ವಿದ್ಯಾಪೀಠ ಟ್ರಸ್ಟ್‌ನಿಂದ ಬಾಲಗಂಗಾಧರನಾಥ ಸ್ವಾಮೀಜಿ ಉಚ್ಚಾಟನೆ
ಶಿವಮೊಗ್ಗ : ಆದಿಚುಂಚನಗಿರಿ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷ ಸ್ಥಾನದಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಉಚ್ಚಾಟನೆ ಮಾಡಲು ಟ್ರಸ್ಟ್‌ನ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಉತ್ತಮ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಆರಂಭವಾದ ವಿದ್ಯಾಪೀಠದಲ್ಲಿ 11 ಮಂದಿ ಟ್ರಸ್ಟಿಗಳಿದ್ದು , ಅವರಲ್ಲಿ ಆರು ಮಂದಿ ಟ್ರಸ್ಟಿಗಳು ಬಾಲಗಂಗಾಧರ ನಾಥ ಸ್ವಾಮೀಜಿಯವರನ್ನು ಟ್ರಸ್ಟ್‌ನ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ನಿರ್ಧಾರವನ್ನು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರು. ಟ್ರಸ್ಟ್‌ನಲ್ಲಿ ಮೂಡಿದ ಒಡಕಿಗೆ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿಗಳ ಮಿತಿ ಮೀರಿದ ವರ್ತನೆಯೇ ಕಾರಣವೆಂದು ಟ್ರಸ್ಟಿಗಳು ಅಭಿಪ್ರಾಯಪಟ್ಟಿದ್ದಾರೆ.
ಸ್ವಾಮೀಜಿ ಮೇಲೆ ಟ್ರಸ್ಟಿಗಳು ಮಾಡಿರುವ ಆಕ್ಷೇಪಗಳು
- ಶಾಖಾಮಠದ ಸ್ವಾಮಿ ಪ್ರಸನ್ನನಾಥ ಅವರು ಶಾಲಾಆಡಳಿತ ವಿಷಯದಲ್ಲಿ ಆಗಾಗ ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡಿ, ಶಾಲೆಯ ಸಿಬ್ಬಂದಿ ವರ್ಗದ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ.
- ಸ್ವಾಮಿ ಪ್ರಸನ್ನನಾಥರ ಬಗ್ಗೆ ಬಾಲಗಂಗಾಧರ ನಾಥ ಸ್ವಾಮೀಜಿ ಅವರಿಗೆ ದೂರು ನೀಡಿದ್ದರೂ, ಅವರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.
- 1996 ರಿಂದಲೂ ಟ್ರಸ್ಟ್‌ನ ಸಭೆಯನ್ನು ನಡೆಸಿಲ್ಲ. ಹಣಕಾಸಿನ ಲೆಕ್ಕವನ್ನೂ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದ ಟ್ರಸ್ಟ್‌ನ ಅಧಿಕಾರಿಗಳನ್ನು ಸ್ವಾಮೀಜಿ ದಬಾಯಿಸಿದ್ದಾರೆ.
- ಪ್ರಸನ್ನ ನಾಥ ಸ್ವಾಮೀಜಿಯವರ ಚಾಡಿ ಮಾತಿಗೆ ಬಾಲಗಂಗಾಧರನಾಥ ಸ್ವಾಮೀಜಿಗಳು ಕಿವಿಕೊಡುತ್ತಿದ್ದಾರೆ.
ಖಜಾಂಚಿ ಎನ್. ಜಯರಾಮ್, ಆಂತರಿಕ ಲೆಕ್ಕ ಪರಿಶೋದಕ ಜಿ. ಲಿಂಗರಾಜು, ಉಪಾಧ್ಯಕ್ಷ ನರಸಿಂಹ ಗೌಡ, ಸದಸ್ಯರಾದ ರಾಮಪ್ಪ, ರಾಮಕೃಷ್ಣಗೌಡ ಹಾಗೂ ಗಂಗನರಸೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications