Get Updates
Get notified of breaking news, exclusive insights, and must-see stories!

‘ರಾಜ್‌ ಅಪಹರಣದ ಹಿಂದಿನ ಮಾಸ್ಟರ್‌ಮೈಂಡ್‌ ನಕ್ಕೀರನ್‌ ಗೋಪಾಲ್‌’

ಮೈಸೂರು: ರಾಜ್‌ ಅಪಹರಣ ಕಾಲದಲ್ಲಿ ಕಾಡಿನಿಂದ ನಾಡಿಗೆ ಓಡಿಬಂದ ನಾಗಪ್ಪ ಮಾರಡಗಿಯ ಸಾಹಸಗಾಥೆಗಳು, ರಾಜ್‌ ಅಪಹರಣದ ಹಿಂದಿನ ಮಾಸ್ಟರ್‌ ಮೈಂಡ್‌ ಯಾರು ಎಂಬ ಸಂಗತಿಗಳು ಈಗ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ನಾಗಪ್ಪ ಮಾರಡಗಿ, ವೀರಪ್ಪನ್‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿಯೇ ನಾಡಿಗೆ ಬಂದನೆಂಬ ಸತ್ಯವೂ ಬಹಿರಂಗಗೊಂಡಿದೆ.

ನಾಗಪ್ಪ ಮಾರಡಗಿ, ಮಚ್ಚಿನಿಂದ ವೀರಪ್ಪನ್‌ ತಲೆ ಕತ್ತರಿಸಲು ಮುನ್ನುಗ್ಗಿದಾಗ, ನಕ್ಕೀರನ್‌ ಪತ್ರಿಕೆಯ ಸಂಪಾದಕ ಗೋಪಾಲ್‌ ತಡೆಯದಿದ್ದಿದ್ದರೆ, ಇಷ್ಟೊತ್ತಿಗೆ ವೀರಪ್ಪನ್‌ ಎಂದೋ ಹೆಣವಾಗುತ್ತಿದ್ದ ಎಂಬ ಅಂಶಗಳೂ ಹೊರಬಿದ್ದಿವೆ. ಅಷ್ಟೇ ಅಲ್ಲ, ರಾಜ್‌ ಅಪಹರಣದ ಹಿಂದಿನ ಮಾಸ್ಟರ್‌ ಮೈಂಡ್‌ ಕೂಡ ನಕ್ಕೀರನ್‌ ಗೋಪಾಲೇ ಎಂಬ ಹೊಸ ಅಂಶವೂ ಅಸ್ಪಷ್ಟವಾಗಿ ಬೆಳಕುಕಂಡಿದೆ. ಈ ವಿಷಯವನ್ನು ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿಶೇಖರನ್‌ ಹಾಗೂ ಡಿವೈಎಸ್‌ಪಿ ಕೆ.ಎಸ್‌. ತಮ್ಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಮಿಳುನಾಡಿನ ಕ್ಯೂ ಬ್ರಾಂಚ್‌ ಪೊಲೀಸರು ಬಂಧಿಸಿರುವ ಹಾಗೂ ಈಗ ಕೊಳ್ಳೇಗಾಲ ಪೊಲೀಸರ ವಶದಲ್ಲಿರುವ ತಮಿಳು ಉಗ್ರಗಾಮಿ ಸಂಘಟನೆ (ಟಿಎನ್‌ಎಲ್‌ಎ) ಸದಸ್ಯರಾದ ಅತಿಲ್‌, ಸೆಲ್ವನ್‌, ಇನಿಯನ್‌, ಸೆಳಿಯನ್‌ ಎಂಬ ಆರೋಪಿಗಳು, ವಿಚಾರಣೆಯ ಸಮಯದಲ್ಲಿ ಈ ಹೊಸ ವಿಷಯಗಳನ್ನು ಕರ್ನಾಟಕ ಪೊಲೀಸರಿಗೆ ತಿಳಿಸಿದ್ದಾರೆ.

ನಾಗಪ್ಪ ಮಾರಡಗಿ ತಪ್ಪಿಸಿಕೊಂಡು ಬರುವಾಗ ವೀರಪ್ಪನ್‌ ಹಾಗೂ ಪುಟ್ಟ ಬಾಲಕ ಮುಗಿಲನ್‌ ಮಾತ್ರ ಇದ್ದರು. ಈ ಸಂದರ್ಭದ ಲಾಭ ಪಡೆದ ನಾಗಪ್ಪ ಕಾಡುಗಳ್ಳ ವೀರಪ್ಪನ್‌ ಮೇಲೆ ಮಚ್ಚಿನಿಂದ ದಾಳಿ ಮಾಡಿದರು, ಏಟು ತಪ್ಪಿಸಿಕೊಳ್ಳುವ ಯತ್ನದಲ್ಲಿ ವೀರಪ್ಪನ್‌ ಕೈಗೆ ಬಲವಾದ ಗಾಯವಾಯಿತು. ನಾಗಪ್ಪ ಮತ್ತೆ ದಾಳಿಗೆ ಯತ್ನಿಸಿದಾಗ ನಕ್ಕೀರನ್‌ ಗೋಪಾಲ್‌ ತಡೆದು, ಪ್ರಹಾರ ಮಾಡಿದರು, ನಾಗಪ್ಪ ನಾಡಿನತ್ತ ಓಡಿದರು ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ.

ತಮ್ಮನ್ನು ವೀರಪ್ಪನ್‌ಗೆ ಪರಿಚಯಿಸಿದ್ದೂ ನಕ್ಕೀರನ್‌ ಗೋಪಾಲ್‌ ಅವರೆ ಎಂದು ಬಂಧಿತ ಉಗ್ರರು ಹೇಳಿದ್ದಾರೆ. ಕೇವಲ ಸಾವಿರಾರು ರುಪಾಯಿಗೆ ತೃಪ್ತಿ ಪಟ್ಟುಕೊಳ್ಳುತ್ತಿದ್ದ ವೀರಪ್ಪನ್‌ಗೆ ಲಕ್ಷಾಂತರ ರುಪಾಯಿ ಆಸೆ ಹುಟ್ಟಿಸಿ, ರಾಜ್‌ಕುಮಾರ್‌ರನ್ನು ಅಪಹರಿಸುವಂತೆ ಪ್ರಚೋದಿಸಿದ್ದೂ, ಷರತ್ತು ತಯಾರಿಸಿದ್ದು ಎಲ್ಲವೂ ಗೋಪಾಲೇ, ಇದಕ್ಕೂ ತಮಗೂ ಏನೂ ಸಂಬಂಧ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಡಾ. ಬಾನು ಕಾಡಿಗೆ ಹೋಗಿದ್ದೇಕೆ? : ಡಾ. ಬಾನು ಕಾಡಿಗೆ ಹೋಗಿದ್ದು, ರಾಜ್‌ಕುಮಾರ್‌ಗೆ ಚಿಕಿತ್ಸೆ ನೀಡಲಿಕ್ಕಾಗಲೀ ಅಥವಾ ಬಿಡಿಸಿಕೊಂಡು ಬರುವುದಕ್ಕಾಗಲೀ ಅಲ್ಲ. ನಾಗಪ್ಪ ಮಾರಡಗಿಯ ಮಚ್ಚಿನೇಟಿನಿಂದ ಗಾಯಗೊಂಡಿದ್ದ ವೀರಪ್ಪನ್‌ನ ಪ್ರಾಣ ಉಳಿಸಲು ಎಂದೂ ಅವರು ಹೇಳಿದ್ದಾರೆ.

ತಮಿಳುನಾಡು ಸರಕಾರವನ್ನು ಹೆದರಿಸಲು ಪ್ರತ್ಯೇಕ ತಮಿಳುರಾಜ್ಯದ ಧ್ವಜ ಹಾರಿಸುವಂತೆ ಸಲಹೆ ನೀಡಿದ್ದೂ ಗೋಪಾಲ್‌ ಹಾಗೂ ಶಿವಸುಬ್ರಹ್ಮಣ್ಯಂ ಅವರೇ. ಈ ಚಿತ್ರವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ, ಹಲವು ರೀತಿಯ ಪ್ರಯೋಜನ ಪಡೆದರು ಎಂದು ಬಂಧಿತರು ಹೇಳಿಕೆಯಲ್ಲಿ ತಿಳಿಸಿರುವುದಾಗಿ ಡಿವೈಎಸ್‌ಪಿ ತಮ್ಮಯ್ಯ ಹೇಳಿದ್ದಾರೆ.

ರಾಜ್‌ ಅಪಹರಣ ಕಾಲದಲ್ಲಿ ಸರಕಾರಕ್ಕೆ ವಿಧಿಬೇಕಾದ ಷರತ್ತುಗಳೇನು ಎಂಬುದನ್ನು ಪಟ್ಟಿ ಮಾಡುತ್ತಿದ್ದವರೂ ನಕ್ಕೀರನ್‌ ಗೋಪಾಲೇ. ವೀರಪ್ಪನ್‌ ಹಾಗೂ ಗೋಪಾಲ್‌ ಮಾತ್ರವೇ ಗಂಟೆಗಟ್ಟಲೆ ಮಾತುಕತೆ ನಡೆಸಿ, ತಂತ್ರ ರೂಪಿಸುತ್ತಿದ್ದರು. ಹೊರಜಗತ್ತಿಗೆ ಈ ವಿಷಯಗಳಾವುದೂ ಗೊತ್ತಾಗದಂತೆ ಗೌಪ್ಯವಾಗಿಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

(ಮೈಸೂರು ಪ್ರತಿನಿಧಿಯಿಂದ)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+