ಯುದ್ಧ 30 ದಿನ ನಡೆಯುತ್ತೆ , ಸದ್ದಾಂ ಸಾಯ್ತಾನೆ- ಕಣಿ
ಬೆಂಗಳೂರು : ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಗ್ರಹಗತಿ ಸರಿಯಾಗಿರುವುದರಿಂದ, ಎಷ್ಟೇ ಎದೆಸೆಟೆದು ನಿಂತರೂ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಸಾಯೋದು ಗ್ಯಾರಂಟಿ ಎಂದು ಬೆಂಗಳೂರಿನ ಜ್ಯೋತಿಷಿ ಪ್ರಾಣೇಶ್ ರಾವ್ ಕಣಿ ಹೇಳಿದ್ದಾರೆ.
ಆಂಗ್ಲ ದಿನಪತ್ರಿಕೆಯಾಂದು ಪ್ರಾಣೇಶ್ ರಾವ್ ಅವರನ್ನು ಮಾತಾಡಿಸಿ ಸುದ್ದಿ ಪ್ರಕಟಿಸಿದೆ. ಪ್ರಾಣೇಶ್ ಹೇಳುವ ಪ್ರಕಾರ, 30 ದಿನಗಳ ಕಾಲ ಯುದ್ಧ ನಡೆಯುತ್ತದೆ. ಸದ್ದಾಂ ಸಾಕಷ್ಟು ಪ್ರತಿರೋಧ ಒಡ್ಡಿದರೂ ಕೊನೆಗೆ ಬುಶ್‌ಗೇ ಜಯಲಕ್ಷ್ಮಿ ಒಲಿಯಲಿದ್ದಾಳೆ.
ಉದಯ ಟಿ.ವಿ. ಫೇಮ್‌ನ ಭವಿಷ್ಯಕಾರ ಎಸ್.ಕೆ.ಜೈನ್ ಕೂಡ ಪ್ರಾಣೇಶ್ ರಾವ್ ಲೆಕ್ಕಾಚಾರವನ್ನು ಸಮರ್ಥಿಸಿದ್ದಾರೆ. ಕಳೆದ ಬಾರಿ ಸದ್ದಾಂ ಮೇಲೆ ಅಮೆರಿಕನ್ನರು ದಾಳಿ ಇಟ್ಟಾಗ, ಸದ್ದಾಂ ತಾರಾಬಲ ಜೋರಾಗಿತ್ತು. ಆದರೆ ಈ ಬಾರಿ ಬುಶ್ ತಾರಾಬಲ ಚೆನ್ನಾಗಿದೆ ಎನ್ನುವ ಜೈನ್, ಯುದ್ಧ ಒಂದೇ ತಿಂಗಳಿಗೆ ಮುಗಿಯೋಲ್ಲ ಎಂದು ಹೇಳುತ್ತಾರೆ.
ಮೇ ತಿಂಗಳು ಜಗತ್ತು ತಲ್ಲಣಗೊಳ್ಳುವ ಕಾಲ. ಈ ತಿಂಗಳಲ್ಲಿ ಎಲ್ಲಾ ತೀರಾ ಎಚ್ಚರದಿಂದಿರಬೇಕು. ಯುದ್ಧದ ಪರಿಣಾಮವಷ್ಟೇ ಅಲ್ಲದೆ ಭೂಕಂಪ, ಬರದ ತೀವ್ರತೆ, ರಚ್ಚೆ ಹಿಡಿಯುವ ಮಾರಿ ಮಳೆ- ಹೀಗೆ ಯಾವುದೇ ಅವಘಡವಾದರೂ ಎಸಗಬಹುದು ಎನ್ನುತ್ತಾರೆ ಜೈನ್.
ಏಪ್ರಿಲ್ 4ರ ನಂತರ ಗುರು ಗ್ರಹದ ಚಲನೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಚೇತರಿಕೆ ಕಾಣಲಿದೆ. ಸಾಕಷ್ಟು ಸಾವಿನ ಭಯ ಎದುರಿಸುತ್ತಿರುವ ಮುಸ್ಲಿಂ ಸಮುದಾಯ ಒಂದಾಗಿ ಸೇರಿ, ಶಾಂತಿ ಮಾರ್ಗದಲ್ಲಿ ತಮ್ಮ ಹಿತ ಕಾಪಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇನ್ನು 5 ಅಥವಾ 6 ತಿಂಗಳಲ್ಲಿ ಹೀಗಾಗಲಿದೆ ಎಂಬುದು ಪ್ರಾಣೇಶ್ ರಾವ್ ಹೇಳಿರುವ ಭವಿಷ್ಯ.
(ಇನ್ಫೋ ವಾರ್ತೆ)












Click it and Unblock the Notifications