ಚನ್ನಪಟ್ಟಣದಲ್ಲಿ ರ್ಯಾಲಿ : ಕಾಂಗ್ರೆಸ್‌ಗೆ ಗೌಡರ ದಳದ ಎಚ್ಚರಿಕೆ
ಬೆಂಗಳೂರು: ಚನ್ನಪಟ್ಟಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ರ್ಯಾಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಜಾತ್ಯತೀತ ಜನತಾದಳ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.
ಸ್ಥಳೀಯ ಜನತೆ ರೊಚ್ಚಿಗೆದ್ದಿದ್ದಾರೆ ಎನ್ನುವುದಕ್ಕೆ, ಸಹಕಾರ ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ಚನ್ನಪಟ್ಟಣಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಲೆದೋರಿದ ಗಲಭೆ ಸಾಕ್ಷಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಚ್.ಶ್ರೀನಿವಾಸ್ ಹೇಳಿದರು.
ಚನ್ನಪಟ್ಟಣ ತ್ಲಾಲೂಕಿನ ಜನತೆಯನ್ನು ಕಾಂಗ್ರೆಸ್ಸಿನ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಇನ್ನಿತರೆ ಜಾತ್ಯತೀತ ಜನತಾದಳದ ನಾಯಕರು ಎತ್ತಿ ಕಟ್ಟುತ್ತಿದ್ದಾರೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಶ್ರೀನಿವಾಸ್, ವಿಠಲೇನಹಳ್ಳಿಯಲ್ಲಿ ನಡೆದ ಗೋಲಿಬಾರ್‌ಗೆ ಪ್ರಾಯಶ್ಚಿತ್ತ ರೂಪವಾಗಿ ದೇವೇಗೌಡರು ನಡೆಸಿದ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ರ್ಯಾಲಿ ನಡೆಸುತ್ತಿದೆ ಎಂದು ಪ್ರತಿ ಆರೋಪ ಮಾಡಿದರು.
ರಾಜಧಾನಿಯಲ್ಲಿ ಬಡವರ ಮನೆಗಳನ್ನು ಒಡೆಯದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲೆ ರಮಾದೇವಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಬಡವರ ಮನೆಗಳನ್ನು ಒಡೆಯುವುದಕ್ಕೆ ಪಕ್ಷದ ವಿರೋಧವಿದೆ ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದರು.
ರ್ಯಾಲಿ ನ.19 ಕ್ಕೆ ಮುಂದೂಡಿಕೆ
ನವಂಬರ್ 12 ರಂದು ಚನ್ನಪಟ್ಟಣದಲ್ಲಿ ನಡೆಸಲು ಉದ್ದೇಶಿಸಿದ್ದ ರ್ಯಾಲಿಯನ್ನು ನವಂಬರ್ 12 ಕ್ಕೆ ಕಾಂಗ್ರೆಸ್ ಪಕ್ಷ ಮುಂದೂಡಿದೆ. ನವಂಬರ್ 19 ಇಂದಿರಾಗಾಂಧಿ ಅವರ ಜನ್ಮದಿನವಾಗಿದ್ದು, ಆ ದಿನ ರ್ಯಾಲಿ ನಡೆಸುವ ಮೂಲಕ ಜಾತ್ಯತೀತ ಜನತಾದಳಕ್ಕೆ ತಕ್ಕ ಉತ್ತರ ನೀಡಲು ನಿರ್ಧರಿಸಿರುವುದಾಗಿ ಕೆಪಿಸಿಸಿಐ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವಂಬರ್ 12 ರಂದು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವುದು ಕೂಡ ರ್ಯಾಲಿ ಮುಂದೂಡಲು ಕಾರಣವಾಗಿದೆ ಎಂದು ಅಲ್ಲಂ ವೀರಭದ್ರಪ್ಪ ತಿಳಿಸಿದರು.
(ಪಿಟಿಐ)