‘ದಯವಿಟ್ಟು ಗುಟ್ಕಾ ನಿಷೇಧಿಸಬೇಡಿ,ಅಡಿಕೆ ರೇಟು ಕಮ್ಮಿಯಾಗುತ್ತೆ’-ಕ್ಯಾಂಪ್ಕೋ
ಮಂಗಳೂರು : ಗುಟ್ಕಾ ನಿಷೇಧದಿಂದಾಗಿಯೇ ಅಡಿಕೆ ಬೆಲೆ ಕುಸಿದಿರುವುದಾಗಿ ಕ್ಯಾಂಪ್ಕೋ ಅಭಿಪ್ರಾಯಪಟ್ಟಿದ್ದು, ಆರೋಗ್ಯಕ್ಕೆ ಹಾನಿಕಾರಕವಲ್ಲದ ಗುಟ್ಕಾಗಳನ್ನು ನಿಷೇಧಿಸದಂತೆ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆ.
ಸಂಸ್ಥೆಯ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಭಾನುವಾರದ ಸುದ್ದಿ ಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದು, ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡುಗಳಲ್ಲಿ ಗುಟ್ಕಾ ನಿಷೇಧಿಸಲಾಗಿದೆ. ಇದೀಗ ಆಂಧ್ರಪ್ರದೇಶದಲ್ಲಿಯೂ ಗುಟ್ಕಾದ ಮೇಲೆ ನಿಷೇಧ ಹೇರಿ ಆಜ್ಞೆ ಹೊರಡಿಸಲಾಗಿದೆ. ಇದರಿಂದ ಅಡಿಕೆಯ ಬೆಲೆ ಇಳಿಮುಖವಾಗಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು.
ಗುಟ್ಕಾಕ್ಕಾಗಿಯೇ ಬಳಸುವ ಕೆಂಪು ಅಡಿಕೆಗೆ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆಯಲ್ಲಿ ಫೆಬ್ರವರಿ 23ರಿಂದ ಅಡಿಕೆ ಖರೀದಿಯನ್ನು ನಿಲ್ಲಿಸಲಾಗಿದೆ. ಗುಟ್ಕಾದಲ್ಲಿ ತಂಬಾಕಿನ ಅಂಶ ಇದೆ ಅಂತ ಎಲ್ಲ ನಮೂನೆಯ ಗುಟ್ಕಾ ಮಾರಾಟವನ್ನು ನಿಷೇಧಿಸುವುದು ಸರಿಯಲ್ಲ. ತಂಬಾಕು ರಹಿತ ಗುಟ್ಕಾ ಮಾರಾಟಕ್ಕೆ ಸರಕಾರ ಅವಕಾಶ ಮಾಡಿಕೊಡಬೇಕು ಎಂದು ನಾಗರಾಜ ಶೆಟ್ಟಿ ಸರಕಾರವನ್ನು ಆಗ್ರಹಿಸಿದರು.
ತಂಬಾಕಿನ ನೆಪವೊಡ್ಡಿ ಗುಟ್ಕಾವನ್ನು ನಿಷೇಧಿಸುವುದಿದ್ದಲ್ಲಿ, ಬೀಡಿ, ಸಿಗರೇಟು, ಮದ್ಯವನ್ನೂ ಸರಕಾರ ನಿಷೇಧಿಸಲಿ ಎಂದು ಸರಕಾರಕ್ಕೆ ಸವಾಲೆಸೆದ ಶೆಟ್ಟರು, ಆರೋಗ್ಯಕ್ಕೆ ತೀವ್ರ ಹಾನಿಯುಂಟು ಮಾಡುವ ಗುಟ್ಕಾವನ್ನು ನಿಷೇಧಿಸುವುದಕ್ಕೆ ತಮ್ಮದೇನು ಅಭ್ಯಂತರವಿಲ್ಲ ಎಂದರು.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications