ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ರಾಮ! ಅಹ್ಮದಾಬಾದ್‌ನಲ್ಲಿ ಬೆಂಕಿ, ರಕ್ತ ಹಾಗೂ ಹಗಲು ದರೋಡೆ

By Staff
|
Google Oneindia Kannada News

*ಪಿಟಿಐ/ಇನ್ಫೋ ವಾರ್ತೆ

ಅಹ್ಮದಾಬಾದ್‌ : Oh God ! Ahmedabad is burning ಹಠಾತ್ತನೆ ಯಾರೋ ಅಂಗಡಿಯಾಳಗೆ ನುಗ್ಗುತ್ತಾರೆ. ಸಿಕ್ಕ ಸಿಕ್ಕದ್ದನ್ನೆಲ್ಲಾ ಹೊತ್ತು ಕೊಂಡು ಪರಾರಿಯಾಗುತ್ತಾರೆ. ಪ್ರತಿಭಟಿಸಿದರೆ ಏಟು ಗ್ಯಾರಂಟಿ. ಗುರುವಾರ ಹೊತ್ತಿ ಉರಿದ ನಗರ ಶುಕ್ರವಾರವೂ ಪ್ರಕ್ಷುಬ್ಧ.

ಪೆಟ್ರೋಲ್‌ ಮುಗಿದುಹೋದರೆ ಗಾಡಿಯನ್ನು ತಳ್ಳಬೇಕು. ಬಂಕುಗಳು ಬಂದ್‌. ಸಿ.ಜಿ.ರಸ್ತೆಯಲ್ಲೇನೋ ಪ್ರಮುಖ ಕೆಲಸವಿದೆ. ಅಲ್ಲಿನ ಯಾವುದೋ ಆಸ್ಪತ್ರೆಗೆ ಹೋಗಬೇಕು. ಆಟೋ ಬರುವುದಿಲ್ಲ. ಇದು ಅಹ್ಮದಾಬಾದ್‌ನ ಈ ಹೊತ್ತು. ಆಶ್ರಮ ರಸ್ತೆ, ಸ್ಯಾಟಲೈಟ್‌ ಅಥವಾ ಗುರುಕುಲ ಹೀಗೆ, ನಗರದ ಪ್ರಮುಖ ಜಾಗೆಗಳಲ್ಲಿ ಸ್ಮಶಾನ ಮೌನ. ಇದ್ದಕ್ಕಿದ್ದಂತೆ ಮೌನ ಮುರಿಯುತ್ತದೆ. ಮುರಿದರೆ, ವರ್ತಕರಿಗೆ ಶನಿಗಾಲ. ಯಾಕೆಂದರೆ, ಇಲ್ಲಿ ನಡೆಯುತ್ತಿರುವುದು ಹಗಲು ದರೋಡೆ.

ಗುರುವಾರ ಹಠಾತ್ತನೆ ಸ್ವಾಗತ್‌ ಕಾಂಪ್ಲೆಕ್ಸ್‌ನಲ್ಲಿ ಹೊತ್ತಿಕೊಂಡ ಬೆಂಕಿ ಅನೇಕ ಅವಘಡಗಳಿಗೆ ಎಡೆಮಾಡಿಕೊಟ್ಟಿದೆ. ನಗರದ ಅನೇಕ ಅಂಗಡಿಗಳಲ್ಲಿ ಹಗಲು ದರೋಡೆಗಳಾಗಿವೆ. ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಹಣ ಕಸಿಯಲಾಗಿದೆ. ಶುಕ್ರವಾರ ಕೂಡ ಇದು ಮುಂದುವರೆಯುವ ಸಾಧ್ಯತೆ ಇರುವುದರಿಂದ ವರ್ತಕರು ಅಂಗಡಿ ಮುಚ್ಚಿದ್ದಾರೆ. ಹಾಗಂತ ನೆಮ್ಮದಿಯಿಂದೇನೂ ಇಲ್ಲ. ಅಂಗಡಿಗಳ ಬಾಗಿಲು ಒಡೆಯಲೂ ದುಷ್ಕರ್ಮಿಗಳು ಹೇಸುತ್ತಿಲ್ಲ.

ಕಾರಿನ ಬಿಡಿ ಭಾಗಗಳ ಅಂಗಡಿ, ಒಡವೆ ಅಂಗಡಿ, ಜವಳಿ ಅಂಗಡಿಗಳಿಗೆ ಗುರುವಾರ ದೊಡ್ಡ ಹೊಡೆತ ಬಿದ್ದಿದ್ದು, ಶುಕ್ರವಾರ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಿದ್ದೂ ಶುಕ್ರವಾರ ಕೆಲವೆಡೆ ಲೂಟಿ ಪ್ರಕರಣಗಳು ವರದಿಯಾಗಿವೆ. ಬಿಗಿ ಪೊಲೀಸ್‌ ಪಹರೆ ಹಾಗೂ ಮಿಲಿಟರಿ ಕಾರ್ಯ ಪಡೆ ನಿಯೋಜಿತವಾಗಿರುವುದರಿಂದ ಅವಘಡಗಳ ತೀವ್ರತೆ ಗುರುವಾರದಷ್ಟಿಲ್ಲ.

ಬ್ಯಾಂಕುಗಳಷ್ಟೇ ಅಲ್ಲದೆ, ಮುನ್ನಚ್ಚರಿಕೆ ಕ್ರಮವಾಗಿ ಎಟಿಎಂ ಕೌಂಟರುಗಳನ್ನೂ ಮುಚ್ಚಲಾಗಿದೆ. ತುರ್ತು ಹಣದ ಅಗತ್ಯವಿರುವ ಜನ ಪರದಾಡುವಂತಾಗಿದೆ. ಬಸ್ಸು, ಟ್ಯಾಕ್ಸಿ, ರಿಕ್ಷಾಗಳ ಸಂಚಾರ ಅಲ್ಲಲ್ಲಿ ಕಂಡುಬಂದರೂ, ದಿನ ನಿತ್ಯದಂತಿಲ್ಲ.

ಕೇರಳ ವರದಿ : ವಿಎಚ್‌ಪಿ ಕರೆ ನೀಡಿರುವ ರಾಷ್ಟ್ರ ವ್ಯಾಪಿ ಬಂದ್‌ಗೆ ಕೇರಳದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಬಸ್ಸುಗಳು, ರಿಕ್ಷಾ ಹಾಗೂ ಟ್ಯಾಕ್ಸಿಗಳ ಸಂಚಾರ ಸ್ಥಗಿತವಾಗಿವೆ. ರಾಜ್ಯಾದ್ಯಂತ ಬಿಗಿ ಪೊಲೀಸ್‌ ಪಹರೆಯನ್ನು ನಿಯೋಜಿಸಲಾಗಿದೆ. ಉತ್ತರ ಕೇರಳದ ಆಯಕಟ್ಟಿನ ಜಾಗೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಭುವನೇಶ್ವರಕ್ಕೆ ತಟ್ಟದ ಬಿಸಿ : ವಿಹೆಚ್‌ಪಿ ಪ್ರಾಯೋಜಿತ ಭಾರತ್‌ ಬಂದ್‌ಗೆ ಒರಿಸ್ಸಾದಲ್ಲಿ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ . ಜನ ಜೀವನ ಎಂದಿನಂತಿದೆ, ಆದರೆ ಮುಂದೇನಾದೀತು ಅನ್ನುವ ಆತಂಕ ಒಳಗೇ ಸುಳಿದಾಡುತ್ತಿದೆ. ನೂತನ ರಾಜ್ಯ ಜಾರ್ಖಂಡ್‌ನಲ್ಲೂ ಇದೇ ಪರಿಸ್ಥಿತಿ.

ವಾಷಿಂಗ್ಟನ್‌ : ಸಬರಮತಿ ಎಕ್ಸ್‌ಪ್ರೆಸ್‌ ರೈಲ್‌ಗೆ ಬೆಂಕಿ ಹಚ್ಚುವ ಮೂಲಕ ಹಲವಾರು ಮುಗ್ಧರ ಹತ್ಯೆಗೆ ಕಾರಣವಾದ ದುಷ್ಕರ್ಮಿಗಳ ಕೃತ್ಯಗಳನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಇದೇ ಸಂದಭದಲ್ಲಿ ಭಾರತದಲ್ಲಿ ನಡೆಯುವ ಕೋಮು ಘರ್ಷಣೆಯ ಬಗೆಗೆ ಆತಂಕವನ್ನೂ ವ್ಯಕ್ತಪಡಿಸಿದೆ.

ಅನೇಕ ಮುಗ್ಧರು ಹಿಂಸಾಚಾರದಲ್ಲಿ ಜೀವ ಕಳೆದುಕೊಳ್ಳುತ್ತಿರುವುದಕ್ಕೆ ಅಮೆರಿಕ ಖೇದ ವ್ಯಕ್ತಪಡಿಸುತ್ತದೆ. ಭಾರತದ ಜನತೆ ಹಾಗೂ ಸರ್ಕಾರಕ್ಕೆ ಈ ಪರಿಸ್ಥಿತಿ ನಿಭಾಯಿಸುವ ಶಕ್ತಿ ದೊರೆಯಲಿ. ಮೃತರಿಗೆ ಅಮೆರಿಕ ದೇಶದ ಸಾಂತ್ವನಗಳು ಎಂದು ಅಮೆರಿಕೆಯ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ಫಿಲ್‌ ರೀಕರ್‌ ಹೇಳಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X