‘ಬರಹದ ಮೊರೆ ಹೋಗದಿದ್ದರೆ ಚಿಕ್ಕ ವಯಸ್ಸಿನಲ್ಲೇ ಸತ್ತು ಹೋಗುತ್ತಿದ್ದೆ!’
ನವ ದೆಹಲಿ : ಬರೆಯುವದನ್ನು ನಾನು ಹಚ್ಚಿಕೊಳ್ಳದಿದ್ದರೆ ನನ್ನ ಹತಾಶೆ ಮುಗಿಲು ಮುಟ್ಟಿ, ಚಿಕ್ಕ ವಯಸ್ಸಿನಲ್ಲೇ ಸಾಯುತ್ತಿದ್ದೆನೇನೋ. ನನ್ನ ಗಂಡ ಕೊಲೆಯಾದರು. ಆಗ ಅವರ ವಯಸ್ಸು 26. ಆ ನಂತರ ನನ್ನ ಜೀವನಾನುಭವ ಅಂತಿಂಥದ್ದಲ್ಲ. 1969ರಲ್ಲಿ ಬೃಂದಾವನದಲ್ಲಿ ವಿಧವೆಯರ ಕಷ್ಟವನ್ನು ಕಣ್ಣಾರೆ ಕಂಡವಳು, ಅನುಭವಿಸಿದವಳು ನಾನು. ಮಾಂಸ ಮಾರುವವರ ಕಂಡೆ, ಕಸಾಯಿ ಖಾನೆಯಲ್ಲಿ ಕೆಲಸ ಮಾಡಿದೆ. ಈ ಅನುಭವಗಳು ಇಲ್ಲದಿದ್ದರೆ ನನ್ನ ಅನುಭವ ಹರಳುಗಟ್ಟುತ್ತಿರಲಿಲ್ಲ, ಬರಹ ಹುಟ್ಟುತ್ತಿರಲಿಲ್ಲ.
ಅಸ್ಸಾಮಿ ಲೇಖಕಿ ಇಂದಿರಾ ಗೋಸ್ವಾಮಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ. ಸಂದರ್ಭ : ಭಾನುವಾರ, ಜ್ಞಾನಪೀಠ ಪ್ರಶಸ್ತಿ ಪ್ರದಾನ ಸಮಾರಂಭ. 36ನೆಯ ಜ್ಞಾನಪೀಠ (2000ನೇ ಇಸವಿಗೆ) ಪ್ರಶಸ್ತಿ ಈ ಬಾರಿ ಗೋಸ್ವಾಮಿ ಲೇಖನಿಗೆ. ಮಮೋನಿ ರಾಯ್ಸಮ್ (ತಾಯಿಯ ಮುತ್ತು) ಅಂದರೆ ಅಸ್ಸಾಮಿಗಳ ನೆಚ್ಚು. ಇದು ಇಂದಿರಾ ಗೋಸ್ವಾಮಿಯ ಪ್ರೀತಿಯ ಹೆಸರು.
ಶಿವ ತಾಂಡವವಾಡಿದ ತಾಣ ನನ್ನ ರಾಜ್ಯ ಅಸ್ಸಾಂ. ಈಗ ಗುಂಡು- ಬಾಂಬ್‌ಗಳ ಸ್ಫೋಟದಿಂದ ತಲ್ಲಣಗೊಂಡಿದೆ. ನೀಲ ಪರ್ವತಗಳ, ಕೆಂಪು ನದಿಗಳ ನನ್ನೂರಿನಲ್ಲಿ ಮತ್ತೆ ಶಾಂತಿ ನೆಲೆಸುವುದು ಎಂಬ ವಿಶ್ವಾಸವಿದೆ...ಹೇಳುವಾಗ ಗೋಸ್ವಾಮಿ ಗದ್ಗದಿತರಾಗಿದ್ದರು.
ಭಾರತೀಯ ಜ್ಞಾನಪೀಠ ಅಧ್ಯಕ್ಷೆ ಇಂದು ಜೈನ್ ಸ್ವಾಗತ ಭಾಷಣ ಸೊಗಸಾಗಿತ್ತು. ಗೋಸ್ವಾಮಿ ಅಸ್ಸಾಮಿನವರು ಮಾತ್ರವಲ್ಲ, ಅವರು ಆಸ್ಮಾನ್ (ಆಕಾಶ) ಎಂದು ಇಂದು ಜೈನ್ ಹೇಳಿದಾಗ ಕರತಾಡನ. ಗೋಸ್ವಾಮಿಯವರಿಗೆ ಚಂದನ ತಿಲಕವಿಟ್ಟ ಇಂದು ಜೈನ್, 18 ಭಾಷೆಗಳ ಸಾಂಕೇತಿಕ ಹೂಗುಚ್ಛವನ್ನು ನೀಡಿದರು. ಅತ್ಯುತ್ತಮ ಎನಿಸಿರುವ ಭಾರತೀಯ ಸಾಹಿತ್ಯ ಕೃತಿಗಳು ಕಲಾತ್ಮಕ ಪ್ರಭಾವಗಳಿಗೆ ಒಳಪಟ್ಟಿದ್ದರೂ, ಅವುಗಳ ಅಂತಃಸತ್ತ್ವ ಭಾರತೀಯತೆಯ ಬಿಂಬವೇ ಆಗಿರುತ್ತದೆ. ಲೇಖಕರು ಹಾಗೂ ಪತ್ರಕರ್ತರು ಭಾರತೀಯತೆಯನ್ನು ತಮ್ಮ ಬರವಣಿಗೆಯಲ್ಲಿ ಉಳಿಸಿ ಬೆಳೆಸಬೇಕು ಎಂದು ಇಂದು ಜೈನ್ ಕರೆ ಕೊಟ್ಟರು.
ಗೋಸ್ವಾಮಿಯವರಿಗೆ ಶಾಲು ಹೊದಿಸಿ ಗೌರವಿಸಿದ ವಿ.ಎಸ್.ನೈಪಾಲ್, ಕೈಕುಲುಕಿ ನಗುವಿನೊಡನೆ ಶುಭಾಶಯ ಕೋರಿದರು. ಇದಕ್ಕೂ ಮುನ್ನ ಉಪ ರಾಷ್ಟ್ರಪತಿ ಕೃಷ್ಣಕಾಂತ್, ವಾಗ್ದೇವಿಯ ಕಂಚಿನ ಪ್ರತಿಮೆ ಮತ್ತು 5 ಲಕ್ಷ ರುಪಾಯಿ ಮೊತ್ತದ ಚೆಕ್ ನೀಡುವ ಮೂಲಕ ಗೋಸ್ವಾಮಿಯವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications