ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಕ್ರಿಕೆಟ್‌ ತಂಡ: ಕೆಲವರು ಅಳುತ್ತಿದ್ದಾರೆ, ಹತಾಶರಾಗಿದ್ದಾರೆ..

By Staff
|
Google Oneindia Kannada News

ಪೋರ್ಟ್‌ ಎಲಿಜಬೆತ್‌ : ಕೆಲವರು ಅಳುತ್ತಿದ್ದಾರೆ. ಕೆಲವರು ಮಾತು ಕಳೆದುಕೊಂಡಿದ್ದಾರೆ. ಕೆಲವರು ಒಳಗೊಳಗೇ ಕುದಿಯುತ್ತಿದ್ದಾರೆ- ಇದು ಪ್ರಸಕ್ತ ಭಾರತ ತಂಡದ ಮನಸ್ಥಿತಿ.

ಎದುರಿಗಿನ್ನೂ ಎರಡನೆ ಕ್ರಿಕೆಟ್‌ ಟೆಸ್ಟ್‌ನ ಕೊನೆಯ ದಿನ ಬಾಕಿಯಿದೆ. ಮೂರನೇ ಟೆಸ್ಟ್‌ ಇದೋ ಬಂದೆ ಎನ್ನುತ್ತಿದೆ. ಆದರೆ ಆಡುವ ಉತ್ಸಾಹ ಯಾರಲ್ಲೂ ಉಳಿದಿಲ್ಲ ಎನ್ನುತ್ತಾರೆ ಆನಂದ ಬಜಾರ್‌ ಪತ್ರಿಕೆಯ ಕ್ರೀಡಾ ಸಂಪಾದಕ ಸವ್ಯಸಾಚಿ ಸರ್ಕಾರ್‌. ಚೆಂಡು ವಿರೂಪಗೊಳಿಸಿದ ಆರೋಪವನ್ನು ದೃಢೀಕರಿಸಿ- ಸಚಿನ್‌, ಗಂಗೂಲಿ ಸೇರಿದಂತೆ ಭಾರತದ 6 ಮಂದಿ ಆಟ-ಗಾ-ರ-ರ ಮೇಲೆ ಪಂದ್ಯದ ರೆಫರಿ ಮೈಕ್‌ ಡಿನ್ನೆಸ್‌ ವಿಧಿಸಿರುವ ಶಿಕ್ಷೆ ತಂಡದ ಜಂಘಾಬಲವನ್ನೇ ಉಡುಗಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಆಟಗಾರರು ತಪ್ಪು ಮಾಡುವುದು ಅಥವಾ ಒರಟು ತನದಿಂದ ನಡೆದುಕೊಳ್ಳುವುದು ಹೊಸತೇನಲ್ಲ . ಆದರೆ, ಶಿಕ್ಷೆಯಾಗುವುದು ಅಪರೂಪದ ಮಾತು. ಭಾರತದ ಆಟಗಾರರಿಗೆ ಮಾತ್ರ ಪಂದ್ಯದ ರೆಫರಿಗಳು ಉದಾರ ಮನೋಭಾವ ತೋರಿಸಿದ್ದೇ ಇಲ್ಲ . ಡೊನಾಲ್ಡ್‌ ಮೆಕ್‌ಗ್ರಾಥ್‌ ಗುರುಗುಟ್ಟಿದರೆ ತೆಪ್ಪಗಿರುವ ರೆಫರಿ- ಗಂಗೂಲಿ ಊದುಮೋರೆಗೆ ಎಚ್ಚರಿಕೆ ನೀಡುತ್ತಾರೆ.

ಸೋಮವಾರ ಕೂಡ ರೆಫರಿ ಡಿನ್ನೆಸ್‌ ವರ್ತನೆ ಪಕ್ಷಪಾತ ಮುಕ್ತವೇನಲ್ಲ . ತೆಂಡೂಲ್ಕರ್‌ ಅವರನ್ನು ಆರೋಪಮುಕ್ತಗೊಳಿಸಿದ ಡಿನ್ನೆಸ್‌ ಆನಂತರ ಏಕಾಏಕಿ ಮನಸು ಬದಲಿಸುತ್ತಾರೆ. ಆರು ಮಂದಿಯ ಮೇಲೆ ಶಿಕ್ಷೆ ವಿಧಿಸುತ್ತಾರೆ. ಯಾರೂ ವಿರೋಧಿಸುವಂತಿಲ್ಲ . ಅಂತರರಾಷ್ಟ್ರೀಯ ಕ್ರಿಕೆಟ್‌ ನೀತಿಯ ಪ್ರಕಾರ ಶಿಕ್ಷೆಯನ್ನು ಮಾತನಾಡದೆ ಅನುಭವಿಸುವುದು ತಪ್ಪದು.

ವೀರೇಂದ್ರ ಷೆಹ್ವಾಗ್‌ ಮೊದಲ ಟೆಸ್ಟ್‌ನಲ್ಲಿ ಯೇ ಸೆಂಚುರಿ ಬಾರಿಸಿದ ಹುಮ್ಮಸ್ಸಿನಲ್ಲಿದ್ದ ಆಟಗಾರ. ಈಗವರು ಮೂರನೇ ಟೆಸ್ಟ್‌ನಲ್ಲಿ ಆಡುವಂತಿಲ್ಲ . ಒಬ್ಬ ಆಟಗಾರನ ಮನಸ್ಸು ಮುರಿಯಲು ಇನ್ನೇನು ಬೇಕು. ಸಚಿನ್‌ ಪರಿಸ್ಥಿತಿಯೂ ಭಿನ್ನವೇನೂ ಅಲ್ಲ . ವಿಶ್ವಖ್ಯಾತ ಸಚಿನ್‌ ಹಿಂದೆಂದೂ ಇಂಥ ಅಪಮಾನ ಅನುಭವಿಸಿದ್ದಿಲ್ಲ . ಸಚಿನ್‌ ಮಾತ್ರವಲ್ಲ, ಭಾರತ ತಂಡಕ್ಕೇನೆ ಇಂಥ ಪರಿಸ್ಥಿತಿ ಹೊಸತು. ಭಾರತೀಯರು ಸೋಲುವುದರಲ್ಲಿ ಪರಿಣತಿ ಗಳಿಸಿದವರೇ ಹೊರತು, ಗೆಲ್ಲುವುದಕ್ಕಾಗಿ ಮಸಲತ್ತು ನಡೆಸುವುದು ಅವರಿಗೆ ಗೊತ್ತಿಲ್ಲದ ವಿದ್ಯೆ.

ಡಿನ್ನೆಸ್‌ ವಿಧಿಸಿರುವ ಶಿಕ್ಷೆಯ ಸ್ವರೂಪ

  1. ಸಚಿನ್‌ ಅವರು ಮೂರನೇ ಟೆಸ್ಟ್‌ನಲ್ಲೂ ಇದೇ ರೀತಿಯ ತಪ್ಪು ಮುಂದುವರಿಸಿದಲ್ಲಿ ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗುವುದು. ಎರಡನೇ ಟೆಸ್ಟ್‌ನ ಸಚಿನ್‌ ಸಂಭಾವನೆಯಲ್ಲಿ ಶೇ. 75 ರಷ್ಟನ್ನು ಮುರಿದುಕೊಳ್ಳಲಾಗುವುದು.
  2. ಅನಗತ್ಯ ಅಪೀಲ್‌ ಮಾಡಿದ ವೀರೇಂದ್ರ ಶೆಹ್ವಾಗ್‌, ಹರ್ಭಜನ್‌ಸಿಂಗ್‌, ದೀಪ್‌ದಾಸ್‌ಗುಪ್ತ, ಶಿವಸುಂದರ್‌ದಾಸ್‌ ಕೂಡ ಒಂದು ಪಂದ್ಯದ ಅಮಾವನತಿಗೆ ಒಳಗಾಗುವ ಅವಕಾಶವಿದೆ. ಅವರ ಪಂದ್ಯದ ಸಂಭಾವನೆಯಲ್ಲೂ ಶೇ.75 ರ ಕಡಿತ.
  3. ಅತಿರೇಕದ ವರ್ತನೆಯ ಹಿನ್ನೆಲೆಯಲ್ಲಿ ನಾಯಕ ಸೌರವ್‌ ಗಂಗೂಲಿ 1 ಟೆಸ್ಟ್‌ ಹಾಗೂ 2 ಏಕದಿನ ಪಂದ್ಯಗಳಿಂದ ವಂಚಿತರಾಗಿರುವ ಸಾಧ್ಯತೆಯಿದೆ. ಶಿಕ್ಷೆಯ ಸ್ಪಷ್ಟ ಸ್ವರೂಪ ಮಂಗಳವಾರ ಪ್ರಕಟವಾಗಲಿದೆ.
(ಇನ್ಫೋ ಇನ್‌ಸೈಟ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X