ರಾಜ್ಯಸಭೆ: ಮಲ್ಯಗೆ ಜನತಾ ಪರಿವಾರದ ಬೆಂಬಲ, ಕಾಂಗ್ರೆಸ್ ಪಟ್ಟಿ ಸಿದ್ಧ
ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ಮಾರ್ಚ್ 27 ರಂದು ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಖ್ಯಾತ ಮದ್ಯೋದ್ಯಮಿ ವಿಜಯ್ ಮಲ್ಯ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಬಿಂಬಿಸಲು ಜನತಾ ಪರಿವಾರ ನಿರ್ಧರಿಸಿದ್ದರೆ, ಜನಾರ್ಧನ ಪೂಜಾರಿ, ಪ್ರೇಮಾ ಕಾರ್ಯಪ್ಪ ಹಾಗೂ ರಾಜ ಶೇಖರನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನಿರಾಕರಿಸಿರುವುದರಿಂದ ಮಲ್ಯ ಅವರನ್ನು ತನ್ನ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜನತಾ ಪರಿವಾರ ತೀರ್ಮಾನಿಸಿದೆ. ಸಂಯುಕ್ತ ಜನತಾದಳ ರಾಜ್ಯಾಧ್ಯಕ್ಷ ಸಿ.ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಜಾತ್ಯತೀತ ಜನತಾದಳದ ಸಿ.ಎಂ.ಇಬ್ರಾಹಿಂ ಅವರ ಹೆಸರು ಪ್ರಸ್ತಾಪವಾದರೂ, ಜನತಾ ಪರಿವಾರದ ಕೆಲವರ ವಿರೋಧ ವ್ಯಕ್ತವಾದುದರಿಂದ ಇಬ್ರಾಹಿಂ ಬದಲಿಗೆ ಮಲ್ಯರನ್ನು ರಾಜ್ಯಸಭೆಗೆ ಕಳಿಸಲು ನಿರ್ಧರಿಸಲಾಯಿತು. ಕಾಂಗ್ರೆಸ್‌ನ ಹೆಚ್ಚುವರಿ ಸದಸ್ಯರು ಹಾಗೂ ಬಿಜೆಪಿಯ ಅತೃಪ್ತ ಶಾಸಕರ ಬೆಂಬಲದಿಂದ ಮಲ್ಯ ಗೆಲ್ಲುವರೆಂದು ನಂಬಲಾಗಿದೆ.
ಸಂಯುಕ್ತ ಜನತಾದಳದ ಮುಖಂಡರಾದ ಪಿಜಿಆರ್ ಸಿಂಧ್ಯಾ, ಬಿ.ಸೋಮಶೇಖರ್, ಎಂ.ಪಿ.ಪ್ರಕಾಶ್, ಬಿ.ಎನ್.ಬಚ್ಚೇಗೌಡ, ಎ.ಬಿ.ಪಾಟೀಲ್, ಬಸವರಾಜ ಹೊರಟ್ಟಿ , ಬಸವರಾಜ ರಾಯರೆಡ್ಡಿ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಪಟ್ಟಿ ಅಂತಿಮ : ಕೇಂದ್ರದ ಮಾಜಿ ಸಚಿವ ಸಾಲಮೇಳ ಖ್ಯಾತಿಯ ಜನಾರ್ಧನ ಪೂಜಾರಿ, ಮಾಜಿ ಸಂಸದ ಎಂ.ವಿ.ರಾಜಶೇಖರನ್ ಹಾಗೂ ಬೆಂಗಳೂರಿನ ಮಾಜಿ ಮೇಯರ್ ಪ್ರೇಮಾ ಕಾರ್ಯಪ್ಪ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಸದಸ್ಯ ಬಲ ಹೊಂದಿದ್ದು - ತಲಾ 45 ಮತಗಳಂತೆ ಮೂವರೂ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತವಾಗಿದೆ. ಆದರೆ, ಕಾಂಗ್ರೆಸ್‌ನ 15 ಸಹ ಸದಸ್ಯರ ಮತಗಳು ಯಾರಿಗೆ ದೊರಕಲಿವೆ ಎನ್ನುವ ವಿಷಯ ಕುತೂಹಲ ಮೂಡಿಸಿದೆ. ಈ ಸಹ ಸದಸ್ಯರ ಮತಗಳನ್ನು ಪಡೆಯಲು ವಿಜಯ ಮಲ್ಯ ಹಾಗೂ ಬಿಜೆಪಿ ಅಭ್ಯರ್ಥಿ ಡಿ.ಕೆ.ತಾರಾದೇವಿ ತೀವ್ರ ಸ್ಪರ್ಧೆ ನಡೆಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications