ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಢಂ ಢಂ ಪಟಾಕಿ ಹೊಡೆಯೋದಿಲ್ಲ- ಬೆಂಗಳೂರ ವಿದ್ಯಾರ್ಥಿಗಳ ಶಪಥ

By Staff
|
Google Oneindia Kannada News

ಬೆಂಗಳೂರು : ಇಲ್ಲ, ವಿಷಾನಿಲ ಕಕ್ಕುವ, ಕಿವಿಗಡುಚುವಂತೆ ಸದ್ದು ಮಾಡುವ ಪಟಾಕಿಗಳನ್ನು ನಾವು ಸಿಡಿಸೋದಿಲ್ಲ. ಬಾಲ ಕಾರ್ಮಿಕರ ಕಣ್ಣೀರು ತುಂಬಿದ ಪಟಾಕಿಗಳ ನಾವು ಹಚ್ಚೋದಿಲ್ಲ. ದೀಪಾವಳಿಯಂದು ಚೆಲ್ಲಬೇಕಾಗಿರುವುದು ಬೆಳಕನ್ನು. ಪರಿಸರವನ್ನು ಹಾಳುಗೆಡಹುವ ಹೊಗೆಯನ್ನಲ್ಲ- ಯಶವಂತಪುರ ಹಾಗೂ ಮಲ್ಲೇಶ್ವರಂ ವ್ಯಾಪ್ತಿಯಲ್ಲಿರುವ 27 ಶಾಲೆಗಳ ಮಕ್ಕಳು ಒಟ್ಟಾಗಿ ಶಪಥ ಮಾಡಿಬಿಟ್ಟರು.

ಮಲ್ಲೇಶ್ವರಂ ಸರ್ಕಾರಿ ಬಾಲಕರ ಕಾಲೇಜಿನ ಆವರಣದಲ್ಲಿ ಶನಿವಾರ ‘ದೀಪಾವಳಿ ಜಾಗೃತಿ ಜಾಥಾ’ ಎಂಬೊಂದು ಅಪರೂಪದ ಕಾರ್ಯಕ್ರಮ. ಕಾಗದದ ಟೋಪಿ ತೊಟ್ಟು, ಬ್ಯಾನರ್‌ ಹಿಡಿದ ಸಮವಸ್ತ್ರಧಾರಿ ಶಾಲಾ ವಿದ್ಯಾರ್ಥಿಗಳು ಮನಃಪೂರ್ವಕವಾಗಿ ಈ ಶಪಥಗೈದರೋ ಇಲ್ಲವೇ ಒತ್ತಡಕ್ಕೆ ಮಣಿದು ಹಾಗೆ ಮಾಡಿದರೋ ಹೇಳಲಾಗದು. ಆರೋಗ್ಯ ಸಚಿವ ಡಾ.ಎ.ಬಿ.ಮಲಕರೆಡ್ಡಿ ಅವರಂತೂ ಪ್ರತಿಜ್ಞಾವಿಧಿ ಬೋಧಿಸಿದರು. ಈ ಮಕ್ಕಳನ್ನು ನೋಡಿ ದೊಡ್ಡವರು ಕಲಿಯಬೇಕು. ಅವರೂ ಇವರಂತೆ ಪಟಾಕಿ ಸಿಡಿಸೋದನ್ನ ಬಿಡಬೇಕು ಎಂದರು.

ಮಾತು ಮುಂದುವರೆಸಿದ ಸಚಿವರು ಪ್ರತಿ ಪಟಾಕಿ ತಯಾರಿಕೆ ಹಿಂದೆ ಬಾಲ ಕಾರ್ಮಿಕನೊಬ್ಬನ ಕತೆಯಿದೆ. ಬಾಲ ಕಾರ್ಮಿಕರ ಶೋಷಣೆ ನಿರ್ಮೂಲನೆಗೆ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಸಾರ್ವಜನಿಕರೂ ನೆರವು ಕೊಡಬೇಕೆಂದು ಕೇಳಿಕೊಂಡರು. ಅಷ್ಟರಲ್ಲೇ ಮೈದಾನದ ಹೊರಗೆ ಪಟಪಟ ಪಟಾಕಿ ಸಿಡಿಯಿತು. ಸಚಿವರು ಸಣ್ಣಗೆ ಬೆಚ್ಚಿಬಿದ್ದರು. ಮುಖದಲ್ಲಿ ಕೋಪ ಕೋಪ ತುಂಬಿತು. ಇದೇ ಮಕ್ಕಳಿಗೂ ದೊಡ್ಡವರಿಗೂ ಇರುವ ವ್ಯತ್ಯಾಸ. ಮಕ್ಕಳಿಗೆ ಹೇಗೋ ಬುದ್ಧಿ ಹೇಳಬಹುದು. ಆದರೆ ಬುದ್ಧಿವಂತರಿಗೆ ಎಲ್ಲವೂ ಅಪಥ್ಯ ಎಂದು ಮಾತಿನ ಚಾಟಿ ಬೀಸಿದರು.

ನಂತರ... : ಭಾನುವಾರ ಸಂಜೆ ನರ್ತಕಿ- ಸಂತೋಷ್‌- ಸಪ್ನಾ ಥಿಯೇಟರ್‌ ಆವರಣದಲ್ಲಿ ಹದಿನೈದು ಇಪ್ಪತ್ತು ನಿಮಿಷ ಪಟಾಕಿಗಳು ಒಂದೇ ಸಮ ಸಿಡಿದು, ಪುಟ್ಟ ಫ್ಯಾಕ್ಟರಿ ಹೊಮ್ಮಿಸುವಷ್ಟು ಹೊಗೆ ದಟ್ಟೈಸಿತು. ಶಿವರಾಜ್‌ ಅಭಿಮಾನಿಗಳು ಯುವರಾಜ ಚಿತ್ರಕ್ಕೆ ಯಶಸ್ಸು ಕೋರಿದ ಪರಿಯಿದು. ಪೊಲೀಸರು ಮೂಕಪ್ರೇಕ್ಷಕರಾಗಿ ಅದನ್ನು ನೋಡುತ್ತಾ ನಿಂತಿದ್ದರು. ಹೊಸ ಪೊಲೀಸ್‌ ಕಮಿಷನರ್‌ ಸಾಂಗ್ಲಿಯಾನ ಕಿವಿಗೆ ಈ ಪಟಾಕಿ ಸದ್ದು ಮುಟ್ಟಿರಲಿಕ್ಕಿಲ್ಲ. ಅಂದಹಾಗೆ, ಯಶವಂತಪುರ- ಮಲ್ಲೇಶ್ವರಂನ ಮಕ್ಕಳು ಪಟಾಕಿ ಹೊಡೆಯದೇ ಇದ್ದರೆ ಸುರೇಶ್‌ ಹೆಬ್ಳೀಕರ್‌ ಮತ್ತು ಮಲಕರೆಡ್ಡಿ ಬೀಗಬಹುದು. ಆದರೆ, ಹಾಗಾಗದಿರುವ ಲಕ್ಷಣಗಳೇ ಹೆಚ್ಚು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X