ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿನಿಂದ ಎಸ್‌ಟಿಎಫ್‌ ಕಾಲ್ತೆಗೆಯಲಿ, ಮಾತಿಗೆ ಬನ್ನಿ-ವೀರಪ್ಪನ್‌

By Staff
|
Google Oneindia Kannada News

ಬೆಂಗಳೂರು : ನವೆಂಬರ್‌ 7ರಂದೇ ಯಾವುದೋ ವ್ಯಕ್ತಿಯ ಮೂಲಕ ವೀರಪ್ಪನ್‌ ತಲುಪಿಸಿದ ಕೆಸೆಟ್ಟನ್ನು ತಮಿಳು ನಿಯತಕಾಲಿಕ ನೇಟ್ರಿಕನ್‌ನ ಸಂಪಾದಕ ಎ.ಎಸ್‌.ಮಣಿ ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. 7 ನಿಮಿಷಗಳ ಮಾತಿರುವ ಈ ಕೆಸೆಟ್ಟಿನಲ್ಲಿ ಶರಣಾಗತಿಗೆ ಸಿದ್ಧವಿರುವುದಾಗಿ ವೀರಪ್ಪನ್‌ ಹೇಳಿದ್ದಾನೆ.

ತನಗೆ ಗೊತ್ತಿರುವ ಒಬ್ಬ ವ್ಯಕ್ತಿಯ ಮೂಲಕ ಗುಟ್ಟಾಗಿ ನವೆಂಬರ್‌ 7ರಂದು ವೀರಪ್ಪನ್‌ ಕೆಸೆಟ್‌ ತಲುಪಿಸಿದ. 9ನೇ ತಾರೀಖು ಮುಖ್ಯಮಂತ್ರಿಗಳ ಕಚೇರಿಗೆ ಹೋದೆ. ಈ ಬಗ್ಗೆ ಮಾತಾಡಲು ಮುಖ್ಯಮಂತ್ರಿಗಳನ್ನು ಒಪ್ಪಿಸಲು ಪ್ರಯತ್ನಿಸಿದೆ. ಫ್ಯಾಕ್ಸ್‌ ಮಾಡುವಂತೆ ಸಿಬ್ಬಂದಿ ಹೇಳಿ ಕಳುಹಿಸಿದರು. ಅಂದೇ ಫ್ಯಾಕ್ಸ್‌ ಮಾಡಿದೆ. ಉತ್ತರ ಇದುವರೆಗೆ ಬಂದಿಲ್ಲ. ಅದಕ್ಕಾಗೇ ಮಾಧ್ಯಮಗಳಿಗೆ ಈ ವಿಷಯ ತಿಳಿಸುತ್ತಿದ್ದೇನೆ. ಅವನು ಕ್ಷಮಾದಾನ ಕೇಳಿದ್ದಾನೆ. ಶರಣಾಗತಿಗೆ ಸಿದ್ಧನಾಗಿದ್ದಾನೆ. ಸಂಧಾನಕ್ಕೆ ಅನುಮತಿ ಸಿಕ್ಕರೆ ತೆರಳಲು ನಾನು ಸಿದ್ಧ. ಕೆಸೆಟ್ಟಿನಲ್ಲಿರುವ ಕಂಠ ವೀರಪ್ಪನದೇ. 1998ರಲ್ಲಿ ಅವನನ್ನು ನಾನು 3 ಬಾರಿ ಭೇಟಿಯಾಗಿದ್ದೇನೆ. ಆತನ ಮೂವರು ಸಹಚರರು ಶರಣಾಗತಿಯಾಗಲು ಸಹಕರಿಸಿದ್ದು ನಾನೇ ಎಂದು ಮಣಿ ಹೇಳಿಕೊಂಡರು.

ಕೆಸೆಟ್ಟಿನಲ್ಲಿ ವೀರಪ್ಪನ್‌ ಮಾತಿನ ಸಾರ ಹೀಗಿದೆ....

  • ನನಗೆ ನಿನ್ನಲ್ಲಿ (ಮಣಿ) ನಂಬಿಕೆ ಇದೆ. ಆದರೂ ನೀನು ಈ ಹಿಂದೆ ನನ್ನ ಮಾತನ್ನು ಕೇಳದೆ ಆ ವಕೀಲನ(ಹೆಸರು ಹೇಳಿಲ್ಲ) ತಪ್ಪು ಸಲಹೆಗೆ ಕಟ್ಟುಬಿದ್ದೆ.
  • ಈ ಕೆಸೆಟ್ಟನ್ನು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮುಂದೆ ಪ್ಲೇ ಮಾಡು. ಅವರೊಟ್ಟಿಗೆ ಮಾತನಾಡಿ, ನೀನು ನಂಬುವ ಯಾರನ್ನಾದರೂ ಕರೆದುಕೊಂಡು ಬಾ.
  • ನನ್ನ ಶರಣಾಗತಿ ಬಗ್ಗೆ ಈಗಲೇ ಮಾತಾಡಬೇಕಾದರೆ, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಕಾಡಿನಿಂದ ಕಾಲ್ತೆಗೆಯಬೇಕು. ‘ಪೊಲೀಸರ ಕಾರ್ಯಾಚರಣೆ ಸ್ಥಗಿತಗೊಂಡಿದೆ. ನಾನು ನಿನ್ನೊಟ್ಟಿಗೆ ಮಾತಾಡಲು ಸಿದ್ಧ’ ಎಂದು ಪತ್ರಿಕೆ ಮತ್ತು ರೇಡಿಯೋಗಳಲ್ಲಿ ನೀನು ಪ್ರಕಟಿಸಬೇಕು.
  • ನನ್ನಲ್ಲಿ ನಿನಗೆ ನಂಬಿಕೆಯಿದ್ದರೆ ಮಾತ್ರ ಮಾತುಕತೆಗೆ ಬಾ. ಇಲ್ಲವಾದರೆ ಬೇಡ. ನನಗೆ ನಿನ್ನನ್ನು ಕೊಲ್ಲುವ ಇರಾದೆಯಿಲ್ಲ. ಅದನ್ನು ಬೇಕಾದರೆ ನಿನ್ನ ಕಚೇರಿಯಲ್ಲೇ ಮಾಡಬಲ್ಲೆ.
  • ಮಾತುಕತೆಗೆ ನೀನು ಒಪ್ಪಿದ ನಂತರ, ನನ್ನ ಒಬ್ಬ ವ್ಯಕ್ತಿ ಇನ್ನೊಂದು ಕೆಸೆಟ್‌ ಕೊಡುತ್ತಾನೆ. ಆಮೇಲೆ ನೀನು ಕಾಡಿಗೆ ಬಂದು ಮಾತಾಡಬಹುದು. ಶರಣಾಗತಿಗೆ ನಾನು ಸಿದ್ಧ. ಆದರೆ, ಏನಾಗುತ್ತದೋ ನೋಡೋಣ. ಅದಕ್ಕೆ ಕೆಲವು ಷರತ್ತುಗಳೂ ಇವೆ
(ಇಷ್ಟೆಲ್ಲಾ ಮಾತುಗಳು ಮುಗಿದ ನಂತರ ಕೆಸೆಟ್ಟಿನಲ್ಲಿ ಕೆಲವು ಸೆಕೆಂಡುಗಳಷ್ಟು ಮೌನ. ಆಮೇಲೆ ಮಾತು ಮುಂದುವರೆಯುತ್ತದೆ. ಇದಕ್ಕೆ ಮಣಿ ತಾವು ಕೆಸೆಟ್ಟನ್ನು ಎಡಿಟ್‌ ಮಾಡಿಲ್ಲ ಎಂಬ ಸಮಜಾಯಿಷಿ ಕೊಟ್ಟರು.)

  • ಅಂಧಿಯೂರಿನ ಅಂಗಡಿಯಾಂದರಲ್ಲಿ ದಿನಸಿ ಲೂಟಿಯಾಗಿದ್ದಕ್ಕೆ ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಆ ಕೆಲಸ ಮಾಡಿರುವವರು ನನ್ನವರಲ್ಲ. ದಿನಸಿ ಲೂಟಿ ಮಾಡುವ ಅವಶ್ಯಕತೆ ನನಗಿಲ್ಲ. ಬೇಕಾದರೆ ನಾನೇ ಪೊಲೀಸರಿಗೆ ಲೋಡುಗಟ್ಟಲೆ ದಿನಸಿ ಕಳಿಸಬಲ್ಲೆ. ಜನ ನನ್ನೊಡನಿದ್ದಾರೆ. ಆ ಲೂಟಿ ಮಾಡಿರುವುದು ವೀರಪ್ಪನ್‌ ಎಂದು ಹೇಳಿಕೊಳ್ಳುತ್ತಿರುವ ಕನ್ನಡದ ಒಬ್ಬ ಆಸಾಮಿ!
  • ಮತ್ತೆ ಹೇಳುತ್ತೇನೆ. ಮಾತುಕತೆ ಆಗಬೇಕಾದರೆ, ವಿಶೇಷ ಕಾರ್ಯಾಚರಣೆ ಪಡೆಗಳು ಕಾಡಿನಿಂದ ನಾಡಿಗೆ ವಾಪಸ್ಸಾಗಬೇಕು. ಧನ್ಯವಾದಗಳು.
(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X