ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರಿಂಗ್‌ : ಭರ್ತಿಯಾಗದೇ ಉಳಿದಿವೆ 4,022 ಸೀಟುಗಳು

By Staff
|
Google Oneindia Kannada News

ಬೆಂಗಳೂರು : ಎಂಜಿನಿಯರಿಂಗ್‌ ಅದರಲ್ಲೂ ಕಂಪ್ಯೂಟರ್‌ ಸೈನ್ಸ್‌ ಸೀಟ್‌ಗಾಗಿ ಲಂಚ, ರುಷುವತ್ತು, ಇನ್‌ಫ್ಲೂಯೆನ್ಸ್‌ ಮಾಡಿಸುತ್ತಿದ್ದ ಕಾಲ ಒಂದಿತ್ತು. ಇಷ್ಟೆಲ್ಲಾ ಕಸರತ್ತು ಮಾಡಿದರೂ ಸೀಟೇ ಸಿಗುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಈ ವರ್ಷ ರಾಜ್ಯದ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಇದ್ದರೂ, ಸೇರಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ.

ಹೀಗಾಗೇ ಕಳೆದ ಮೂರು ತಿಂಗಳುಗಳಿಂದ ಸಾಮಾನ್ಯಪ್ರವೇಶ ಪರೀಕ್ಷಾ ಘಟಕ ಕೈಗೊಂಡಿರುವ ವೃತ್ತಿ ಶಿಕ್ಷಣ ಸೀಟುಗಳ ಭರ್ತಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ದೀರ್ಘಾವಧಿ ಪ್ರಕ್ರಿಯೆಯ ನಡುವೆಯೂ 4,022 ಎಂಜಿನಿಯರಿಂಗ್‌ ಸೀಟುಗಳು ಭರ್ತಿ ಆಗದೆ ಹಾಗೇ ಉಳಿದಿವೆ.

ಸಿಇಟಿ ಏನೋ ಸೀಟು ಹಂಚಲು ಸಿದ್ಧ. ಆದರೆ, ಸೇರಲು ವಿದ್ಯಾರ್ಥಿಗಳೇ ಇಲ್ಲ ಅಷ್ಟೇ...

ಇದಕ್ಕೆ ಕಾರಣ ಏನು : ಮೇಲ್ನೋಟಕ್ಕೇ ಎರಡು ಕಾರಣಗಳು ಎದ್ದು ಕಾಣುತ್ತವೆ. 1. ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿರುವ ಎಂಜನಿಯರಿಂಗ್‌ ಕಾಲೇಜುಗಳ ಸಂಖ್ಯೆ, 2. ವಿಶ್ವ ಆರ್ಥಿಕ ಹಿನ್ನಡೆಯಿಂದ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಉಂಟಾಗಿರುವ ಅಸ್ಥಿರತೆ.

ಕಳೆದ ವರ್ಷ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಉದ್ಯಮ ಉತ್ತುಂಗದಲ್ಲಿದ್ದಾಗ, ರಾಜ್ಯ ಸರಕಾರ ಸಾಫ್ಟ್‌ವೇರ್‌ಮತ್ತು ಐ.ಟಿ. ಪದವೀಧರರ ಅಗತ್ಯ ಇದೆ ಎಂಬ ಕಾರಣ ನೀಡಿ ಹೊಸ ಕಾಲೇಜುಗಳಿಗೆ ಮಂಜೂರಾತಿ ನೀಡಿತು. ಎಐಸಿಟಿಇ ಇದನ್ನು ಅನುಮೋದಿಸಿತು. ಇದರಿಂದಾಗಿ ರಾಜ್ಯದಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಖ್ಯೆ ಶತಕ ಬಾರಿಸಿತು.

ಹೊಸದಾಗಿ ಆರಂಭಿಸಲಾದ ಕಾಲೇಜುಗಳ ಸೀಟುಗಳ ಜತೆಗೆ ಹಾಲಿ ಇರುವ ಕಾಲೇಜುಗಳಲ್ಲಿನ ಕೆಲವು ಕೋರ್ಸ್‌ಗಳ ಸೀಟು ಸಂಖ್ಯೆಯನ್ನೂ ಸರಕಾರ ಹೆಚ್ಚಿಸಿತು. ಹೊಸ ಕಾಲೇಜುಗಳಲ್ಲೇ ಸುಮಾರು 4500 ಮಾಹಿತಿ ತಂತ್ರಜ್ಞಾನ ಸೀಟುಗಳ ಹೆಚ್ಚಳವಾಯಿತು.

ಅಗತ್ಯಕ್ಕಿಂತ ಹೆಚ್ಚು ಕಾಲೇಜು ಸ್ಥಾಪಿಸಿದ್ದರಿಂದ ಹಾಗೂ ಸೀಟು ಸಂಖ್ಯೆಯನ್ನು 35 ಸಾವಿರಕ್ಕೆ ಹೆಚ್ಚಿಸಿದ್ದರಿಂದ ಈ ಪರಿಸ್ಥಿತಿ ಬಂದಿದೆ ಎಂಬುದು ತಜ್ಞರ ವಾದ. ಆದರೆ, ನಿರೀಕ್ಷೆ ತಳಕೆಳಗಾಗಿ ಸೀಟುಗಳು ಖಾಲಿ ಉಳಿದಿರುವ ಬಗ್ಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಸಿಇಟಿ ಘಟಕ ಆಶ್ಚರ್ಯ ವ್ಯಕ್ತಪಡಿಸಿದೆ.

ಈ ಹೊತ್ತು ರಾಜ್ಯದ 30 ಕಾಲೇಜುಗಳಲ್ಲಿ ಸಾವಿರಾರು ಸೀಟುಗಳು ಖಾಲಿ ಉಳಿದಿವೆ. ಸಿಇಟಿ ಪ್ರಕ್ರಿಯೆಯಲ್ಲೇ ಮಾಹಿತಿ ತಂತ್ರಜ್ಞಾನದ 650, ಎಲೆಕ್ಟ್ರಾನಿಕ್ಸ್‌ ನ 400 ಮತ್ತು ಮೆಕಾನಿಕಲ್‌ನ 300 ಸೀಟುಗಳು ಭರ್ತಿಯಾಗದೇ ಉಳಿದಿವೆ. ಇದಲ್ಲದೆ ಪೇಮೆಂಟ್‌ ಸೀಟುಗಳನ್ನು ಕೇಳುವವರೇ ಇಲ್ಲವಾಗಿದೆ. ಈ ವರ್ಷ ಹೊಸದಾಗಿ ಆರಂಭವಾದ ಕಾಲೇಜುಗಳಲ್ಲಿ ಸಿವಿಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಮೆಕಾನಿಕಲ್‌, ಐ.ಟಿ, ಕಂಪ್ಯೂಟರ್‌ ಸೈನ್ಸ್‌ ಹೀಗೆ ಎಲ್ಲ ಕೋರ್ಸ್‌ಗಳಲ್ಲೂ ಸೀಟುಗಳು ಖಾಲಿ ಇವೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X