ಹ್ಯಾಂಡ್‌ಸೆಟ್‌ ಪುಕ್ಕಟ್ಟೆಯಾ?

*ಎಂ.ವಿನೋದಿನಿ

ನಗರದಲ್ಲಿ ಕಳೆದೆರಡು ದಿನಗಳಲ್ಲಿ ಮೊಬೈಲ್‌ ಮಾರಾಟ ಭರಾಟೆಯೋ ಭರಾಟೆ. ವಿದ್ಯಾರ್ಥಿಗಳು, ಆಟೋವಾಲ, ಎಳನೀರು ಮಾರುವಾತ, ಹಾಲು ಮಾರುವವನ ಬಳಿಯೂ ಮೊಬೈಲ್‌ ರಿಂಗುಣಿಸುತ್ತಿದೆ. ಬಸ್‌ ಸ್ಟಾಂಡ್‌, ಸೋಮಾರಿ ಕಟ್ಟೆ, ಬಸ್ಸಿನೊಳಗೆಲ್ಲಾ ಮೊಬೈಲ್‌ ಹೇಗೆ ಬಳಸುವುದು ಎಂಬುದೇ ಚರ್ಚೆ. ಪುಟ್ಟ ಮೊಬೈಲ್‌ನ ಗುಂಡಿಗಳನ್ನು ಒತ್ತಿ ಒತ್ತಿ, ಯಾವ ಬಟನ್‌ ಯಾವ ಸೌಲಭ್ಯ ಬಳಕೆಗೆ ಎಂಬ ಬಗ್ಗೆ ಪರಸ್ಪರ ಚರ್ಚೆ, ಕೇಳಿ ತಿಳಕೊಳ್ಳುವ ಕುತೂಹಲ....

ಹೌದು. ಈಗ 501 ರೂಪಾಯಿಗೊಂದು ರಿಲಯನ್ಸ್‌ ಮೊಬೈಲ್‌ !

ಇದು ರಿಲಯನ್ಸ್‌ ನ ಮಾನ್‌ಸೂನ್‌ ಹಂಗಾಮಾ ಮಹಾತ್ಮೆ. 501 ರೂಪಾಯಿ ಕೊಟ್ಟು ಚೆಂದದ ಹ್ಯಾಂಡ್‌ ಸೆಟ್‌ ಸಮೇತ ಮೊಬೈಲ್‌ ಕನೆಕ್ಷನ್‌ ಈಗ ಲಭ್ಯ. ಪರಿಣಾಮ ಜಾತ್ರೆಯಲ್ಲಿ ಪುಗ್ಗ ಖರೀದಿಸಿದ ಹಾಗೆ ಜನ ಮೊಬೈಲ್‌ ಖರೀದಿಸುತ್ತಿದ್ದಾರೆ. ಗುರುವಾರ ಸಂಜೆ ಬೆಂಗಳೂರಿನ ರಿಲಯನ್ಸ್‌ ಏಜೆನ್ಸಿ ಅಂಗಡಿಗಳಲ್ಲಿ ಗಲಾಟೆಯೋ ಗಲಾಟೆ. ನಗರದ ಬಿವಿಕೆ ಅಯ್ಯಂಗಾರ್‌ ರಸ್ತೆಯ ಕೆಲ ಅಂಗಡಿಗಳಲ್ಲಿ ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸರೇ ಬರಬೇಕಾಯಿತು. ಒಬ್ಬ ಮೊಬೈಲ್‌ ಏಜೆಂಟು ಒಂದೇ ದಿನದಲ್ಲಿ 98 ಮೊಬೈಲ್‌ ಮಾರಿ ಕಮಿಷನ್ನಿನಿಂದ ಜೇಬು ತುಂಬಿಸಿಕೊಂಡಿದ್ದಾನೆ. ಒಂದು ಮೊಬೈಲ್‌ ಮಾರಿದರೆ 200 ರೂ ಲಾಭ ಎಂದರೆ ಆತನ ಖುಷಿಗೆ ಬೇರೆ ಕಾರಣ ಬೇಕೇ ? ನಗರದಲ್ಲಿ ಗುರುವಾರ (ಜು. 03) ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ರಿಲಯನ್ಸ್‌ ಮೊಬೈಲ್‌ ಮಾರಾಟವಾಗಿವೆ.

Reliance Mobile connection for Rs 501ಮೊಬೈಲ್‌ ಖರೀದಿಯ ವೇಗ ನೋಡಿದ ಕೆಲವರು ಅರ್ಜಿ ಫಾರಂನನ್ನು 50 ರೂಪಾಯಿ ಬ್ಲಾಕ್‌ಗೆ ಮಾರಲಾರಂಭಿಸಿದರು. ಆದರೂ ಬ್ರಿಗೇಡ್‌ ರೋಡಿನಲ್ಲಿ ಎರಡೇ ಗಂಟೆ ಅವಧಿಯಲ್ಲಿ ಅರ್ಜಿಗಳು ಖಾಲಿಯಾದವು. ಬೆಳಗ್ಗೆ 10 ಗಂಟೆಗೆ ಬಾಗಿಲು ತೆಗೆದ ರಿಲಯನ್ಸ್‌ ಕೇಂದ್ರಗಳು ಸ್ಟಾಕ್‌ ಇಲ್ಲದೇ 12 ಗಂಟೆಗೇ ಬಾಗಿಲು ಮುಚ್ಚಬೇಕಾಯಿತು.

ಕೆಲವರು ಅರ್ಜಿ ಕೊಟ್ಟರೂ ಮೊಬೈಲ್‌ ಸಿಗದೇ ನಿರಾಶರಾದರು. ಅರ್ಜಿ ಕೊಟ್ಟವರಿಗೆ ಶೀಘ್ರವೇ ಮೊಬೈಲ್‌ ತಲುಪಿಸಲಾಗುವುದು ಎಂದು ಸಂಜೆ ಹೊತ್ತಿಗೆ ರಿಲಯನ್ಸ್‌ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಲಾಯಿತು. ಇನ್ನೇನಿದ್ದರೂ ರಿಲಯನ್ಸ್‌ ಕೇಂದ್ರಗಳಲ್ಲಿ ಮೊಬೈಲ್‌ ಬುಕ್‌ ಮಾಡಬಹುದಷ್ಟೇ. ಮೊಬೈಲ್‌ ವಿತರಣೆ ಜುಲೈ 19ರ ನಂತರವಷ್ಟೇ ನಡೆಯುತ್ತದೆ.

ಯಾಕೆ ಹೀಗೆ ಜನ ಮುಗಿ ಬಿದ್ದು ಮೊಬೈಲ್‌ ಕೊಂಡರು ?

ಎಲ್ಲದಕ್ಕೂ ಕಾರಣ ರಿಲಯನ್ಸ್‌ ಜಾಹೀರಾತು. ನಗರದ ಎಲ್ಲೆಲ್ಲೂ ದೊಡ್ಡ ದೊಡ್ಡ ಹೋರ್‌ಡಿಂಗ್‌ಗಳು, ಬ್ಯಾನರ್‌, ಪೋಸ್ಟರ್‌ಗಳು. ಎಲ್ಲವೂ ರಿಲಯನ್ಸ್‌ನ ಲಾಭವನ್ನು ಮಾತ್ರ ಹೇಳುತ್ತಿದ್ದವು. ಈಗ ಕೊಂಡ ಮೊಬೈಲ್‌ನ ಸಾಕಾಣಿಕೆಯ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಖರೀದಿಸುವಾತನ ಬಳಿ ಮಾತಾಡಿದ್ರೆ- ‘ಆಮೇಲೆ ನೋಡೋಣ ಸರ್‌, ಈಗ ಒಂದು ತಿಂಗಳು 500 ರೂಪಾಯಿಗೇ ಸಾಕಷ್ಟು ಮಾತಾಡಬಹುದಲ್ಲ. ಆಮೇಲೆ ನಿಭಾಯಿಸಲಿಕ್ಕಾಗದೇ ಇದ್ದರೆ ಕನೆಕ್ಷನ್‌ ಕಿತ್ತರೆ ಆಯ್ತು...’

ಈ ಹೊಸ ಯೋಜನೆಯ ಆಳಕ್ಕೆ ಹೋದರೆ ತಿಳಿಯುತ್ತದೆ-ರಿಲಯನ್ಸ್‌ ಮೊಬೈಲ್‌ ಕನೆಕ್ಷನ್‌ ಜೊತೆಗೆ ಕೊಡುವ ಎಲ್‌ಜೀ ಅಥವಾ ಸ್ಯಾಮ್‌ ಸಂಗ್‌ ಹ್ಯಾಂಡ್‌ ಸೆಟ್‌ ಉಚಿತವೇನೂ ಅಲ್ಲ. ರಿಲಯನ್ಸ್‌ ತುಂಬಾ ಚೀಪ್‌ ಕೂಡ ಅಲ್ಲ.

501 ಕೊಟ್ಟು ಮೊಬೈಲ್‌ ಕೊಂಡಾಕ್ಷಣ ನೀವು ಮೊಬೈಲ್‌ ಒಡೆಯರಾಗುತ್ತೀರಿ. ಉದಾಹರಣಗೆ ನೀವು ಟಾರಿಫ್‌ 149ನ ಚಂದಾದಾರರಾದರೆ, ತಿಂಗಳಿಗೆ ನೀವು 449 ರೂಪಾಯಿ ಕಂತು ಕಟ್ಟಬೇಕು. 449 ರೂಪಾಯಿಗಳ ವಿವರ ಹೀಗಿದೆ- ತಿಂಗಳ ಬಾಡಿಗೆ 149ರೂ, ತಿಂಗಳ ಪ್ಲಾನ್‌ ಚಾರ್ಜ್‌ 100 ರೂಪಾಯಿ, 200 ರೂಪಾಯಿ ಕ್ಲಬ್‌ ಸದಸ್ಯತ್ವ. ಈ ಕೊನೆಯ 200 ರೂಪಾಯಿಯನ್ನು ನೀವು ಮೊಬೈಲ್‌ ಬಳಸಿದರೂ, ಬಳಸದೇ ಇದ್ದರೂ 36 ತಿಂಗಳ ಕಾಲ (ಒಟ್ಟು 7, 200) ಕಟ್ಟಬೇಕಾದುದು ಕಡ್ಡಾಯ. ಅಂದರೆ ಬಳಕೆದಾರನಿಗೆ ಹ್ಯಾಂಡ್‌ ಸೆಟ್‌ ಫ್ರೀ ಅನ್ನುವ ಮಾತು ಸುಳ್ಳಾಯಿತು.

ಆದರೆ ಮೊಬೈಲ್‌ ಕೊಳ್ಳುವಾಗ ಬಳಕೆದಾರ 501 ರೂಪಾಯಿಗೆ ಎಲ್ಲವೂ ಆಗಿ ಹೋಗುತ್ತದೆ ಎಂದು ಭಾವಿಸಿರುತ್ತಾನೆ ! - ರಿಲಯನ್ಸ್‌ ತನ್ನ ಈ ಪ್ಲಾನ್‌ ಹಾಗೂ ಕಂತುಗಳ ಬಗ್ಗೆ ಯಾವ ಜಾಹೀರಾತಿನಲ್ಲೂ ವಿವರಿಸುವುದಿಲ್ಲ. ಆದಾಗ್ಯೂ ಈ ಕ್ಲಬ್‌ ಸದಸ್ಯತ್ವದಿಂದ ಬಳಕೆದಾರನಿಗೆ 3 ವರ್ಷಗಳ ವಿಮೆ, ಹ್ಯಾಂಡ್‌ ಸೆಟ್‌ಗೆ 1 ವರ್ಷದ ಗ್ಯಾರಂಟಿ, ರಿಲಯನ್ಸ್‌ ವೆಬ್‌ ವರ್ಲ್ಡ್‌ನ ಸದಸ್ಯತ್ವದಲ್ಲಿ ಶೇ 25ರ ಕಡಿತ - ಮುಂತಾದ ಆಕರ್ಷಣೆಗಳಿವೆ. ಆದರೆ 501 ಕೊಡುವ ಜನ ಸಾಮಾನ್ಯನಿಗೆ ಇದೆಲ್ಲದರ ಪರಿವೆ ಇದೆಯೇ ?
ಇದೇ ಪ್ಲಾನ್‌ ಇತರ ಸ್ಕೀಮ್‌ಗಳಿಗೂ ಅನ್ವಯವಾಗುತ್ತದೆ. ಕಾಲ್‌ ಚಾರ್ಜ್‌ವಿಷಯದಲ್ಲೂ ರಿಲಯನ್ಸ್‌ ಚೀಪ್‌ ಅಲ್ಲ. 149 ಸ್ಕೀಮ್‌ನಲ್ಲಿ ರಿಲಯನ್ಸ್‌ ಟು ಮೊಬೈಲ್‌ ಕರೆಗೆ ಒಂದು ನಿಮಿಷಕ್ಕೆ 1 ರೂ., ರಿಲಯನ್ಸ್‌ ಟು ಲ್ಯಾಂಡ್‌ ಲೈನ್‌ 1.99 ರೂ/ನಿ... ಹೀಗೆ ಎಸ್ಟಿಡಿ, ಐಎಸ್ಡಿಗೆ ಬೇರೆ ಬೇರ ದರ ವಿನ್ಯಾಸವಿದೆ.

ರಿಲಯನ್ಸ್‌ ಕನೆಕ್ಷನ್‌ ಬೇಡವಾದರೆ ?

ಈ ಹ್ಯಾಂಡ್‌ ಸೆಟ್‌ಗೆ ಬೇರೆ ಮೊಬೈಲ್‌ ಸರ್ವಿಸ್‌ ಹಾಕಿಸಿಕೊಳ್ಳುವ ಹಾಗಿಲ್ಲ. ಯಾಕೆಂದರೆ, ರಿಲಯನ್ಸ್‌ ಕೊಡುವ ಹ್ಯಾಂಡ್‌ಸೆಟ್‌ಗಳಿಗೆ ಸಿಮ್‌ಕಾರ್ಡ್‌ ತೂರಿಸುವ ಹಾಗೇ ಇಲ್ಲ. ಬಳಕೆದಾರನಿಗೆ ಬೇಡವಾದಲ್ಲಿ ಹ್ಯಾಂಡ್‌ಸೆಟ್‌ನ್ನು ಕಂಪೆನಿ ವಾಪಾಸು ತೆಗೆದುಕೊಳ್ಳುತ್ತದೆ. ಆದರೆ ಮೊಬೈಲ್‌ ಖರೀದಿ ಭರಾಟೆಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಆದರೂ ದೊರೆತ ಮಾಹಿತಿಗಳನ್ನು ನೋಡಿದರೆ ರಿಲಯನ್ಸ್‌ ಮೊಬೈಲ್‌ ಚೀಪ್‌ ಅಂತೂ ಅಲ್ಲ . ಕಾಸಿಗೊಂಡು ಕೊಸರಿಗೊಂದು ಎಂಬಂತೆ ಬಿಕರಿಯಾಗುತ್ತಿರುವ ಮೊಬೈಲುಗಳ ಹಿಂದೆ ಬಿದ್ದಿರುವ ಜೊಲ್ಲುಸುರುಕ ಗಿರಾಕಿಗಳಿಗೆ ಇದು ಖಂಡಿತ ಗೊತ್ತಿಲ್ಲ !

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X