2004ಕ್ಕೆ ಪಶ್ಚಿಮ ಬಡಾವಣೆಗಳಿಂದ ಬೆಂಗಳೂರು ಕೇಂದ್ರಕ್ಕೆ ಕೆಳರಸ್ತೆ
2004ಕ್ಕೆ ಪಶ್ಚಿಮ ಬಡಾವಣೆಗಳಿಂದ ಬೆಂಗಳೂರು ಕೇಂದ್ರಕ್ಕೆ ಕೆಳರಸ್ತೆ
ರಾಜಾಜಿನಗರ, ವಿಜಯನಗರ, ಬಸವೇಶ್ವರನಗರದ ನಾಗರಿಕರಿಗೆ ಸಿಹಿ ಸುದ್ದಿ
ಬೆಂಗಳೂರಿನ ಕೇಂದ್ರ ಭಾಗಗಳನ್ನು ಈ ಬಡಾವಣೆಗಳಿಗೆ ಸಂಪರ್ಕಿಸುವ ನಾಲ್ಕು ಸಾಲಿನ ಕೆಳಮಾರ್ಗ (ಅಂಡರ್‌ಪಾಸ್) ರಸ್ತೆ ನಿರ್ಮಾಣಕ್ಕೆ ಬುಧವಾರ (ಜು.02) ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮಲಿಂಗ ರೆಡ್ಡಿ ಮತ್ತು ಬೆಂಗಳೂರು ಮೇಯರ್ ಸಿ.ಎಂ.ನಾಗರಾಜು ಕೆಸರು ಕಲ್ಲು ಹಾಕಿದರು. 18 ತಿಂಗಳಲ್ಲಿ 12 ಕೋಟಿ ರುಪಾಯಿ ವೆಚ್ಚದಲ್ಲಿ ಈ ಮಹತ್ವದ ಯೋಜನೆಯ ಕಾಮಗಾರಿ ಮುಗಿಯಲಿದೆ ಎಂದು ಮೇಯರ್ ಹೇಳಿದರು.
ನಾಗಾರ್ಜುನ ಮತ್ತು ಶ್ರೀ ಜಯರಾಮ ರೆಡ್ಡಿ ಕನ್‌ಸ್ಟ್ರಕ್ಷನ್ ಕಂಪನಿಗಳಿಗೆ ಯೋಜನೆಯ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಮೇಖ್ರಿ ಸರ್ಕಲ್‌ನಲ್ಲಿ ಇರುವ ರೀತಿಯಲ್ಲಿ ಕೆಳ ರಸ್ತೆಯನ್ನು ನಿರ್ಮಿಸಲಾಗುವುದು. ಪಾದಚಾರಿಗಳು ನಡೆಯಲು ಫುಟ್‌ಪಾತ್, ರಸ್ತೆ ದಾಟಲು ಅನುಕೂಲವಾಗುವಂತೆ ಜಾಗಗಳು ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣ ಯೋಜನೆಯಲ್ಲಿ ಸೇರಿದೆ. 10 ಸಾವಿರ ವಾಹನಗಳು ಒಮ್ಮೆಗೇ ಸಂಚರಿಸಬಹುದಾದಷ್ಟು ವಿಶಾಲವಾಗಿ ರಸ್ತೆಗಳು ನಿರ್ಮಿತವಾಗಲಿದ್ದು, ಏಕಕಾಲಕ್ಕೆ 8 ಬಸ್ಸುಗಳು ಚಲಿಸುವಷ್ಟು ಅಗಲವಾಗಿರಲಿವೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಎಂಜಿನಿಯರ್ ರಾಮೇಗೌಡ ಹೇಳಿದರು.
ಕಳೆದ ವರ್ಷ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಆದರೆ, ಜಾಗ ಅಧೀನಪಡಿಸಿಕೊಂಡು, ಗುತ್ತಿಗೆ ನೀಡುವ ಪ್ರಕ್ರಿಯೆ ವಿಳಂಬವಾಯಿತು. ಮುಂದಿನ ವರ್ಷ ಅಕ್ಟೋಬರ್ ಹೊತ್ತಿಗೆ ಈ ಮಹತ್ವಾಕಾಂಕ್ಷೆಯ ಯೋಜನೆ ಮುಗಿಯಲಿದ್ದು, ವಾಹನ ಸಂಚಾರ ದಟ್ಟಣೆಯಿಂದ ನಾಗರಿಕರು ನಿರಾಳವಾಗಬಹುದು ಎಂದು ಮೇಯರ್ ನಾಗರಾಜ್ ಭರವಸೆ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications