ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮೌಲ್ವಿಗಳ ಸ್ವದೇಶಿ ವಾದ, ಅಮೆರಿಕ ವಸ್ತುಗಳಿಗೆ ನಿಷೇಧ

By Staff
|
Google Oneindia Kannada News

ಬೆಂಗಳೂರು : ಸ್ವದೇಶೀ ಮಾತು ಬಿಜೆಪಿಗಳಿಂದ ಮೌಲ್ವಿಗಳತ್ತ ಬಂದಿದೆ. ಅಫ್ಘಾನಿಸ್ತಾನದಲ್ಲಿ ಮುಗ್ಧರ ಕೊಲೆ ಮಾಡುತ್ತಿರುವ ಅಮೆರಿಕಾದ ಮೇಲೆ ಅವರೆಲ್ಲಾ ಸಿಟ್ಟುಗೊಂಡಿದ್ದಾರೆ. ಪರಿಣಾಮವಾಗಿ ಅಮೆರಿಕನ್‌ಕಂಪೆನಿಗಳೂ ಉತ್ಪಾದಿಸಿದ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಮೆರಿಕನ್‌ ಕಂಪೆನಿಗಳ ಉತ್ಪನ್ನಗಳನ್ನು ಖರೀದಿಸಬೇಡಿ ಎಂದು ಬೆಂಗಳೂರಿಗರಿಗೆ ಕರೆ ನೀಡಿದ್ದಾರೆ.

ಅಮೆರಿಕಾ ಜೊತೆ, ಲಂಡನ್‌, ಪಾಕಿಸ್ತಾನದ ವಸ್ತುಗಳಿಗೂ ಮೌಲ್ವಿಗಳು ಬಹಿಷ್ಕಾರ ಹಾಕಿದ್ದಾರೆ. ಕಳೆದ ಶುಕ್ರವಾರದ ನಮಾಜ್‌ನಲ್ಲಿ ಈ ಕರೆ ಕೊಡಲಾಗಿದೆ. ಈ ನಿರ್ಧಾರ ಜೆಹಾದ್‌ ಬೆಂಬಲಿಸಿಯೇನೂ ಅಲ್ಲ. ಬದಲಾಗಿ ಮಕ್ಕಳು, ಮುದುಕರೆನ್ನದೆ, ಅಮೆರಿಕಾ ಮುಗ್ಧ ಜನರ ಹತ್ಯೆ ಮಾಡುತ್ತಿರುವುದನ್ನು ವಿರೋಧಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೌಲ್ವಿಗಳು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅಮೆರಿಕನ್‌ ಕಂಪೆನಿಗಳು ಉತ್ಪಾದಿಸಿದ ವಸ್ತುಗಳನ್ನು ಖರೀದಿಸುವುದೆಂದರೆ ಅಮೆರಿಕಾದ ಕ್ರಮವನ್ನು ಬೆಂಬಲಿಸಿದಂತೆಯೇ. ನಮ್ಮ ಗಳಿಕೆಯಿಂದ ಅಮೆರಿಕನ್‌ ಕಂಪೆನಿಗಳು ಲಾಭ ಮಾಡುತ್ತಿವೆ. ಆ ಹಣವನ್ನು ಅಫ್ಘಾನ್‌ನ ಮುಗ್ಧ ಜನರನ್ನು ಕೊಲ್ಲಲು ಬಳಸಲಾಗುತ್ತಿದೆ ಎನ್ನುವುದು , ಮೌಲ್ವಿ ಮೌಲಾನಾ ರಫಿ ಅಹ್ಮದ್‌ ಅಭಿಪ್ರಾಯ.

ಈ ಆಂದೋಳನದ ಮೊದಲ ಹಂತದಲ್ಲಿ ನಿಷೇಧಿತ- ಸೋಪ್‌, ಟೂಥ್‌ ಪೇಸ್ಟ್‌, ತಿಂಡಿಗಳು, ಬಟ್ಟೆ, ಕಾರ್‌ ಮತ್ತು ಸಿಗರೇಟಿನಂತಹ ಅಮೆರಿಕನ್‌ ಕಂಪೆನಿಗಳು ಉತ್ಪಾದಿಸಿರುವ ವಸ್ತುಗಳ ಪಟ್ಟಿಯಾಂದನ್ನು ಮೌಲ್ವಿಗಳು ಹಂಚುತ್ತಿದ್ದಾರೆ. ಸೋ, ಪೆಪ್ಸಿ, ಕೋಲಾಗಳಿಗೂ ಬ್ಯಾನ್‌ ಸಲ್ಲುತ್ತದೆ. ಬದಲಿಗೆ ಎಳೆನೀರು, ಲಿಂಬೆ ಶರಬತ್ತು, ನೀರು ಮಜ್ಜಿಗೆಗೆ ಕಾಲ ಬಂದಿದೆ.

ಎಲ್ಲಿಯವರೆಗೆ ಈ ಬಹಿಷ್ಕಾರ ಎಂದರೆ, ‘ಶಾಶ್ವತವಾಗಿ’ ಎಂದು ಮೌಲ್ವಿಗಳು ಹೇಳುತ್ತಾರೆ. ಭಾರತೀಯ ಕಂಪೆನಿಗಳು ಈಗ ಅಗತ್ಯವಿರುವ ಎಲ್ಲವನ್ನೂ ತಯಾರಿಸುತ್ತವೆ. ನಿಜ ಹೇಳಬೇಕೆಂದರೆ ಅಮೆರಿಕನ್‌ ಕಂಪೆನಿಗಳು ಉತ್ಪಾದಿಸುವ ವಸ್ತುಗಳು ನಮಗೆ ಬೇಡವೇ ಬೇಡ. ಹಾಗೇನಾದರೂ ಬೇಕಿದ್ದಲ್ಲಿ ಚೀನಾ, ಹಾಂಕ್‌ಕಾಂಗ್‌, ಇಂಡೋನೇಷ್ಯಾ, ಸಿಂಗಾಪೂರ್‌ನಂತಹ ಏಷ್ಯನ್‌ ರಾಷ್ಟ್ರಗಳು ತಯಾರಿಸುವ ವಸ್ತುಗಳನ್ನು ತೆಗೆದುಕೊಳ್ಳಬಹುದಲ್ಲಾ ಎಂದು ಮರು ಪ್ರಶ್ನೆ ಹಾಕುತ್ತಾರೆ.

ಹೀಗೆಲ್ಲಾ ಅಮೆರಿಕಾವನ್ನು ದೂರುವ ಮೌಲ್ವಿಗಳ ಹತ್ತಿರ ‘ ಹಾಗಾದರೆ ನ್ಯೂಯಾರ್ಕ್‌ ದುರಂತದ ಬಗ್ಗೆ ಏನು ಹೇಳುತ್ತೀರಿ’ ಎಂದರೆ.. ‘ಅದೂ ಕೂಡ ಬಹಳ ಅನ್ಯಾಯ’ ಎಂದು ಬೇಜಾರು ಮಾಡಿಕೊಳ್ಳುತ್ತಾರೆ. ಅಮೆರಿಕಾದವರು ತಪ್ಪಿತಸ್ಥರನ್ನು ಹುಡುಕಲಿ. ಮುಗ್ಧರನ್ನೇಕೆ ಕೊಲ್ಲಬೇಕಪ್ಪಾ.. ಅವರದೇನು ತಪ್ಪು ಎನ್ನುತ್ತಾ ಇದು ಮಾನವೀಯತೆಗೆ ವಿರುದ್ಧವಾದುದು ಎಂದು ಕೆಂಡ ಕಾರುತ್ತಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X