ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿಶ್ಯಾಮ ಗೋಪಾಲ್‌ದೇ ರಾಜ್‌ ಅಪಹರಣ ಪ್ಲಾನು-ನಾಗಪ್ಪ

By Staff
|
Google Oneindia Kannada News

ಬೆಂಗ-ಳೂ-ರು : -ಗೋಪಾಲ್‌ ಒಬ್ಬ ಮಹಾ ವಂಚಕ. ಸುಳ್ಳುಪುರುಕ. ರಾಜ್‌ಕುಮಾರ್‌ ಅವರನ್ನು ಅಪಹರಿಸಿ, 50 ಕೋಟಿ ರುಪಾಯಿ ಕೇಳು ಅಂತ ವೀರಪ್ಪನ್‌ಗೆ ಹೇಳಿಕೊಟ್ಟಿದ್ದೇ ಆತ. ಅಣ್ಣಾವ್ರ ಬಿಡುಗಡೆಗೆಂದು ಕನ್ನಡಿಗರು ಕೊಟ್ಟ ದುಡ್ಡನ್ನು ಮೂಟೆಯಲ್ಲಿ ಹೊತ್ತು ತರುತ್ತಿದ್ದ. ಸಂಧಾನದ ನೆಪದಲ್ಲಿ ಬಂದ ನಾಲ್ಕೂ ಬಾರಿ ನಮ್ಮನ್ನು ಬಿಡಿಸುವ ಪ್ರಯತ್ನ ಮಾಡಲೇ ಇಲ್ಲ ಎಂದು ಎಸ್ಕೇಪ್‌ ನಾಗಪ್ಪ ಮಾರಡಗಿ ತಿಳಿಸಿದ್ದಾರೆ.

ಮೊನ್ನೆಯಷ್ಟೇ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನಕ್ಕೀರನ್‌ ಪತ್ರಿಕೆ ಸಂಪಾದಕ ಆರ್‌.ಆರ್‌.ಗೋಪಾಲ್‌ ಹೇಳಿಕೆಗಳಿಗೆ ಪ್ರತಿಯಾಗಿ ಸೋಮವಾರ ನಾಗಪ್ಪ ಮಾರಡಗಿ ಸುದ್ದಿಗೋಷ್ಠಿ ನಡೆಸಿ, ಮಾತನಾಡುತ್ತಿದ್ದರು. ಗೋಪಾಲ್‌ ಇಲ್ಲಿಗೆ ಬಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುತ್ತಿದ್ದಾನೆ. ವಾಸ್ತವವೇ ಬೇರೆ. ವೀರಪ್ಪನ್‌ ಒಬ್ಬ ಸಣ್ಣ ಕಳ್ಳನಾಗಿದ್ದ. ರಾಜಕೀಯ, ಭಾಷಾ ವ್ಯಾಜ್ಯ, ಉಗ್ರಗಾಮಿಗಳು..ಯಾವುದೂ ಅವನಿಗೆ ಗೊತ್ತಿರಲಿಲ್ಲ. ಎಲ್ಲಾ ಹೇಳಿಕೊಟ್ಟಿದ್ದೇ ಗೋಪಾಲ್‌ ಎಂದರು.

ನಾಗಪ್ಪ ಹೇಳುವಂತೆ ಅವತ್ತು ಏನಾಯಿತೆಂದರೆ....

ನನ್ನನ್ನು ಕೊಲ್ಲುವ ಸಲಹೆ ಕೊಟ್ಟದ್ದು ಇದೇ ಗೋಪಾಲ್‌. ಹೇಗೋ ಅದು ನನ್ನ ಕಿವಿಗೆ ಬಿದ್ದಿತು. ಸಂಡಾಸಿಗೆ ಹೋಗುವಾಗ ಅಣ್ಣಾವ್ರಿಗೆ ಈ ವಿಷಯ ತಿಳಿಸಿದೆ. ಅವರು ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಸೌದೆ ಕಡಿಯೋದಕ್ಕೆ ಒಂದಷ್ಟು ಮಚ್ಚುಗಳು ಅಲ್ಲಿದ್ದವು. ಒಂದನ್ನು ಪಂಚೆಯಲ್ಲಿ ಬಚ್ಚಿಟ್ಟುಕೊಂಡೆ. ಅಲ್ಲೊಂದು ಟೆಂಟ್‌ ಇತ್ತು. ಅದರಲ್ಲಿ ನನ್ನ ಹೊಡೆಯಲು ಬಂದರು. ಬಚ್ಚಿಟ್ಟುಕೊಂಡಿದ್ದ ಮಚ್ಚನ್ನು ತೆಗೆದು ಬೀಸಿದೆ. ಗೋಪಾಲ್‌ಗೂ ಏಟು ಬಿತ್ತು. ಆದರೆ, ಅವನು ವೀರಪ್ಪನ್‌ನನ್ನು ಬದುಕಿಸಿಬಿಟ್ಟ. ಒದ್ದಾಡಿಕೊಂಡು ಓಡಿ ಬಂದೆ.

ನಾನು ಓಡಿ ಬಂದ ದಿನ ನಿಜ ಹೇಳುವುದು ಅಷ್ಟು ಸುಲಭವಾಗಿರಲಿಲ್ಲ. ಅಣ್ಣಾವ್ರ ಜೀವಕ್ಕೇ ಅಪಾಯವಾಗುವ ಭಯವಿತ್ತು. ಸತ್ಯ ಕೆಂಡ ಇದ್ದ ಹಾಗೆ. ಎಷ್ಟು ದಿನ ಅಂತ ಮಡಿಲಲ್ಲಿ ಕಟ್ಟಿಕೊಳ್ಳುವುದು ಹೇಳಿ. ಅದನ್ನು ಹೇಳುವ ಕಾಲ ಈಗ ಬಂದಿದೆ. ಇಲ್ಲವಾದರೆ ಗೋಪಾಲ್‌ ಹೇಳುವ ಸುಳ್ಳನ್ನೇ ಜನ ನಂಬಿ ಬಿಡುತ್ತಾರೆ. ಮುಖ್ಯಮಂತ್ರಿ ಕೃಷ್ಣ ಮಾಡಿದ್ದು ಸರಿ. ಈ ಗೋಪಾಲನಿಂದಾಗಿ ಕರ್ನಾಟಕ, ತಮಿಳುನಾಡು ರಾಜ್ಯಗಳು ತಲೆ ತಗ್ಗಿಸುವಂತಾಯಿತು. ಗೋಪಾಲ್‌ನನ್ನು ಮೊದಲು ಬಂಧಿಸಬೇಕು. ಆಗ ಸಾಕಷ್ಟು ವಿಷಯಗಳು ಹೊರಕ್ಕೆ ಬರುತ್ತವೆ.

ಸುದ್ದಿಗೋಷ್ಠಿಯಲ್ಲಿ ಮಾರಡಗಿ ಜೊತೆ ಇದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಾಣಗೆರೆ ವೆಂಕಟರಾಮಯ್ಯ, ಇವತ್ತಿಗೂ ನಾಗಪ್ಪನವರ ಜೀವಕ್ಕೆ ಬೆದರಿಕೆ ಇದ್ದೇ ಇದೆ. ಇವರಿಗೆ ನೆರವು ಕೊಡಲು ರಾಜಕಾರಣಿಗಳೂ ಹೆದರುವ ಸ್ಥಿತಿ ಇದೆ ಎಂದು ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X