ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟು ಹಂಚಿಕೆ ವಿಳಂಬ ವಿರೋಧಿಸಿ ಅಸೆಂಬ್ಲಿಯಲ್ಲಿ ಧರಣಿ

By Staff
|
Google Oneindia Kannada News

ಬೆಂಗಳೂರು : ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸೀಟು ಹಂಚಿಕೆ ವಿಷಯವಾಗಿ ಇನ್ನೂ ಅಂತಿಮ ನಿರ್ಧಾರಕ್ಕೆ ಬರದ ಸರ್ಕಾರದ ವಿಳಂಬ ನೀತಿಯನ್ನು ವಿರೋಧಿಸಿ ವಿರೋಧ ಪಕ್ಷಗಳ ಸದಸ್ಯರು ಸೋಮವಾರ (ಮಾ.31) ವಿಧಾನಸಭೆಯಲ್ಲಿ ಧರಣಿ ಕೂತರು. ಈ ವಿಷಯವಾಗಿ ನಡೆದ ಮಾತಿನ ಚಕಮಕಿ ಹಾಗೂ ಗೊಂದಲದಿಂದ ಎರಡು ಬಾರಿ ಸದನದ ಕಲಾಪವನ್ನು ಮುಂದೂಡುವಂತಾಯಿತು.

ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸೀಟು ಹಂಚಿಕೆ ವಿಷಯವಾಗಿ ಸುಪ್ರಿಂಕೋರ್ಟ್‌ ಕೊಟ್ಟಿರುವ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಕ್ಷಿಪ್ರವಾಗಿ ಒಂದು ನಿರ್ಧಾರಕ್ಕೆ ಬರಬೇಕು. ಖಾಸಗಿ ಕಾಲೇಜುಗಳು ಏಪ್ರಿಲ್‌ 3ರವರೆಗೆ ಗಡುವು ಕೊಟ್ಟಿವೆ. ಅಷ್ಟರೊಳಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಧಮಕಿ ಹಾಕಿವೆ. ಮೇ 30 ಹಾಗೂ 31ನೇ ತಾರೀಕು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿವೆ. ಸರ್ಕಾರ ಈ ವಿಷಯದಲ್ಲಿ ವಿಳಂಬ ಮಾಡುವುದರಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುವ ಅಪಾಯವಿದೆ ಎಂದು ವಿರೋಧ ಪಕ್ಷ ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ತರಾಟೆಗೆ ತೆಗೆದುಕೊಂಡರು.

ಶಾಸನ ರಚಿಸಿ : ಖಾಸಗಿ ಕಾಲೇಜುಗಳ ಜತೆ ಸೀಟು ಹಂಚಿಕೆ ವಿಷಯವಾಗಿ ಒಂದು ಒಪ್ಪಂದಕ್ಕೆ ಬಂದು, ಈ ಕುರಿತು ಶಾಸನ ರಚಿಸಬೇಕು. ಅಥವಾ ತನ್ನ ತೀರ್ಪನ್ನು ಪುನರ್‌ ವಿಮರ್ಶಿಸುವಂತೆ ಸುಪ್ರಿಂಕೋರ್ಟ್‌ಗೆ ಅರ್ಜಿ ಹಾಕಬೇಕು. ನಿಧಾನ ಮಾಡುವುದರಿಂದ ವಿದ್ಯಾರ್ಥಿಗಳು ಕಂಗಾಲಾಗಬೇಕಾದೀತು ಎಂದು ಶೆಟ್ಟರ್‌ ಆಗ್ರಹಿಸಿದರು.

ಗೌಡ್‌- ಡೀಕೇಶಿ ನಡುವೆ ಮಾತಿನ ಚಕಮಕಿ : ಸರ್ಕಾರ ಖಾಸಗಿ ಕಾಲೇಜುಗಳ ತೆಕ್ಕೆಯಲ್ಲಿ ಬಿದ್ದಿರುವುದರಿಂದ ಹೀಗೆ ತಡ ಮಾಡುತ್ತಿದೆ ಎಂದು ಬಿಜೆಪಿಯ ಡಿ.ವಿ.ಸದಾನಂದ ಗೌಡ್‌ ಮಾಡಿದ ಆರೋಪಕ್ಕೆ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಕೆಂಡಮಂಡಲಾದರು. ಗೌಡ್‌ ಹಾಗೂ ಡಿ.ಕೆ.ಶಿ. ನಡುವೆ ಮಾತಿನ ಚಕಮಕಿ ನಡೆಯಿತು. ಸಂಯುಕ್ತ ಜನತಾ ದಳದ ಸಿ.ಭೈರೇಗೌಡ, ಬಿ.ಸೋಮಶೇಖರ್‌, ಪಿ.ಜಿ.ಆರ್‌. ಸಿಂಧ್ಯ ಹಾಗೂ ಸಿ.ಚೆನ್ನಿಗಪ್ಪ ಮೊದಲಾದವರು ಶೆಟ್ಟರ್‌ ಅವರ ಆಗ್ರಹಕ್ಕೆ ಸಮ್ಮತಿ ಸೂಚಿಸಿದರು.

ಶಾಸನ ರಚಿಸಲಾಗದು- ಚಂದ್ರೇಗೌಡ : ಮಾತಿನ ಚಕಮಕಿ ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ, ವಿರೋಧ ಪಕ್ಷಗಳು ಸುಮ್ಮನೆ ವಿಷಯವನ್ನು ಗುಲ್ಲೆಬ್ಬಿಸುತ್ತಿವೆ. ಸಿ.ಇ.ಟಿ. ನಡೆಸುವುದರಲ್ಲಿ ಯಾವುದೇ ಗೊಂದಲ ಇಲ್ಲ. ದ್ವಿತೀಯ ಪಿಯೂಸಿ ಪರೀಕ್ಷೆ ಮುಗಿದು ಫಲಿತಾಂಶ ಹೊರಬರಲು ಇನ್ನೂ ಸಾಕಷ್ಟು ಸಮಯ ಇದೆ. ಬಡ ವಿದ್ಯಾರ್ಥಿಗಳ ಹಿತಾಸಕ್ತಿಯ ಬಗ್ಗೆ ಸರ್ಕಾರ ಕಾಳಜಿ ಇಟ್ಟುಕೊಂಡೇ ಇದೆ. ಸುಪ್ರಿಂಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿ ಶಾಸನ ರಚಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬೇಕಾದರೆ ಹಾಗೆ ಶಾಸನ ರಚಿಸಬಹುದು ಎಂದರು.

ವಿರೋಧ ಪಕ್ಷಗಳ ಬಿಗಿ ಪಟ್ಟು, ಧರಣಿ : ಚರ್ಚೆಯ ಕೊನೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಜಿ.ಪರಮೇಶ್ವರ ಅವರು ಎಲ್ಲಾ ಸಮಸ್ಯೆಗಳಿಗೂ ಉತ್ತರ ಕೊಡುತ್ತಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಮಾತಾಡಿ ಎಂದು ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಪದೇಪದೇ ಮನವಿ ಮಾಡಿದರು. ಆದರೆ, ಅದಕ್ಕೆ ಓಗೊಡದ ವಿರೋಧ ಪಕ್ಷದವರು ಸದನದ ಬಾವಿಗೆ ನುಗ್ಗಿ ಧರಣಿ ಕೂತು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು, ಕೇಂದ್ರ ಸರ್ಕಾರದ ಮೇಲೆ ಹೊಣೆ ಹೊರಿಸುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ನಲವತ್ತೆೈದು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದ ಸಭಾಪತಿ ಹೆಚ್ಚಿನ ಚರ್ಚೆಗೆ ತಮ್ಮ ಕೋಣೆಗೆ ಬರುವಂತೆ ಮುಖಂಡರನ್ನು ಆಹ್ವಾನಿಸಿದರು. ಈಗಿನ ಮೂಲಭೂತ ಸೌಕರ್ಯವನ್ನು ಬಳಸಿಕೊಂಡೇ ಇನ್ನೂ ಕನಿಷ್ಠ ನಾಲ್ಕು ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದು ಸಾಧ್ಯವಿದೆ. ಇದರಿಂದ 800 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುವುದು ಸಾಧ್ಯ ಎಂದು ಸಿಂಧ್ಯ ಸಲಹೆ ಕೊಟ್ಟರು. ಸಭೆ ಮತ್ತೆ ಶುರುವಾಯಿತಾದರೂ, ವಿರೋಧ ಪಕ್ಷಗಳು ಧರಣಿ ನಿಲ್ಲಿಸಲಿಲ್ಲ. ಎಲ್ಲರೂ ತಮ್ಮ ತಮ್ಮ ಜಾಗಕ್ಕೆ ಹೋಗಿ ಕೂತುಕೊಳ್ಳಬೇಕೆಂದು ಬಿಜೆಪಿ ನಾಯಕ ಯಡಿಯೂರಪ್ಪ ಮಾಡಿದ ಮನವಿಗೆ ಯಾರೂ ಸೊಪ್ಪು ಹಾಕಲಿಲ್ಲ. ಸಂಜೆ 4 ಗಂಟೆಯ ಒಳಗೆ ಸರ್ಕಾರ ಉತ್ತರ ಕೊಡಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದರು.

ಸಮಸ್ಯೆಯನ್ನು ವಿರೋಧ ಪಕ್ಷಗಳು ರಾಜಕೀಯವಾಗಿಸುತ್ತಿವೆ ಎಂದು ಆರೋಪಿಸಿದ ಪಾಟೀಲ್‌, ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ದೆಹಲಿಯಿಂದ ಬರಬೇಕು. ನಂತರ ಸಚಿವ ಸಂಪುಟದ ಜತೆ ಚರ್ಚಿಸಿ ಈ ಸಮಸ್ಯೆಗೆ ಉತ್ತರ ಕೊಡಬೇಕು. ಕುಂತಲ್ಲೇ ಪಟ್ಟು ಹಿಡಿದರೆ ಹೇಗೆ ಎಂದರು. ಕಲಾಪವನ್ನು ಊಟದ ಅವಧಿಯವರೆಗೆ ಮತ್ತೆ ಮುಂದೂಡಲಾಯಿತು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X