‘ಮನುಷ್ಯರನ್ನು ದೇವರು ಇನ್ನೂ ನಂಬುತ್ತಾನೆ, ಅದಕ್ಕೇ ಮಕ್ಕಳನ್ನು ಕೊಡುತ್ತಾನೆ!’
ಬೆಂಗಳೂರು : ಅದೊಂದು ಪುಟ್ಟ ಕೂಟ. ಅಪ್ಪ- ಅಮ್ಮನ ಪ್ರೀತಿ ಪಡಕೊಂಡ ಮಕ್ಕಳು ನಗುತ್ತಿದ್ದರು. ಅವರನ್ನು ತಮ್ಮ ಮಕ್ಕಳನ್ನಾಗಿಸಿಕೊಂಡ ಅಪ್ಪ- ಅಮ್ಮಂದಿರು ಬೇರೆಯವರಿಗೆ ನೀವೂ ನಮ್ಮಂತೆ ಮಾಡಿ ಎಂದು ಸಾರುವಂತಿದ್ದರು.
ದತ್ತು ಮಕ್ಕಳು ಹಾಗೂ ಅವರನ್ನು ದತ್ತು ತೆಗೆದುಕೊಂಡ ತಂದೆ- ತಾಯಿಗಳ ಕೂಟ ಅದು. ವಿವಿಧ ಸರ್ಕಾರೇತರ ಸಂಸ್ಥೆಗಳೂ ಅಲ್ಲಿದ್ದವು. ಇದು ಭಾನುವಾರದ ವಿಶೇಷ. ಸಭೆಯನ್ನು ಉದ್ಘಾಟಿಸಿದ ನಗರ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ, ಇವತ್ತಿನ ಹೊಯ್ದಾಟದ ಜಗತ್ತಿನಲ್ಲೂ ಮಾನವೀಯತೆ ಬದುಕಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಅಪ್ಪ- ಅಮ್ಮಂದಿರೇ ಸಾಕ್ಷಿ. ದೇವರಿಗೆ ಇನ್ನೂ ಮನುಷ್ಯನ ಬಗ್ಗೆ ಒಲವಿದೆ, ನಂಬಿಕೆಯಿದೆ. ಅದಕ್ಕೇ ಮಕ್ಕಳನ್ನು ಕೊಡುತ್ತಾನೆ. ಅಪ್ಪ- ಅಮ್ಮ ಕಳಕೊಂಡ ಮಕ್ಕಳಿಗೂ ಬೇರೆ ಅಪ್ಪ- ಅಮ್ಮನ ಕೊಡುತ್ತಾನೆ. ಇದು ದತ್ತು ತೆಗೆದುಕೊಳ್ಳುವುದರ ಮೂಲಕ ಸಾಧ್ಯವಾಗುತ್ತಿದೆ ಎಂದರು.
ದತ್ತು ತೆಗೆದುಕೊಳ್ಳುವವರು ದತ್ತು ಪಡೆದ ಮಕ್ಕಳಿಗೆ, ತಾವು ಜನ್ಮ ನೀಡಿದ ತಂದೆ- ತಾಯಿ ಅಲ್ಲ ಎಂಬ ವಿಷಯವನ್ನು ತಿಳಿಸಬೇಕೆ ಬೇಡವೇ ಎಂಬ ಜಿಜ್ಞಾಸೆಗೆ ಸಂಸ್ಥೆಗಳೇ ಉತ್ತರ ಕೊಡಬೇಕು ಎಂದು ವಾತ್ಸಲ್ಯ ಚಾರಿಟಬಲ್ ಟ್ರಸ್ಟ್‌ಗೆ ಸಾಂಗ್ಲಿಯಾನ ಮನವಿ ಮಾಡಿದರು.
ದತ್ತು ಪಡೆಯಲು ಮಕ್ಕಳ ಬಗೆಗಿನ ಪ್ರೀತಿಯ ತುಡಿತ ಕಾರಣವಾಗಬೇಕೇ ವಿನಃ ಯಃಕಶ್ಚಿತ್ ಚಾರಿಟಿಗಾಗಿ ದತ್ತು ಎನ್ನುವಂತಾಗಬಾರದು. ಹಾಗೆ ಆಗುವ ಪ್ರಮೇಯಗಳು ಖಂಡಿತ ಕಡಿಮೆ. ದತ್ತು ತೆಗೆದುಕೊಳ್ಳುವ ಮಕ್ಕಳಿಗೆ ತಾವು ಪರಕೀಯರು ಅನ್ನುವ ಪ್ರಜ್ಞೆ ಕಾಡದಂತೆ ನೋಡಿಕೊಳ್ಳಬೇಕು. ಸ್ವಂತ ಮಕ್ಕಳಂತೆಯೇ ಅವರನ್ನೂ ಬೆಳೆಸಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಕರೆ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನಾ ವಾಚ್












Click it and Unblock the Notifications