ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರದಾಸೋಹ ಅವ್ಯವಸ್ಥೆಯೂ ಸರ್ಕಾರಿತನವೂ

By Staff
|
Google Oneindia Kannada News

ಅಕ್ಷರದಾಸೋಹ ಅವ್ಯವಸ್ಥೆಯೂ ಸರ್ಕಾರಿತನವೂ
ಪ್ಲೇವಿನ್‌ ಲಾಟರಿ ನಡೆಸುವಾಗ ಸರಕಾರ ತೋರಿದ ನೀಟ್‌ನೆಸ್‌, ಕಾಳಜಿ ಅಕ್ಷರ ದಾಸೋಹದ ಸಂದರ್ಭದಲ್ಲಿ ಕಾಣುತ್ತಿಲ್ಲವಲ್ಲ ...ಅಕ್ಷರ ದಾಸೋಹದ ಸಮಗ್ರ ಅವ್ಯವಸ್ಥೆಯತ್ತ ಒಮ್ಮೆ ಕಣ್ಣಾಡಿಸಿದರೆ ಎಲ್ಲೆಲ್ಲೂ ತಾತಾ ತೂತು !

*ದಟ್ಸ್‌ಕನ್ನಡ ಬ್ಯೂರೊ

ಪ್ಲೇವಿನ್‌ ಲಾಟರಿಯ ಭಾರೀ ಯಶಸ್ಸಿನಿಂದ ರಾಜ್ಯ ಸರಕಾರಕ್ಕೆ ಸಿಕ್ಕಾ ಪಟ್ಟೆ ಖುಷಿಯಾದರೆ ಲಾಟರಿ ಹಣ ಹಾಕಿ ಮನೆ ಕಳೆದುಕೊಂಡ ಕುಟುಂಬದವರು ಎಸ್ಸೆಂ ಕೃಷ್ಣ ಸರಕಾರಕ್ಕೆ ಹಿಡಿ ಶಾಪ ಹಾಕಿದರು. ಈ ಲಾಟರಿ ಜೂಜನ್ನು ನಿಲ್ಲಿಸಿ ಎಂದು ವಿರೋಧ ಪಕ್ಷಗಳು ಘೋಷಣೆ ಕೂಗಲು ರೆಡಿಯಾಗುತ್ತಿದ್ದಂತೆಯೇ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವರೂ ಅಗಿರುವ ಮುಖ್ಯಮಂತ್ರಿ ಕೃಷ್ಣ ಒಂದು ಬಾಣ ಬಿಟ್ಟರು.

ಪ್ಲೇವಿನ್‌ ಲಾಟರಿಯಿಂದ ರಾಜ್ಯಕ್ಕೆ ಬರುತ್ತಿರುವ ಲಾಭಾಂಶದಿಂದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುವ ಅಕ್ಷರ ದಾಸೋಹ ಯೋಜನೆಯನ್ನು ಕೃಷ್ಣ ಘೋಷಿಸಿದರು. ಈ ಬಾಣಕ್ಕೆ ಎರಡು ಗುರಿ. ವಿರೋಧ ಪಕ್ಷಗಳ ಲಾಟರಿ ವಿರೋಧಕ್ಕೆ ಉತ್ತರಿಸುವುದು ಮತ್ತು ಮುಂದಿನ ಚುನಾವಣೆಗೆ ಪೂರಕವಾಗುವಂತೆ ಹಳ್ಳಿ ಮತದಾರರ ಮನ ಗೆಲ್ಲುವುದು !

ಹಾಗೆ ಇದೇ ಶೈಕ್ಷಣಿಕ ವರ್ಷದಲ್ಲಿ ಆರಂಭವಾದ ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಅವ್ಯವಸ್ಥೆಯ ಕೂಪವಾಯಿತು. ಪ್ಲೇವಿನ್‌ ಲಾಟರಿ ಯೋಜನೆ ನಡೆಯುವಷ್ಟು ನೀಟಾಗಿ ಅಕ್ಷರ ದಾಸೋಹ ನಡೆಯಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಘಟಿಸಿದ ಘಟನೆಗಳನ್ನೇ ತೆಗೆದುಕೊಳ್ಳಿ.

  • ಜುಲೈ 2ರಂದು ಗೋಕಾದ ಶಿಂಧಿಕುರಬೇಟ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಸುಮಾರು 900 ಮಂದಿ ಮಕ್ಕಳು ಅರೆ ಬೆಂದ ಅನ್ನ ಉಂಡರು. ಅವರಲ್ಲಿ 42 ಮಂದಿ ವಾಂತಿ ಭೇದಿಗೆ ತುತ್ತಾಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ತೊಳೀದೇ ಇರೋ ಅಕ್ಕಿಯನ್ನ ಅರೆ ಬರೆ ಬೇಯಿಸಿ ಮಕ್ಕಳಿಗೆ ಅನ್ನ ಬಡಿಸಿರುವುದನ್ನು ಗೋಕಾಕ ಗ್ರಾಮದ ನಿವಾಸಿಗಳು ವಿರೋಧಿಸಿ, ನಮ್ಮ ಮಕ್ಕಳಿಗೆ ನಾಲ್ಕಕ್ಷರ ಕಲಿಸಿದ್ರ ಸಾಕ್ರೀ. ಇವರ ಬಿಸಿ ಊಟ ಯಾರಿಗ ಬೇಕಾಗೈತ್ರೀ... ಎಂದು ದಬಾಯಿಸುತ್ತಿದ್ದಾರೆ.
  • ಹೊನ್ನಾವರದಲ್ಲಿ ಜಾತಿ ಸಮಸ್ಯೆ. ಇಲ್ಲಿನ ಕಿರ್‌ಬೈಲ್‌ ಕರ್ಕಿ, ಸಂಶಿ, ಮುಗುವ, ನಿರ್ವತ್ತಿ ಕೊಡ್ಲ, ಬಂಕನ ಹಿತ್ಲ, ಚವಡಗೆರೆ, ಮಾಡಗೇರಿ, ಕಡತೋಕ ಮುಂತಾದ ಕಡೆ ಬಿಸಿಯೂಟದ ಅಡುಗೆಗೆ ಮುಕ್ರಿ, ಹುಲಸ್ವಾರ, ಹುಳ್ಳೇರ ಮುಂತಾದ ಪರಿಶಿಷ್ಟ ಮಹಿಳೆಯರನ್ನು ನೇಮಿಸಲಾಗಿದೆ. ಮೇಲ್ವರ್ಗದವರೆಂದು ಕರೆಸಿಕೊಳ್ಳುವ ಊರಿನ ಬಹುಜನರು ತಮ್ಮ ಮಕ್ಕಳನ್ನು ಶಾಲೆಯ ಬಿಸಿಯೂಟಕ್ಕೆ ಕಳುಹಿಸಲು ಒಪ್ಪುತ್ತಿಲ್ಲ. ದಲಿತ ಮಹಿಳೆಯನ್ನು ಮೇಲ್ವರ್ಗದವರಷ್ಟೇ ಅಲ್ಲದೆ ಅನುಕೂಲಸ್ಥ ದಲಿತರೂ ಅಸ್ಪೃಶ್ಯರಾಗಿ ನೋಡುತ್ತಿರುವುದು ಇನ್ನೊಂದು ವಿಪರ್ಯಾಸ.
  • ಹಾಸನದಲ್ಲಿ ಅಕ್ಷರ ದಾಸೋಹದ ಅಡುಗೆ ಕೇಂದ್ರಗಳಿಗೆ ಉಸ್ತುವಾರಿಯಾಗಿ ನೇಮಕಗೊಂಡವರು ಸರಕಾರದ ಆದೇಶವನ್ನು ಕ್ಯಾರೇ ಅನ್ನದೆ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಈ ಆರೋಪದ ಮೇಲೆ ನಾಲ್ವರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ.
  • ಸುಳ್ಯ ಹಾಗೂ ಸುಬ್ರಹ್ಮಣ್ಯದಲ್ಲಿ ಅಕ್ಷರ ದಾಸೋಹಕ್ಕೆ ಸ್ಥಳೀಯರು ತೀರಾ ಉತ್ಸಾಹದಿಂದ ಸಹಕರಿಸುತ್ತಿದ್ದಾರೆ. ಆದರೆ ಅಲ್ಲಿಗೆ ಸರಕಾರದಿಂದ ತಲುಪಬೇಕಾದ ಊಟೋಪಕರಣಗಳು, ಗ್ಯಾಸ್‌, ಅಕ್ಕಿ- ತರಕಾರಿಗಳು ತಲುಪಿಲ್ಲ. ಆದರೆ ಜುಲೈ 2ರಂದು ಶಾಲಾಭಿವೃದ್ಧಿ ಸಮಿತಿಯವರು ತಮ್ಮ ಮನೆಯಿಂದ ಪಾತ್ರೆ ಪಗಡಗಳನ್ನು ಶಾಲೆಗೆ ತಂದು, ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಿಂದ ಸಾಂಬಾರು ತಂದು ಅಕ್ಷರ ದಾಸೋಹವನ್ನು ಉದ್ಘಾಟಿಸಿದರು. ಊಟ ತಯಾರಿಕೆಗೆಂದು ನಿರ್ಮಿಸಲಾದ ಶೆಡ್‌ ನಿರ್ಮಾಣ ವೆಚ್ಚವನ್ನು ಗ್ರಾಮ ಪಂಚಾಯಿತಿಯಿಂದ ಪಡೆಯಲು ಸರಕಾರ ಸೂಚಿಸಿದೆ. ಇದು ಜನರ ಹಣದ ಅಪವ್ಯಯ ಎಂದು ಸ್ಥಳೀಯರು ದೂರುತ್ತಿದ್ದಾರೆ.
  • ದಾವಣಗೆರೆ ನಗರದಲ್ಲಿ ಜುಲೈ 1ರಂದು ಅಕ್ಷರ ದಾಸೋಹ ಉದ್ಘಾಟನೆಯಾಯಿತು. ಸುಮಾರು 2, 000 ಮಂದಿ ಮಕ್ಕಳು ಕಳಪೆ ಅಕ್ಕಿಯ ಅನ್ನವನ್ನು ತಿಂದು ಅಸ್ವಸ್ಥರಾದರು. ಕಾರ್ಯಕ್ರಮವನ್ನು ನೋಡಲು ಬಂದಿದ್ದ ಪಾಲಕರು ಕಳಪೆ ಊಟವನ್ನು ಕಂಡು ಶಾಕ್‌ ಆಗಿದ್ದರು. ತಟ್ಟೆಗೆ ಅನ್ನ ಹಾಕಿಸಿಕೊಂಡ ಮಕ್ಕಳು ಅದನ್ನು ತಿನ್ನಲಾರದೇ ಬಿಸುಟರು.
ಹೀಗೆ ಅವ್ಯವಸ್ಥೆಗಳ ನಡುವೆ ಮಧ್ಯಾಹ್ನ ಈ ಬಿಸಿಯೂಟ ಯೋಜನೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಕೆ. ಚಂದ್ರಶೇಖರ್‌ ಘೋಷಿಸಿದ್ದಾರೆ. ಅಕ್ಷರ ದಾಸೋಹ ಹಸನಾಗಬೇಕಾದರೆ ಮುಖ್ಯವಾಗಿ ಮಕ್ಕಳ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಬೇಕು. ಕೋಟ್ಯಂತರ ರುಪಾಯಿ ಯೋಜನೆಯಲ್ಲಿ ಉಂಡೇಳಲು ಬಾಣಸಿಗರೇ ಸೌಟು ಹಿಡಿದು ಕಿತ್ತಾಡುತ್ತಿರುವುದು ದುರಂತ. ಬಿಸಿಯೂಟದ ಬಿಸಿತುಪ್ಪಕ್ಕಿಂತ ಅಕ್ಷರಶಃ ಅಕ್ಷರ ದಾಸೋಹವಾದರೆ ಸಾಲದೇ?

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X