ತೀರದ ವಿದ್ಯುತ್ ಕೊರತೆ: ಲೋಡ್‌ಶೆಡ್ಡಿಂಗ್ ಅವಧಿ ಹೆಚ್ಚಳಕ್ಕೆ ಸೂಚನೆ
ಬೆಂಗಳೂರು: ಮುಂದಿನ ಎರಡು ತಿಂಗಳು ರಾಜ್ಯದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಅವಧಿ ಹೆಚ್ಚಿಸುವಂತೆ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಸೂಚನೆ ನೀಡಿದೆ.
ಕಳೆದ ವರ್ಷ ಕಡಿಮೆ ಮಳೆ ಸುರಿದಿರುವುದರಿಂದ ಜಲ ವಿದ್ಯುತ್ ಉತ್ಪಾದನೆ ಕುಸಿದಿದೆ. ಶಾಖೋತ್ಪನ್ನ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆಯಾಗಿಲ್ಲ. ಆದ್ದರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ವಿದ್ಯುತ್ ನಿಗಮಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಹೇರುವುದು ಅನಿವಾರ್ಯವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಏಪ್ರಿಲ್ 29ರಂದು ರಾಜ್ಯ ವಿದ್ಯುತ್ ಪರಿಸ್ಥಿತಿ ಪರಿಶೀಲನ ಸಮಿತಿ ಲೋಡ್ ಶೆಡ್ಡಿಂಗ್ ಅವಧಿ ಹೆಚ್ಚಿಸುವ ಬಗ್ಗೆ ಸಭೆ ಸೇರಿ ತೀರ್ಮಾನ ಕೈಗೊಳ್ಳಲಿದೆ. ದಕ್ಷಿಣ ಭಾರತದಲ್ಲೇ ಈಗ ವಿದ್ಯುತ್ ಅಭಾವ ತಲೆದೋರಿದ್ದು, ಕನಿಷ್ಠ 50 ಸೈಕಲ್ಸ್ ಇರಬೇಕಾದ ವಿದ್ಯುತ್ ಪ್ರಮಾಣ 47.8ಕ್ಕೆ ಇಳಿದಿದೆ. ಇದು ವಿದ್ಯುತ್ ಜಾಲಕ್ಕೆ ಅಪಾಯಕಾರಿ ಸೂಚನೆ ಎಂದು ವಿದ್ಯುತ್ ಪ್ರಾಧಿಕಾರದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ನೆರೆ ರಾಜ್ಯದಿಂದಲೂ ವಿದ್ಯುತ್ ಖರೀದಿಸುವ ಅವಕಾಶ ಇಲ್ಲ. ಟಾಟಾ ಕಂಪೆನಿಯಿಂದ ವಿದ್ಯುತ್ ಖರೀದಿಸಲು ಪ್ರಯತ್ನಿಸಲಾಗಿದೆ ಎಂದು ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ವಿ.ಪಿ. ಬಳಿಗಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications