ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕಲ್ಲು ಮತ್ತು ಗಾಂಧಿರಸ್ತೆ

By Staff
|
Google Oneindia Kannada News

*ರಾಜಲಕ್ಷ್ಮಿ ಕೆ.ರಾವ್‌

ಇದು ಮಹಾತ್ಮ ಗಾಂಧಿ ರಸ್ತೆ! ದಾರಿ ಯಾವುದಯ್ಯ ಸೈಕಲ್‌ಗೆ...
ಎಂಜಿ ರೋಡಿನ ಅಂತರಾಳ ಹೆಸರಿಗೆ ವಿರುದ್ಧವಾಗಿದ್ದರೂ ಚೆಂದವನ್ನು ಒಪ್ಪದಿರಲಿಕ್ಕಾಗುತ್ತದೆಯೇ? ರಸ್ತೆಯ ಅರ್ಧದಾರಿಗಾದರೂ ಮರದಡಿ ಮಲಗಿರುವ ವಿಶಾಲ ಕಾಲುದಾರಿ. ಕಣ್ಮುಂದೆ ಮಿನುಗುವ ಹೋರ್ಡಿಂಗ್‌... ಬ್ರಿಗೇಡ್‌ ರೋಡಿನ ಬಿರುಸು ಕೂಡ ಹಾಗೆಯೇ. ಏನೋ ಥ್ರಿಲ್‌, ಪ್ರತಿಷ್ಠೆ ತರುವ ಸದಾ ಗುಡಿಸಿರುವ ರಸ್ತೆಗಳು.

‘ಈ ಥಳುಕಿನ ರಸ್ತೆಗಳಿಗೆ ಮಾಸಿದ ಪ್ಯಾಂಟ್‌ ಹಾಕಿಕೊಂಡು ಹ್ಯಾಂಡಲ್‌ಗೆ ಹಾಲಿನ ಕ್ಯಾನ್‌ಗಳನ್ನು, ರದ್ದಿ ಪೇಪರ್‌ಗಂಟನ್ನು, ಜೀವಂತ ಕೋಳಿಗಳನ್ನು ನೇತು ಹಾಕಿಕೊಂಡು ಹೋಗುವ ಸೈಕಲ್‌ ಸವಾರರು ಏನು ಭೂಷಣ ಹೇಳಿ...’ ಅಂತ ಸಾಂಗ್ಲಿಯಾನ ಸಾಹೇಬರು ಇಲ್ಲಿ ಸೈಕಲ್‌ಗಳನ್ನೇ ನಿಷೇಧಿಸಿ ಫರ್ಮಾನು ಹೊರಡಿಸಿದ್ದಾರೆ. ಬಡವರ ಆಪ್ತ ಪೊಲೀಸ್‌ ಸಾಹೇಬರು ಇದ್ದಕ್ಕಿದ್ದ ಬಡ ಸೈಕಲ್‌ ಸವಾರರನ್ನೇಕೆ ಆಚೆ ತಳ್ಳಿದರೋ ಗೊತ್ತಿಲ್ಲ. ಆದರೆ ಈಗ ಟೀಕೆಗಳ ರಾಶಿ.. . ಸಮಸ್ಯೆಗಳ ಸರತಿ ಸಾಲು ಆಜ್ಞೆಯ ಮುಂದೆಯೇ ನೆಟ್ಟಗೆ ಕುಳಿತು ಬೊಬ್ಬಿರಿಯುತ್ತಿದೆ.

ಸೈಕಲ್‌ ಎಂದರೆ ಬರೀ ಜೋಳ, ಎಳೆ ನೀರು ಅಂತ ಕೂಗುತ್ತಾ ಸಾಗುವವರನ್ನು ಸಾಂಗ್ಲಿಯಾನ ನೆನಪಿಸಿಕೊಂಡರೋ ಏನೋ. ಕೊರಿಯರ್‌ ವಾಲಾ, ಅಂಚೆಯಣ್ಣ, ಬೆಳಬೆಳಗ್ಗೆ ಹಾಲಿನ ಪ್ಯಾಕೆಟ್‌ ತರುವ ಹುಡುಗ, ಜಗತ್ತನ್ನು ತುಂಬಿಕೊಂಡಿರುವ ಪತ್ರಿಕೆಯ ರೊಯ್ಯನೆ ಬಿಸಾಡುವವ, ದೂರದ ಫ್ಯಾಕ್ಟರಿಗೆ ಸೈಕಲ್ಲು ತುಳಿದುಕೊಂಡು ಹೋಗುವ ಸಂಸಾರಸ್ಥ , ಕ್ವಿಂಟಾಲ್‌ ಭಾರದ ಸ್ಕೂಲುಬ್ಯಾಗು ಕ್ಯಾರಿಯರ್‌ಗಿಟ್ಟು ಶಾಲೆಗೆ ಹೋಗುವ ಎರಡು ಜಡೆಯ ಹುಡುಗಿ... ಇವರನ್ನೆಲ್ಲ ಸಾಂಗ್ಲಿಯಾನ ಹೇಗೆ ಮರೆತರು!

ಎಸ್ಸೆಂ ಕೃಷ್ಣರೇ ಸೈಕಲ್‌ನಲ್ಲಿ ಬಂದಿದ್ರು ಸ್ವಾಮೀ

ಮಹಾತ್ಮಾಗಾಂಧಿ ರಸ್ತೆಯ ಮಿನುಗುವ ಸೌಧಗಳು ಹಾಲು ಪೇಪರ್‌ ಪೋಸ್ಟ್‌ ಇಲ್ಲದೆಯೇ ಬದುಕುತ್ತವಾ ಹೇಳಿ. ‘ನಮ್ಮಂತಹ ಸಣ್ಣ ಪುಟ್ಟ ವ್ಯಾಪಾರಿಗಳೇ ಅವರ ಮೊದಲ ಗುರಿಯಾದದ್ದು ಬೇಜಾರಿನ ಸಂಗತಿ’ ಎಂದು ಕೋರಿಯರ್‌ ಏಜೆನ್ಸಿಯವರು ಹೇಳುತ್ತಾರೆ. ‘ಇದೇ ಎಸ್ಸೆಂ ಕೃಷ್ಣರು ಹಿಂದೊಮ್ಮೆ ಸೈಕಲ್‌ನಲ್ಲಿ ವಿಧಾನ ಸೌಧಕ್ಕೆ ಬಂದಿದ್ರು ಸ್ವಾಮಿ. ಅವರು ಮುಖ್ಯಮಂತ್ರಿಯಾದಾಗ ಸೈಕಲ್‌ ಕೊಳಕೆನಿಸಿತೇ ಎಂದು ಹಾಲಿನ ಡೈರಿಯ ಬಿಳಿ ಕೂದಲಿನ ಮೂರ್ತಿ ಕೇಳುತ್ತಾರೆ.

ಇನ್ನೊಂದು ಸಣ್ಣ ಲಾಜಿಕ್ಕು. ಡ್ರೆೃವಿಂಗ್‌ ಲೈಸನ್ಸ್‌ ಪಡೆಯಬೇಕಿದ್ದರೆ ವರ್ಷ 18 ಆಗಿರಬೇಕು. ಶಾಲೆಗೆ ಹೋಗುವ ಮಕ್ಕಳು ಸೈಕಲ್‌ ಬಳಸುತ್ತಾರೆ. ಅವರು ಎಂಜಿರೋಡಿಗೆ ಅಸ್ಪೃಶ್ಯರೇ ? ಶ್ರೀಮಂತ ರಸ್ತೆಯನ್ನು ಮತ್ತಷ್ಟು ಶ್ರೀಮಂತವಾಗಿಸುವ ಅಗತ್ಯ ಬೆಂಗಳೂರಿಗುಂಟಾ ? ಚೀನಾದ ಶ್ರೀಮಂತ ರಸ್ತೆಗಳಲ್ಲಿ ಸೈಕಲ್‌ ತುಳಿಯುವುದು ಫ್ಯಾಷನ್‌. ಆದರೆ ಅನುಕರಣೆಗೆ ಅಮೆರಿಕಾವೇ ಬೇಕು ಅನ್ನುವುದನ್ನು ಸಾಂಗ್ಲಿಯಾನಾ ನಂಬಿಕೆಯಾ ?

ಹಿಗ್ಗಿನ್‌ ಬಾಥಮ್ಸ್‌ಗೆ ಹೇಗೆ ಹೋಗೋದು ?

ಹೊಸದಾಗಿ ಬಂದ ರೂಲ್ಸುಗಳ ಪ್ರಕಾರ ಎಂಜಿರೋಡಿನಲ್ಲಿ ರಿಕ್ಷಾ ಮತ್ತು ದ್ವಿಚಕ್ರವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಇದರಿಂದ ಆಗುವ ಸಾಧನೆಯೆಂದರೆ, ರಂಗಿನ ಕಾರುಗಳ ಸಾಲಿನಲ್ಲಿ ಸೈಕಲ್‌ಗಳು, ಹಳದಿ ಕಪ್ಪಿನ ರಿಕ್ಷಾಗಳು ಸಾಗದೇ ಇರುವುದೊಂದೇ. ಆದರೆ ಹಿಗ್ಗಿನ್‌ ಬಾಥಮ್ಸ್‌ ಪುಸ್ತಕದಂಗಡಿಗೆ ಆಟೋದಲ್ಲಿ ಬರುವಾತ ಎಂಜಿ ರೋಡಿನ ಕೊನೇ ತುದಿಯಲ್ಲಿಳಿದು ವಾಪಾಸು ನಡೆಯಬೇಕು. ಯಾಕೆಂದರೆ ಈ ಪ್ರತ್ಯೇಕ ಟ್ರಾಕ್‌ನಲ್ಲಿ ಆಟೋ ನಿಲ್ಲಿಸಿದರೆ ಹಿಂದಿನಿಂದ ಬರುವ ಎಲ್ಲ ಆಟೋಗಳು ಪೀಪೀ ಮಾಡುತ್ತಾ ನಿಂತುಕೋಬೇಕು.

ಅನುಕೂಲ ಮಾಡಿಕೊಡುವುದಿದ್ದರೆ...

ಇಲ್ಲಿ ವೇಗದ ಮಾತಾಡುವಂತಿಲ್ಲ. ಯಾಕೆಂದರೆ ಎಂಜಿ ಮತ್ತು ಬ್ರಿಗೇಡ್‌ ರಸ್ತೆ ಹೈವೇಯಲ್ಲ. ಶಾಪಿಂಗ್‌ ಸೆಂಟರ್‌ಗಳ ನಡುವೆ ಸಾಗುವ ಸಾಫ್‌ ರಸ್ತೆ. ಬೆಂಗಳೂರಿನ ಮಹಾಜನತೆಗೆ ಅನುಕೂಲ ಮಾಡಿಕೊಡುವುದಿದ್ದರೆ ರಸ್ತೆ ರಿಪೇರಿಯ ಜೊತೆಗೆ ಯಾರೂ ಸೊಲ್ಲೆತ್ತದ ಪಾದದಗಲದ ಫೂಟ್‌ಪಾತ್‌ಗಳೂ ಇವೆ. ಬನ್ನೇರುಘಟ್ಟ , ಮೈಸೂರು ರಸ್ತೆಗಳನ್ನು ಸಾರ್‌ ನೋಡಿದ್ದಾರಾ?

ಇದರಿಂದಾಗುವ ತೊಂದರೆಯನ್ನು ಪಕ್ಕಕ್ಕಿರಿಸಿ ಮಾತಾಡೋಣ. ನೀಟ್‌ನೆಸ್‌ ಕಾರಣದೊಂದಿಗೆ ಈ ವ್ಯವಸ್ಥೆ ತೊಂದರೆಯಾದರೂ ಸುಂದರವೇ. ಆದರೆ ಬೆಂಗಳೂರು ಮಹಾನಗರದ ಓಣಿ ಒರುಂಕುಗಳಲ್ಲಿ ತೂರಿಕೊಂಡು ಹೋಗುವ ಹೈವೇಗಳ ಬಿರುಕುಗಳು, ರಸ್ತೆಯೇ ಕಾಣದ ದಾರಿಯಲ್ಲಿ ಕಲ್ಪನೆಯಲ್ಲಿ ಬಸ್ಸು ಓಡಿಸಬೇಕಾದ ಪರಿಸ್ಥಿತಿಗಳ ಸಮೀಕ್ಷೆ ಮಾಡುವುದಕ್ಕೆ ವರ್ಷ ಬೇಕಾಗುತ್ತದೆ. ಜೀವ ಅಡವಿಟ್ಟು ಪ್ರಯಾಣಿಸಬೇಕಾದ ಈಪಾಟಿ ಸಮಸ್ಯೆಗಳಿರುವಾಗ ಸಾಂಗ್ಲಿಯಾನಾರ ಮನಸ್ಸು ಎಂಜಿ ರೋಡಿನ ಸೌಂದರ್ಯದತ್ತ ತೆರಳಿದೆ. ಅಲ್ಲಿನ ಸಾಧನೆ ಗೊಂದಲವೊಂದೆ.

ಸಾಂಗ್ಲಿಯಾನ ಅವರ ಲೇಟೆಸ್ಟ್‌ ಆರ್ಡರ್‌ ಎಂದರೆ ರಿಚ್ಮಂಡ್‌ ಮೇಲು ರಸ್ತೆ ಮತ್ತು ನೃಪತುಂಗ ರಸ್ತೆಯನ್ನು ದೀಪಾವಳಿಯಿಂದ ದ್ವಿಮುಖ ಸಂಚಾರಕ್ಕೆ ತೆರವು ಮಾಡುವುದು. ಏಕಮುಖ ಸಂಚಾರಕ್ಕಾಗಿ ನಿರ್ಮಿಸಿದ ಮೇಲು ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುಮತಿ ಕೊಡಲಾಗುವುದು. ಇದು ಮಹಾಜನತೆಗೆ ದೀಪಾವಳಿ ಕೊಡುಗೆ ಅಂತ ಸಾಂಗ್ಲಿಯಾನ ಘೋಷಿಸಿದ್ದಾರೆ. ಆದರೆ, ದ್ವಿಮುಖ ಸಂಚಾರಕ್ಕೆ ಸಾಕಷ್ಟು ಅಗಲವಾಗಿಲ್ಲದ ರಸ್ತೆಯಲ್ಲಿ ಈ ಆಜ್ಞೆ ಜಾರಿಯಾಗುವುದು ತಾಂತ್ರಿಕವಾಗಿ ಅಸಾಧ್ಯ ಎಂದು ಇತರ ಪೊಲೀಸ್‌ ಅಧಿಕಾರಿಗಳು ಮುಖ ಊದಿಸಿಕೊಂಡಿದ್ದಾರೆ.

ಸರಳಾತಿ ಸರಳ ಜೀವನದ ಗಾಂಧಿ ಹೆಸರಿನ ರಸ್ತೆಯಲ್ಲಿ ಸರಳಾತಿ ಸರಳ ಬದುಕಿನ ಸಂಕೇತವಾದ ಸೈಕಲ್ಲನ್ನು ನಿಷೇಧಿಸುವ ಸಾಂಗ್ಲಿಯಾನ ಸಾಹೇಬರ ವಿರುದ್ಧ ಭಾರೀ ಪ್ರತಿಭಟನೆಯೇ ವ್ಯಕ್ತವಾಗುತ್ತಿದೆ. ಹೇಳಿ ನಿಮಗೇನನ್ನಿಸುತ್ತೆ .. ಸೈಕಲ್ಲು ಗಾಂಧಿ ರಸ್ತೆಗೆ ಬೇಕಾ? ಬೇಡವಾ?

ಸೈಕಲ್‌ ಗುಬ್ಬಿಯ ಮೇಲೆ ಎಚ್‌.ಟಿ. ಸಾಂಗ್ಲಿಯಾನ ಬ್ರಹ್ಮಾಸ್ತ್ರ

ಮುಖಪುಟ / ಸಾಂಗ್ಲಿಯಾನ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X