ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲನ ತುಳಿತವ ಧಿಕ್ಕರಿಸಿ, ತೇಲಿಬರುತ್ತಿದೆ ಬೆಂಗಳೂರು ಐಟಿ.ಕಾಂ

By Staff
|
Google Oneindia Kannada News

ಬೆಂಗಳೂರು : ಕಳೆದ ವರ್ಷದ ಸಮಾವೇಶಕ್ಕೆ ಹೋಲಿಸಿದರೆ, ಈ ಬಾರಿ ಬೆಂಗಳೂರು ಐಟಿ.ಕಾಂಗೆ ಹಿನ್ನಡೆ ಉಂಟಾಗಿದೆ. ಆದಾಗ್ಯೂ ನವೆಂಬರ್‌ 1ರಿಂದ ಬೆಂಗಳೂರು ಅರಮನೆ ಆವರಣದಲ್ಲಿ ಆರಂಭವಾಗಲಿರುವ ವಾರ್ಷಿಕ ಮೇಳಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ.

ಕಳೆದ ವರ್ಷ ಈ ಮೇಳದಲ್ಲಿ ಪಾಲ್ಗೊಂಡ ಕಂಪನಿಗಳ ಸಂಖ್ಯೆಗೆ ಹೋಲಿಸಿದರೆ, ಈ ಬಾರಿ ಪ್ರತಿಶತ 30ರಷ್ಟು ಕಂಪನಿಗಳು ಮೇಳದಿಂದ ಹಿಂದೆ ಸರಿದಿವೆ. ಹೋದವರ್ಷ ನಡೆದ ಮೇಳದಲ್ಲಿ 15 ರಾಷ್ಟ್ರಗಳ ಸುಮಾರು 376 ಕಂಪನಿಗಳು ಆಗಮಿಸಿದ್ದವು. ಆದರೆ, ಈ ಬಾರಿ 250 ಕಂಪನಿಗಳು ಮಾತ್ರ ತಮ್ಮ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿವೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉಂಟಾಗಿರುವ ಜಾಗತಿಕ ಹಿನ್ನಡೆಯೇ ಇದಕ್ಕೆ ಕಾರಣ ಎಂಬುದು ತಜ್ಞರ ಹೇಳಿಕೆ. ಆದರೆ, ಮೈಕ್ರೋಸಾಫ್ಟ್‌, ಇಂಟೆಲ್‌ನಂತಹ ದೊಡ್ಡ ಕಂಪನಿಗಳ ಪಾಲ್ಗೊಳ್ಳುವಿಕೆಯಿಂದ ಈ ಬಾರಿಯ ಮೇಳ ಕಳೆದ ವರ್ಷಕ್ಕಿಂತ ಮಹತ್ವವನ್ನು ಗಳಿಸಿಕೊಂಡಿದೆ ಎಂಬುದು ಸಂಘಟಕರ ವಾದ.

ಕಳೆದ ವರ್ಷ ನಾವು ಕೇವಲ ಆರು ಕಾರ್ಯಕ್ರಮಗಳಿದ್ದವು. ಈ ಬಾರಿ ಇನ್ನೂ ಮೂರು ಕಾರ್ಯಕ್ರಮಗಳಿದ್ದು, ಈ ವರ್ಷದ ಮೇಳ ಕಳೆದ ವರ್ಷಕ್ಕಿಂತ ಯಶಸ್ವಿಯಾಗಲಿದೆ ಎಂಬ ಆಶಾಭಾವನೆಯನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ವ್ಯಕ್ತಪಡಿಸಿದ್ದಾರೆ. ಆದರೆ, ಅಮೆರಿಕದಲ್ಲಿನ ವಿದ್ಯಮಾನಗಳಿಂದಾಗಿ ಹಲವು ಕಂಪನಿಗಳು ಈ ಮೇಳದಿಂದ ಹಿಂದೆಗೆದಿವೆ.

ಈ ಮೇಳವನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ದಿಗ್ವಿಜಯಸಿಂಗ್‌ ಉದ್ಘಾಟಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭಕ್ಕೆ ಬ್ರಿಟನ್‌ನ ಇ - ಕಾಮರ್ಸ್‌ ಖಾತೆ ಸಚಿವ ಅಲೆಕ್ಸಾಂಡರ್‌ ಡಗ್ಲಾಸ್‌ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಆದಾಗ್ಯೂ ಈ ಬೃಹತ್‌ ಹಾಗೂ ಜನಪ್ರಿಯ ಸಮಾವೇಶದಲ್ಲಿ ವಿಶ್ವಾದ್ಯಂತದಿಂದ ಆಗಮಿಸುವ ಸುಮಾರು 750 ಪ್ರತಿನಿಧಿಗಳು ಹಾಗೂ 60 ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ವರ್ಷದ ಮೇಳದಲ್ಲಿ 200 ದಶಲಕ್ಷ ಡಾಲರ್‌ ವಹಿವಾಟು ನಡೆದಿತ್ತು. ಈ ಬಾರಿ ಈ ಮೊತ್ತ ಇನ್ನೂ ಹೆಚ್ಚಾಗಲಿದೆ ಎಂದು ಸಂಘಟಕರು ನಿರೀಕ್ಷಿಸಿದ್ದರೆ, ಇದು ಏರುಪೇರಾಗಬಹುದು ಎಂಬುದು ತಜ್ಞರ ಅಂಬೋಣ.

ಐ.ಟಿ. ಕ್ವಿಜ್‌ : ಮಾಹಿತಿ ತಂತ್ರಜ್ಞಾನ ಕೇವಲ ನಗರವಾಸಿಗಳ ಸೊತ್ತಲ್ಲ ಎಂಬುದನ್ನು ಸಾಬೀತುಪಡಿಸಲು ಪಣತೊಟ್ಟಿರುವ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಕಳೆದ ವರ್ಷದಂತೆಯೇ ಈ ವರ್ಷ ಕೂಡ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಐ.ಟಿ. ಕ್ವಿಜ್‌ ಸ್ಪರ್ಧೆ ಏರ್ಪಡಿಸಿತ್ತು.

ಈ ಸ್ಪರ್ಧೆಯಲ್ಲಿ ಸುಮಾರು 4ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಸ್ಥಳಗಳಲ್ಲಿ ಹಲವು ಹಂತದ ಸ್ಪರ್ಧೆ ನಡೆದಿದ್ದು, ನವೆಂಬರ್‌ 2ರಂದು ಅಂತಿಮ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸ್ಪರ್ಧೆಯನ್ನು ತಿಳಿಗನ್ನಡದಲ್ಲಿ ನಡೆಸಿದ ಕೀರ್ತಿ ಇಂಡಿಯಾ ಇನ್‌ಫೋ.ಕಾಂ ಬಳಗದ ಕ್ವಿಜ್‌ಬ್ರೆೃನ್‌.ಕಾಂ ಚಾನೆಲ್‌ನ ಮುಖ್ಯಸ್ಥ ಗಿರಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲುತ್ತದೆ.

ವಿದೇಶಿ ಕಂಪನಿಗಳು : ಈ ಬಾರಿಯ ಮೇಳದಲ್ಲಿ ಬ್ರಿಟನ್‌ನ 18, ಸಿಂಗಾಪುರದ 10, ಮಾರಿಷಸ್‌ನ 16, ಜರ್ಮನಿಯ 6, ಕಂಪನಿಗಳು ಪಾಲ್ಗೊಳ್ಳುತ್ತಿವೆ ಎಂದು ಐ.ಟಿ. ಇಲಾಖೆ ನಿರ್ದೇಶಕ ರಮಣ ರೆಡ್ಡಿ ತಿಳಿಸಿದ್ದಾರೆ. ಈ ಹೊತ್ತು ಬೆಂಗಳೂರು ಅರಮನೆ ಆವರಣದಲ್ಲಿ ಸುಮಾರು 600 ಕಾರ್ಮಿಕರು ಸಮಾವೇಶಕ್ಕಾಗಿ ಬೃಹತ್‌ ಚಪ್ಪರ ನಿರ್ಮಾಣದಲ್ಲಿ ನಿರತರಾಗಿದ್ದಾರೆ.

(ಇನ್‌ಪೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X