ಗ್ರಾಮೀಣ ಕೃಪಾಂಕದ ಬಗ್ಗೆ ಮೌನವಾಗಿರುವ ಸರಕಾರದ ವಿರುದ್ಧ ರಿಟ್ ಅರ್ಜಿ
ಶಿವಮೊಗ್ಗ : ಗ್ರಾಮೀಣ ಕೃಪಾಂಕದ ಆಧಾರದ ಮೇಲಿನ ನೇಮಕಾತಿಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪರಿಗಣಿಸದೇ ಇರುವ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆಯನ್ನು ಆರೋಪಿಸಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಜಿಲ್ಲೆಯ ಹಿರಿಯ ನ್ಯಾಯವಾದಿಗಳಾದ ಎಚ್. ಆರ್. ರಂಗನಾಥರಾವ್, ಡಿ.ಪಿ. ಓಡೆಯರ್, ಎಚ್. ಎಂ. ಈಶ್ವರಾರಾಧ್ಯ, ಕೆ.ವಿ. ವಾಸುದೇವ ಮೂರ್ತಿ ಈ ವಿಷಯವನ್ನು ಭಾನುವಾರದ ಸಂಯುಕ್ತ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
1998ರ ನವೆಂಬರ್ 11ರ ನಂತರ ಗ್ರಾಮೀಣ ಕೃಪಾಂಕದ ಆಧಾರದ ಮೇಲೆ ನೇಮಕಗೊಂಡವರ ಆಯ್ಕೆ ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ತೀರ್ಪು ಬಂದು ಮೂರು ತಿಂಗಳ ನಂತರವೂ ಸರಕಾರ ಗ್ರಾಮೀಣ ಕೃಪಾಂಕದ ಆಧಾರದ ಮೇಲೆ ನೇಮಕಗೊಂಡವರನ್ನು ಕೆಲಸದಿಂದ ತೆಗೆದುಹಾಕಿಲ್ಲ.
ಈಗಾಗಲೇ ನೇಮಕಗೊಂಡವರಲ್ಲಿ ಕೃಪಾಂಕ ಹೊರತುಪಡಿಸಿಯೂ ಅರ್ಹತೆಯಿದ್ದಲ್ಲಿ ಅವರನ್ನೂ ಸೇರಿಸಿ ಹೊಸ ಪಟ್ಟಿ ಸಿದ್ಧಪಡಿಸುವಂತೆ ಸರಕಾರಕ್ಕೆ ಕೋರ್ಟ್ ಸೂಚಿಸಿತ್ತು. ಆದರೆ ಈ ನಿಟ್ಟಿನಲ್ಲಿಯೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕೃಪಾಂಕ ರಹಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಜೊತೆಗೆ ಇದು ನ್ಯಾಯಾಲಯ ನಿಂದನೆ ಕೂಡ ಆಗಿರುವುದರಿಂದ ಕೃಪಾಂಕ ರಹಿತರ ಪರವಾಗಿ ಸಾರ್ವಜನಿಕ ಹಿತಾಸಕ್ತಿಯಡಿ ರಿಟ್ ಅರ್ಜಿಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications