ಎಸ್‌ಟಿಎಫ್ ವ್ಯೂಹದಲ್ಲಿ ನರಹಂತಕ ವೀರಪ್ಪನ್
ಮಧುರೈ : ಮಲೆ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ನರಹಂತಕ ವೀರಪ್ಪನ್, ಕರ್ನಾಟಕ ಹಾಗೂ ತಮಿಳುನಾಡು ವಿಶೇಷ ಕಾರ್ಯಪಡೆ ಪೊಲೀಸರ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಆರ್.ರಾಜಗೋಪಾಲನ್ ತಿಳಿಸಿದರು.
ಪೊಲೀಸರ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ವೀರಪ್ಪನ್ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಗೋಪಾಲನ್ ತಿಳಿಸಿದರು. ಶೀಘ್ರದಲ್ಲೇ ವೀರಪ್ಪನ್ ಬಂಧನ ಸಾಧ್ಯವಾಗುವ ಕುರಿತು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಬಂದಿರುವ ರಾಜಗೋಪಾಲನ್- ಎಸ್‌ಟಿಎಫ್ ಕಾರ್ಯಾಚರಣೆಯ ವಿವರಗಳನ್ನು ನೀಡಿದರು.
ತಮಿಳುನಾಡಿನ ಇಲಂಜಿಕರೈ, ಕಟ್ಟಾಕರೈ ಹಾಗೂ ಪಾಲೂರು ಮತ್ತು ಕರ್ನಾಟಕದ ತಂಗಡಿ ಪ್ರದೇಶಗಳನ್ನು ಪೊಲೀಸರು ತಮ್ಮ ಕಾರ್ಯಾಚರಣೆಯ ಕೇಂದ್ರಗಳಾಗಿಸಿಕೊಂಡಿದ್ದಾರೆ. ಉಭಯ ರಾಜ್ಯಗಳ ಪೊಲೀಸ್ ಅಧಿಕಾರಿಗಳು ವೀರಪ್ಪನ್ ಶಿಕಾರಿಯಲ್ಲಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆ ಎಂದು ರಾಜಗೋಪಾಲನ್ ತಿಳಿಸಿದರು.
ವೀರಪ್ಪನ್ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸುವ ಸಾಧ್ಯತೆಗಳನ್ನು ತಮಿಳುನಾಡು ಪೊಲೀಸ್ ವರಿಷ್ಠರು ಸ್ಪಷ್ಟವಾಗಿ ತಳ್ಳಿಹಾಕಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications