ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ಬಮ್ಮನ ಉಪವಾಸ ಅಲ್ಲವಿದು.. ಅಲ್ಲಾಹನ ಮಹಾಮನೆಯ ಮಾರ್ಗ

By Staff
|
Google Oneindia Kannada News

*ಮಕ್ಸೂದ್‌ ಕಾಸರಗೋಡು

ಹೊಟ್ಟೆಯ ಬೆಂಕಿಯನ್ನು ಸುಡು, ಹುರಿಯುವ ಬಾಣಲೆಯಿಂದ ಬೆಂಕಿಗೆ ಜಿಗಿ, ಭಕ್ತಿಯ ಹರಳುಗಟ್ಟಿಸಿಕೋ, ಧಗಧಗಿಸುತ್ತಿರುವ ಕಾಂಕ್ಷೆಗಳಿಗೆ ಲಗಾಮು ಕೊಡು.... ಹೀಗೆ ರಂಜಾನ್‌ ಅಥವಾ ರಂದಾನ್‌ ಪದ ಅರ್ಥಗಳನ್ನು ಕೊಡುತ್ತಲೇ ಹೋಗುತ್ತದೆ. ಅರೇಬಿಕ್‌ ಮೂಲದ ಈ ಪದ ಈ ಹೊತ್ತಿನ ಸಂಚಲನ. ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಲ್ಲೋ ಸ್ವಲ್ಪ ತಿಂತಾರಂತೆ ಉಪ್ಪಿಟ್ಟು ಅವಲಕ್ಕಿ ಪಾಯಸ... ಅನ್ನುವಂತಲ್ಲ ಇದು. ಅಲ್ಲಾಹನಿಗೆ ಹತ್ತಿರಾಗಲು ಮುಸ್ಲಿಮರು ಕಂಡುಕೊಂಡಿರುವ ವರ್ಷ ದಾರಿ. ಮೂವತ್ತು ದಿನಗಳ ಕಾಲ ಕಟ್ಟುನಿಟ್ಟು ಉಪವಾಸ ವ್ರತ.

ಊಟ- ತಿಂಡಿಗಷ್ಟೇ ಮೊಟಕು ಹಾಕುವುದಲ್ಲ. ಸುಳ್ಳು ಹೇಳುವುದು, ಬೆನ್ನಿಗೆ ಚೂರಿ ಹಾಕುವುದು, ಕಾಲು ಕೆರೆದುಕೊಂಡು ಜಗಳ ಕಾಯುವುದು ಎಲ್ಲವೂ ಬಂದ್‌. ಪಂಚೇಂದ್ರಿಯಗಳ ಹತೋಟಿ. ಅರಿಷಡ್ವರ್ಗಗಳ ನಿಗ್ರಹವೇ ಗುರಿ. ಹಿಜ್ರಾ ಶಕೆಯ ಎರಡನೇ ವರ್ಷ. ಮದೀನಾದಲ್ಲಿ ಪ್ರಾಫೆಟ್‌ ಮುಹಮ್ಮದ್‌ ಉಪವಾಸ ಮಾಡುತ್ತಿದ್ದ ದಿನಗಳವು. ವರ್ಷಕ್ಕೆ ಮೂರು ಕಂತಿನ ಉಪವಾಸಕ್ಕೆ ಕೂರುತ್ತಿದ್ದ ಆ ಮಹಾತ್ಮ. 36 ದಿನಗಳನ್ನು ತೊಟ್ಟು ನೀರೂ ಕುಡಿಯದೆ ಕಳೆದು, ಅಲ್ಲಾಹನಿಗೆ ಹತ್ತಿರಾದವ. ಪ್ರಾಫೆಟ್‌ ಮುಹಮ್ಮದ್‌ ತೋರಿದ ಆ ಮಾರ್ಗವನ್ನೇ ಮುಸ್ಲಿಂ ಪಂಚಾಂಗದ 9ನೇ ತಿಂಗಳಲ್ಲಿ ಆಚರಿಸತೊಡಗಿದರು. ಇಮಾನ್‌, ಸಲಾಹ್‌, ಝಕಾಹ್‌ ಆದ ಮೇಲೆ ಸಾಂಮ್‌ ಅರ್ಥಾತ್‌ ಉಪವಾಸ.

ಜನ್ನಾಹ್‌ದಲ್ಲಿ ಅರ್‌ ರಯ್ಯಾನ್‌ ಎಂಬೊಂದು ಬಾಗಿಲು. ಕಟ್ಟುನಿಟ್ಟು ಉಪವಾಸ ಮಾಡಿದವರಿಗೆ ಅದು ತೆರೆಯುತ್ತದೆ. ಉಪವಾಸ ಮಾಡಿದವರು ಯಾವ ಸ್ಥಾನ ಮುಟ್ಟಬೇಕು ಎಂಬುದು ತೀರ್ಮಾನವಾಗುವುದು ಅಲ್ಲೆ. ಭಕ್ತರ ಹೊರತುಪಡಿಸಿ ಬೇರಾರಿಗೂ ಅಲ್ಲಿಗೆ ದಾರಿಯಿಲ್ಲ. ಕಟ್ಟಾ ವ್ರತ ಮಾಡಿದವರೆಲ್ಲರೂ ಬಂದ ನಂತರ ಕದ ತಂತಾನೇ ಮುಚ್ಚಿಕೊಳ್ಳುತ್ತದೆ. ಪ್ರಾಫೆಟ್‌ ಅಲ್ಲಾಲಾಹು ಅಲಾಯ್ಹಿ ವಸಲ್ಲಾಂ ಅನುಭವವಿದು. ಈಗಲೂ ಮುಸ್ಲಿಂ ಹಿರೀಕರು ಮಕ್ಕಳಿಗೆ ಇಂಥಾ ಕತೆಗಳನ್ನು ಹೇಳಿ, ಸಂಸ್ಕೃತಿ ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ. ಖುರಾನಿನಲ್ಲೂ ರಂಜಾನ್‌ ಮಾಹೆಯಲ್ಲಿ ಉಪವಾಸ ಮಾಡಬೇಕೆಂಬ ಉಲ್ಲೇಖ ಇದೆ.

ಕೆಲವು ಮುಸ್ಲಿಂ ಪಂಡಿತರು ವೈಜ್ಞಾನಿಕ ನೆಲೆಗಟ್ಟಿನಿಂದಲೂ ಉಪವಾಸವನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ಪ್ರಕಾರ ಶುದ್ಧೀಕರಣದ ಅನನ್ಯ ಮಾರ್ಗ ಇದು. ದೇಹದ ಅವಯವಗಳು ಉಪವಾಸದಿಂದ ಓವರ್‌ಆಯಿಲ್ಡ್‌ ಆಗುತ್ತವೆ. ಗ್ರಹಗಳ ಇರುವಿಕೆ, ಸ್ಥಾನಪಲ್ಲಟ ಮೊದಲಾದ ಕಾರಣಗಳಿಂದಲೂ ಈ ಅವಧಿಯಲ್ಲಿ ಉಪವಾಸ ಇರುವುದು ಒಳ್ಳೆಯದು. ಹಿಂದಿನ ಮಹಾತ್ಮರೆಲ್ಲಾ ಸುಖಾ ಸುಮ್ಮನೆ ಇಂಥಾ ಆಚರಣೆಗಳನ್ನು ಜಾರಿಗೆ ತಂದಿಲ್ಲ. ಇವು ಮೂಢನಂಬಿಕೆಗಳೂ ಅಲ್ಲ. ಕಾಂಕ್ಷೆಗಳ ಹತೋಟಿಗೆ ತಂದು, ಮನಸ್ಸನ್ನು ಹದ್ದು ಬಸ್ತಿಗೆ ತಂದುಕೊಳ್ಳುವ ಇನ್ನೊಂದು ಬಗೆಯ ತಪಸ್ಸು.

ಯಾರ್ಯಾರು ಉಪವಾಸ ಮಾಡಬೇಕು? ಯಾರಿಗೆ ವಿನಾಯಿತಿಯುಂಟು?

ಏಳನೇ ವಯಸ್ಸಿಗೆ ಕಾಲಿಡುವ ಮಕ್ಕಳಿಗೆ ಉಪವಾಸ ಮಾಡಲು ಸೂಚಿಸಬೇಕು. 10ನೇ ವಯಸ್ಸಿನಿಂದಲಂತೂ ಧಾರ್ಮಿಕವಾಗಿ ಇದು ಕಡ್ಡಾಯ. ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾದವರು, ಆಗ ತಾನೆ ಋತುಮತಿಯಾದ ಹುಡುಗಿಯರು, ಬಲು ದೂರ ಪ್ರಯಾಣ ಮಾಡುವವರಿಗೆ ರಿಯಾಯಿತಿ ಉಂಟು. ಮಧುಮೇಹದ ತೊಂದರೆ ಇರುವವರೂ ಉಪವಾಸ ಮಾಡಲು ಸಾಧ್ಯವಿದೆ. ಇದಕ್ಕಾಗೇ ಗೃಹ ವೈದ್ಯರ ಬಳಗವೇ ಇದೆ. ಪಿತ್ತಕೋಶಕ್ಕೆ ಧಕ್ಕೆಯಾಗದಂತೆ ಮುಂಜಾಗರೂಕತೆ ವಹಿಸಿ ಉಪವಾಸ ಮಾಡುವವರೂ ಅಸಂಖ್ಯ. ನೆಗಡಿ, ಕೆಮ್ಮಿನ ನೆವ ಉಪವಾಸಕ್ಕೆ ಅಡಚಣೆಯಾಗಕೂಡದು.

ಸರ್ವಜ್ಞ ಹೇಳಿರುವ ‘ಮೋಕ್ಷಕ್ಕೆರಡಕ್ಕರವೇ ಸಾಕು’ ಎಂಬ ಮಾತು ಸಕಲರಿಗೂ ಅನ್ವಯವಾಗುತ್ತದೆ. ಸಾಕು ಎಂಬುದು ತೃಪ್ತಿಯ ಸಂಕೇತ. ಧಾರ್ಮಿಕ ಚೌಕಟ್ಟಿನಲ್ಲಿ ಅಂಥಾ ಒಂದು ಆತ್ಮತೃಪ್ತಿ , ಮಾಡಿರುವ ತಪ್ಪುಗಳಿಗೆ ಅಲ್ಲಾಹನ ಮಾಫಿ, ಭಗವಂತನ ಸಾಥಿ, ಕುಗುಣಗಳ ನಿರ್ನಾಮ ಸಾಧ್ಯವಿದೆ ಎಂದಾದರೆ ಯಾಕಾಗಬಾರದು? ಶವಾಲ್‌ ಚಂದ್ರನ ನೋಡಿದ ನಂತರ ಉಪವಾಸ ಶುರುವಾಗಿದೆ. ಶಬಾಲ್‌ ಚಂದ್ರ ಇಣುಕುವವರೆಗೆ ಇದರ ಮುಂದುವರಿಕೆ. ಆಫ್ಘನ್ನಿನ ಮುಗ್ಧರ ಈ ರಂದಾನ್‌ ಧುಆ ಬಹುತೇಕ ಏಕಪ್ರಕಾರದ್ದು. ಬಾಂಬ್‌ ಸಿಡಿಯುವ ಬಗಲಲ್ಲೇ ಅಲ್ಲಾಹನಿಗೆ ಮೊರೆ- ‘ಯುದ್ಧ ನಿಲ್ಲಲಿ, ಹಬ್ಬವಾಗಲಿ’!

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X