‘ಜನರ ತೆರಿಗೆ ಹಣದಲ್ಲಿ ಮೆರೆಯುತ್ತಿರುವ ಸಚಿವರು’
ಧಾರವಾಡ: ಭಾರತದಲ್ಲಿ ಸಂಗ್ರಹವಾಗುತ್ತಿರುವ ಬಹುಪಾಲು ತೆರಿಗೆ ರಾಜಕಾರಣಿಗಳ ದುಂದುವೆಚ್ಚಕ್ಕೆ ಮತ್ತು ಭ್ರಷ್ಟಾಚಾರದಲ್ಲಿ ಕಳೆದು ಹೋಗುತ್ತಿದೆ ಎಂದು ಆಝಾದಿ ಬಚಾವೋ ಆಂದೋಳನದ ರಾಜೀವ ದೀಕ್ಷಿತ್ ವಿಷಾದಿಸಿದ್ದಾರೆ.
ಅವರು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ಪ್ರತಿವರ್ಷ 6 ಲಕ್ಷ 20 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ. ಈ ಹಣದಲ್ಲಿ ಕೇಂದ್ರ ಸರಕಾರ ತನ್ನ ಸಚಿವರ ವೇತನ, ಭತ್ಯೆ, ಸಂಬಳ ಹಾಗೂ ಸಚಿವರ ರಕ್ಷಣಾ ವೆಚ್ಚಗಳಿಗೇ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತದೆ.
ನಾಗರಿಕರು ಕಟ್ಟುವ ಸರಾಸರಿ ತೆರಿಗೆಯು 6000 ರೂಪಾಯಿಗಳು. ಅದಕ್ಕೆ ಪ್ರತಿಯಾಗಿ ಸರಕಾರವು ವ್ಯಕ್ತಿಯಾಬ್ಬನ ಮೇಲೆ ಖರ್ಚು ಮಾಡುತ್ತಿರುವುದು ಕೇವಲ 600 ರೂಪಾಯಿಗಳು. ಇಷ್ಟು ಮಾತ್ರವಲ್ಲದೆ ಜನರು ನೀಡಿದ ತೆರಿಗೆಯ ಹಣದಿಂದ ರಸ್ತೆ, ಸೇತುವೆ, ನೀರು ಪೂರೈಕೆ ಕೆಲಸಗಳು ನಡೆಯುತ್ತಿಲ್ಲ . ಈ ಮೂಲಭೂತ ಕೆಲಸಗಳಿಗೆಲ್ಲ ವಿದೇಶೀ ಬ್ಯಾಂಕ್‌ನಿಂದ ಸಾಲ ತರಲಾಗುತ್ತಿದೆ ಎಂದು ದೀಕ್ಷಿತ್ ದೂರಿದರು.
ಇದಕ್ಕೆ ಪರಿಹಾರೋಪಾಯವಾಗಿ ಸಂವಿಧಾನಕ್ಕೆ ತಿದ್ದು ಪಡಿ ತರುವ ಮೂಲಕ ತೆರಿಗೆ ವಿಕೇಂದ್ರೀಕರಣ ಮಾಡುವುದು ಸಾಧ್ಯ. ಸರಕಾರ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ರಾಜೀವ್ ಸರಕಾರಕ್ಕೆ ಸಲಹೆ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications