• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾವು, ನಮ್ಮ ಹಿನ್ನೆಲೆ...

By Staff
|

* ಟಿ.ಎಂ. ಸತೀಶ್‌

Karnataka mapಬೆಂಗಳೂರು : ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್‌. ಭಾವಿಸಿದ ಜನಪದಂ ವಸು ಧಾವಲಯ ವಿಲೀನ ವಿಶದ ವಿಷಯ ವಿಶೇಷಂ... ಇದು ರಾಷ್ಟ್ರಕೂಟ ಅರಸು ಅಮೋಘವರ್ಷ ನೃಪತುಂಗನ ಕಾಲದಲ್ಲಿ (ಕ್ರಿ.ಶ. 815-878) ರಚಿತವಾದ ಲಕ್ಷಣ ಗ್ರಂಥದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಎಲ್ಲೆಯ ಬಗ್ಗೆ ಇರುವ ಉಲ್ಲೇಖ.

ಅಂದರೆ, ಕರ್ನಾಟಕವು ಗೋದಾವರಿ ನದಿಯಿಂದ ಕಾವೇರಿನದಿಯವರೆಗೆ ಹಬ್ಬಿತ್ತು. ಇಷ್ಟು ವಿಶಾಲವಾದ, ಸವಿಸ್ತಾರವಾದ ಕರ್ನಾಟಕ ಇಂದು ಹರಿದು ಹಂಚಿಹೋಗಿದೆ. ಭಾಷಾವಾರು ಪ್ರಾಂತ್ಯ ವಿಭಜನೆಯ ಬಳಿಕವಂತೂ ಕರ್ನಾಟಕದ ಹಲವು ಶ್ರೀಮಂತ ಭೂಭಾಗಗಳು ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶಗಳಲ್ಲಿ ವಿಲೀನವಾಗಿ, ಕರ್ನಾಟಕದ ಕೈಬಿಟ್ಟು ಹೋಯಿತು.

ಕನ್ನಡ ಸೊಗಡಿನ ಸೊಲ್ಲಾಪುರ ಮಹಾರಾಷ್ಟ್ರ ಪಾಲಾದರೆ, ಕಾಸರಗೋಡು ಕೇರಳಕ್ಕೆ ಸೇರಿತು. ಇಂದೂ ಬೆಳಗಾವಿಗಾಗಿ ಕೂಗಾಟ, ಅರಚಾಟ, ಹೊಡೆದಾಟ ಎಲ್ಲವೋ ನಡೆಯುತ್ತಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ಮರಾಠಿ ಫಲಕ ಹಾಕಿ ಕನ್ನಡ ಭಾವನೆಗಳನ್ನು ಕೆರಳಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸಚಿವ ಮನೋಹರ ಜೋಷಿ ಅವರಂಥವರು ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ.

ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ಮಹಾಜನ್‌ ವರದಿಯ ಜಾರಿಯಾಂದೇ ಮಾರ್ಗ ಎಂಬ ಕೂಗು ದಶಕಗಳಿಂದ ಕೇಳಿಬರುತ್ತಿದೆ. ಮಹಾಜನ್‌ ವರದಿ ಜಾರಿಯಾಗುವಂತಿಲ್ಲ. ಕನ್ನಡಿಗರಿಗೆ ನ್ಯಾಯದೊರಕುವಂತಿಲ್ಲ ಎನ್ನುವ ಸ್ಥಿತಿ.

ಕರ್ನಾಟಕದ ಉತ್ತರ ಗಡಿಯಿಂದ 40 ಮೈಲಿ ಆಚೆ ಗೋದಾವರಿ ಹರಿಯುತ್ತದೆ. ಅಂದರೆ, ಅಲ್ಲಿಯವರೆಗೂ ಕರ್ನಾಟಕ ಹಬ್ಬಿತ್ತು. ಆದರೆ, ಈಗ ಆ ಭೂಭಾಗ ಆಂಧ್ರ ಹಾಗೂ ಮಹಾರಾಷ್ಟ್ರದಲ್ಲಿ ಸೇರಿಹೋಗಿದೆ. ವಾಸ್ತವವಾಗಿ ಕರ್ನಾಟಕ ಬೊಂಬಾಯಿವರೆಗೂ ಹಬ್ಬಿತ್ತು. ಇದಕ್ಕೆ ಮುಂಬಯಿಯಲ್ಲಿರುವ ಹಲವು ಊರುಗಳ ಕನ್ನಡ ಹೆಸರುಗಳೇ ಸಾಕ್ಷಿ. ಬೊಂಬಾಯಿ ಬಳಿ ಕನ್ನಡ ಎಂಬ ಹೆಸರಿನ ತಾಲೂಕೇ ಇದೆ.

ಇದಕ್ಕಿಂತಲೂ ಮಿಗಿಲಾಗಿ ಮಹಾರಾಷ್ಟ್ರದಲ್ಲಿ ದೊರೆತಿರುವ ಸಾವಿರ ಶಾಸನಗಳ ಪೈಕಿ 300ಕ್ಕೂ ಹೆಚ್ಚು ಕನ್ನಡ ಶಾಸನಗಳಿವೆ. ಮರಾಠಿಯಲ್ಲಿರುವ ಶಾಸನಗಳ ಸಂಖ್ಯೆ ಕೇವಲ 76. ಕನ್ನಡನಾಡು ಮಹಾರಾಷ್ಟ್ರವನ್ನಾವರಿಸಿತ್ತು ಎಂಬುದಕ್ಕೆ ಇದಕ್ಕಿಂತ ಪುರಾವೇ ಬೇಕೆ? ಸೊಲ್ಲಾಪುರ, ಸಾಂಗ್ಲಿ, ಉಸ್ಮಾನಾಬಾದ್‌, ನಾಂದೇಡ್‌ ಜಿಲ್ಲೆಗಳು ಅಚ್ಚಕನ್ನಡದ ನಾಡು ಎಂಬುದನ್ನು ಇದು ನಿರೂಪಿಸುತ್ತದೆ.

ಈ ಮಧ್ಯೆ ಗಡಿ ಭಾಗಗಳಲ್ಲಿ ಪರಭಾಷೆಯ ಪ್ರಭಾವ ಹೇರಳವಾಗಿದೆ. ಕಾಸರಗೋಡಿನಲ್ಲಂತೂ ಆಡಳಿತಾತ್ಮಕ ವಿಚಾರಗಳಿಗಷ್ಟೇ ಕೇರಳವನ್ನವಲಂಬಿಸಿದ್ದಾರೆ. ಅಲ್ಲಿನ ಜನತೆಯ ಕಲೆ, ಸಂಸ್ಕೃತಿ, ಭಾಷೆ, ಆಚಾರ, ವಿಚಾರ ಎಲ್ಲವೂ ಕನ್ನಡವೇ. ಆದರೂ ಕಾಸರಗೋಡು ಕನ್ನಡಿಗರ ಕೈತಪ್ಪಿದೆ. ಕೋಲಾರ, ಚಿಂತಾಮಣಿ, ಪಾವಗಡಗಳಲ್ಲಿ ತೆಲುಗು ಭಾಷೆಯ ಪ್ರಭಾವ ಇದ್ದರೆ, ಬೆಂಗಳೂರಿನ ವನ್ನಾರಪೇಟೆ, ಕೆ.ಜಿ.ಎಫ್‌ಗಳಲ್ಲಿ ತಮಿಳು ಪ್ರಭಾವ.

ಭಾಷಾವಾರು ಪ್ರಾಂತ್ಯ ವಿಭಜನೆಯ ಬಳಿಕ ಅಂದರೆ 1956 ನವೆಂಬರ್‌ 1ರಿಂದಲೂ ಅಸಂತೃಪ್ತಿ, ಅಸಮಧಾನದ ಹೊಗೆ ಆಡುತ್ತಲೇ ಇದೆ. ಗಡಿ ವಿವಾದ, ಜಲ ವಿವಾದ ಆಗಿಂದಾಗ್ಗೆ ಸಮಾಧಿಯಿಂದೆದ್ದು ಕೂಗು ಹಾಕುತ್ತದೆ. ಕನ್ನಡಿಗರು ಮತ್ತು ತಮಿಳಿಗರ ನಡುವೆ ಕಾವೇರಿ ಜಲ ವಿವಾದ ಒಂದು ದೊಡ್ಡ ಕಂದಕವನ್ನೇ ಸೃಷ್ಟಿಸಿದೆ.

ಉದಯವಾಯಿತು ಚೆಲುವ ಕನ್ನಡ ನಾಡು : ಈ ನಡುವೆಯೂ ಸ್ವಾತಂತ್ರ್ಯಾನಂತರ ಆಡಳಿತಾತ್ಮಕ ದೃಷ್ಟಿಯಿಂದ 1956ರಲ್ಲಿ (ಏಕೀಕರಣ) ಭಾಷಾವಾರು ಪ್ರಾಂತ್ಯ ವಿಭಜನೆ ಮಾಡಲಾಯಿತು. ಆಗ ಹುಟ್ಟಿದ್ದೇ ಮೈಸೂರು ಸಂಸ್ಥಾನ. ಹಲವು ರಾಜರ ಆಳ್ವಿಕೆಗೆ ಒಳಪಟ್ಟಿದ್ದ ನಾಡು ಒಂದಾಗಿ ವಿಶಾಲ ಮೈಸೂರು ರಾಜ್ಯವಾಯಿತು.

ಮೈಸೂರು ಸಂಸ್ಥಾನವನ್ನಾಳುತ್ತಿದ್ದ ಜಯಚಾಮರಾಜೇಂದ್ರ ಒಡೆಯರ್‌ ರಾಜ್ಯದ ಪ್ರಥಮ ರಾಜ್ಯಪಾಲರಾದರು. ಆಡಳಿತ ದೃಷ್ಟಿಯಿಂದ ರಾಜ್ಯಗಳ ವಿಭಜನೆಯಾಗಿ, ನವಭಾರತ ನಿರ್ಮಾಣವೂ ಆಯಿತು. ಆದರೆ, ನಮ್ಮ ನಾಡಿನ ಭೂಮಿ ಅನ್ಯ ರಾಜ್ಯದ ಪಾಲಾಗಿದ್ದು, ಆ ಪ್ರದೇಶದ ಕನ್ನಡತನವುಳ್ಳ ಎಲ್ಲರಲ್ಲೂ ಅಸಮಾಧಾನ ಮೂಡಿಸಿತು.

ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ಭಾಗಗಳೆಲ್ಲಾ ಸೇರಿ ಒಂದಾದ ರಾಜ್ಯಕ್ಕೆ ಮೈಸೂರು ಎಂಬ ಹೆಸರಿಟ್ಟಿದ್ದು, ಹಲವು ಕನ್ನಡಿಗರಿಗೆ ಅಸಮಾಧಾನ ಮೂಡಿಸಿತು. ಈ ಹಿನ್ನೆಲೆಯಲ್ಲಿ ಕಂನಾಡಿಗೆ ವ್ಯಾಸ ಭಾರತದಲ್ಲೇ ಉಲ್ಲೇಖ ಇರುವ ಕರ್ನಾಟಕವೆಂಬ ಹೆಸರೇ ಸೂಕ್ತ ಎಂಬ ಕೂಗು ಬಲವಾದಾಗ, ದೇವರಾಜ ಅರಸು ಅವರ ಆಳ್ವಿಕೆಯ ಕಾಲದಲ್ಲಿ ಅಂದರೆ, 1973ರ ನವೆಂಬರ್‌ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.

ವಾಸ್ತವವಾಗಿ ಕನ್ನಡರಾಜ್ಯೋತ್ಸವದ ಅಬ್ಬರದ ಆಚರಣೆ ಬಂದಿದ್ದು ಅಂದಿನಿಂದಲೇ. ಕನ್ನಡದ ಕಹಳೆ ರಾಜ್ಯಾದ್ಯಂತ ಮೊಳಗತೊಡಗಿತು. ಕನ್ನಡತನ ಏಕಾಏಕೀ ಜಾಗೃತಗೊಂಡಿತು. ಆದರೆ, ಅದೆಲ್ಲಾ ಆರಂಭ ಶೂರತ್ವ ಎಂದು ತಿಳಿದದ್ದು ಆನಂತರವೇ. ನವೆಂಬರ್‌ 1ರಂದು ಮೈಕೊಡವಿ ಏಳುವ ಕನ್ನಡಿಗರು ನವೆಂಬರ್‌ 30ರಂದು ಇನ್ನೂ ಹೆಚ್ಚೆಂದರೆ ಡಿಸೆಂಬರ್‌ 31ಕ್ಕೆ ತಣ್ಣಗಾಗಿ ಆನಂತರ ಬಹುತೇಕ 10 ತಿಂಗಳು ಕನ್ನಡವನ್ನೇ ಮರೆತು ನಿರಭಿಮಾನಿಗಳಾದರು.

ಕನ್ನಡ ರಾಜ್ಯದಲ್ಲಿ ಕನ್ನಡ ಉಳಿಸಲು ಕನ್ನಡ ಕಾವಲು ಸಮಿತಿ ರಚಿಸುವ ಸ್ಥಿತಿ ತಂದೊಡ್ಡಿದರು. 1993ರಲ್ಲಿ ಸರಕಾರ ಕನ್ನಡ ಜಾಗೃತಿ ವರ್ಷವನ್ನೇ ಆಚರಿಸಿತು. ಜಾಗೃತಿ ವರ್ಷ ಮುಗಿದು ಹತ್ತಿರ ಹತ್ತಿರ ದಶಕ ಸಮೀಪಿಸುತ್ತಿದ್ದರೂ ಕನ್ನಡ ಜಾಗೃತಿ ಮಾತ್ರ ಮೂಡಲಿಲ್ಲ ಎಂಬುದು ವಿಷಾದದ ಸಂಗತಿ.

ಇಂದು ಕರ್ನಾಟಕದಲ್ಲಿ ಅಲ್ಪ ಸ್ವಲ್ಪ ಕನ್ನಡ ಉಳಿದಿದ್ದರೆ ಅದಕ್ಕೆ ಗೋಕಾಕ್‌ ಚಳವಳಿ ಕಾರಣ ಎಂಬುದು ಖಂಡಿತಾ ಅತಿಶಯೋಕ್ತಿಯ ಮಾತಲ್ಲ.

ವಾರ್ತಾ ಸಂಚಯ

ಮುಖಪುಟ / ಕನ್ನಡ ರಾಜ್ಯೋತ್ಸವ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more