• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೃಂಗೇರಿ ಶಾರದೆ ಸನ್ನಿಧಿಯ ಶರನ್ನವರಾತ್ರಿ ಉತ್ಸವ

By Staff
|

* ಟಿ.ಎಂ. ಸತೀಶ್‌

ಕನ್ನಡಿಗರ ನಾಡಹಬ್ಬವಾದ ದಸರಾ ಕೇವಲ ಮೈಸೂರಿಗಷ್ಟೇ ಸೀಮಿತವಲ್ಲ. ಮಂಗಳೂರಿನ ಕುದ್ರೋಳಿ ದಸರ, ಮಡಿಕೇರಿ ದಸರ, ಶೃಂಗೇರಿ ದಸರ ಮಹೋತ್ಸವಗಳೂ ಈ ನಾಡಿನಲ್ಲಿ ನಡೆಯುತ್ತವೆ. ರಾಜ್ಯದಲ್ಲಿರುವ ಬಹುತೇಕ ಎಲ್ಲ ಶಕ್ತಿ ದೇವತೆಯ ದೇವಾಲಯಗಳಲ್ಲೂ ನವರಾತ್ರಿ ಉತ್ಸವ ಜರುಗುತ್ತದೆ.

ಆದಿ ಶಂಕರರು ಪ್ರತಿಷ್ಠಾಪಿಸಿದ ಶಾರದಾಮಾತೆಯ ಕ್ಷೇತ್ರವಾದ ಶೃಂಗೇರಿಯ ದಸರೆಗೂ ಒಂದು ಪರಂಪರೆ ಇದೆ. ವೈಭವವೂ ಇದೆ. ಇತಿಹಾಸ ಇದೆ. ವಿಜಯನಗರ ಅರಸರ ಕಾಲದಿಂದ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯರು’ ಎಂಬ ಬಿರುದು ಪಡೆದ ಶೃಂಗೇರಿಯ ಜಗದ್ಗುರುಗಳು ವಿಜಯನಗರದರಸರ ಬಳುವಳಿಯಾಗಿ ಬಂದ ದಸರಾ ಮಹೋತ್ಸವವನ್ನು ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ.

ಆದರೆ, ಇಲ್ಲಿ ದಸರಾ ಮಹೋತ್ಸವ ಶರನ್ನವರಾತ್ರಿ ಎಂದೇ ಖ್ಯಾತ. ಈ ಆಧುನಿಕ ಯುಗದಲ್ಲೂ ಶಾಸ್ತ್ರ, ಸೂತ್ರ, ಸಂಪ್ರದಾಯ - ಆಚರಣೆಗೆ ಚ್ಯುತಿ ಬಾರದಂತೆ ಪ್ರತಿವರ್ಷ ಇಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ ಜರುಗುತ್ತದೆ. ಅಸುರ ಶಕ್ತಿಯನ್ನು ಮೆಟ್ಟಿನಿಂತ ದೈವೀಶಕ್ತಿಯ ಸಂಕೇತವಾದ ಈ ಹಬ್ಬ ಒಂದು ಅಪೂರ್ವ ಮಹೋತ್ಸವವಾಗಿ ಇಲ್ಲಿ ಮೈದಾಳುತ್ತದೆ.

ಮೈಸೂರಿನಲ್ಲಿ ಮಹಿಷಾಸುರನ ಸಂಹರಿಸಿದ ರುದ್ರರೂಪಿಣಿಯಾದ ಚಾಮುಂಡೇಶ್ವರಿಯ ಪೂಜೆಯಾಂದಿಗೆ ನವರಾತ್ರಿ ಆರಂಭವಾದರೆ, ಶೃಂಗೇರಿಯಲ್ಲಿ ಶಾಂತಸ್ವರೂಪಿಣಿಯಾದ ಶಾರದೆಯ ಪೂಜೆಯಾಂದಿಗೆ ಶರನ್ನವರಾತ್ರಿಗೆ ಚಾಲನೆ ದೊರಕುತ್ತದೆ.

ಇತಿಹಾಸ : ಶರತ್ಕಾಲದ ಆಶ್ವಯುಜ ಶುದ್ಧ ಪಾಢ್ಯದಿಂದ ನವಮಿಯವರೆಗೆ ಇಲ್ಲಿ ಶಾರಾದಾ ಮಾತೆಗೆ ವಿಶೇಷ ಪೂಜೆಗಳು ಜರುಗುತ್ತವೆ. ಹದಿನಾಲ್ಕನೇ ಶತಮಾನದಲ್ಲಿ ವಿದ್ಯಾರಣ್ಯರು ಶಾಂತ ಸ್ವರೂಪಿಣಿಯಾದ ಶಾರದೆಯು, ಮಹಿಷಾಸುರ, ರಕ್ತಬೀಜರೇ ಮೊದಲಾದ ಅಸುರರನ್ನು ಸಂಹರಿಸಲು ರುದ್ರರೂಪ ತಾಳಿ, ದಶಮಿಯಂದು ವಿಜಯೋತ್ಸವ ಆಚರಿಸದ ಸಂಕೇತವಾಗಿ ಈ ದಸರಾ ಉತ್ಸವವನ್ನು ಆರಂಭಿಸಿದರು. ಈ ಉತ್ಸವಕ್ಕೆ ಹೊಸ ಆಯಾಮವನ್ನೂ ನೀಡಿದರು.

ಈ ಕಾರಣಕ್ಕಾಗಿಯೇ ಇಂದೂ ಇಲ್ಲಿ ಶಾರದೆಗೆ ಒಂಬತ್ತು ದಿನಗಳ ಕಾಲ ವಿಶೇಷ ಅಲಂಕಾರಗಳು ನಡೆಯುತ್ತವೆ. ಶ್ರೀಮಠದ ಖಜಾನೆಯಲ್ಲಿರುವ ಎಲ್ಲ ನವರತ್ನಖಚಿತ ಆಭರಣಗಳನ್ನೂ ಹೊರತಂದು, ತಾಯಿ ಶಾರದೆಗೆ ತೊಡಿಸಲಾಗುತ್ತದೆ. ಮೈಸೂರು ಮಹಾರಾಜರು, ಮೈಸೂರು ಹುಲಿ ಟಿಪ್ಪೂಸುಲ್ತಾನ್‌, ಜಮಖಂಡಿಯ ದೊರೆಗಳೇ ಮೊದಲಾದ ನಾಡರಸರು ತಾಯಿಗೆ ನೀಡಿರುವ ಗಂಡಬೇರುಂಡ ಪದಕ, ಕಂಠೀಹಾರ, ಮರಕತ ಮಾಲೆ ಮೊದಲಾದ ಅತ್ಯಮೂಲ್ಯ ಆಭರಣಗಳನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಲಭಿಸುವುದು ಶರನ್ನವರಾತ್ರಿಯ ಕಾಲದಲ್ಲಿ ಮಾತ್ರ.

ಅಲಂಕಾರಗಳು : ಶರನ್ನವರಾತ್ರಿಯ ಸಮಯದಲ್ಲಿ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸುವ ತಾಯಿ ಶಾರದೆಯನ್ನು ಕಾಣಲು, ನೂರು ಕಣ್ಣಿದ್ದರೂ ಸಾಲದು. ಪಾಡ್ಯದಿಂದ ಜಗನ್ಮಾತೆಯಾದ ಶಾರದಾಂಬೆಗೆ ಅನುಕ್ರಮವಾಗಿ ಬ್ರಾಹ್ಮೀ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ಇಂದ್ರಾಣಿ, ಚಾಮುಂಡಿ, ಅಶ್ವವಾಹಿನಿ, ಶಾರದೆ, ಮೋಹಿನಿ ಹಾಗೂ ರಾಜರಾಜೇಶ್ವರಿ ಅಲಂಕಾರ ಹಾಕಲಾಗುತ್ತದೆ.

ದರ್ಬಾರು: ಮೈಸೂರು ಅರಸರು ನವರಾತ್ರಿ ಸಂದರ್ಭದಲ್ಲಿ ದರ್ಬಾರಿಗೆ ಬರುತ್ತಿದ್ದರು. ಈಗ ಖಾಸಗಿ ದರಬಾರು ನಡೆಯುತ್ತದೆ. ಅಂತೆಯೇ ಶೃಂಗೇರಿಯಲ್ಲಿ ಕೂಡ ನವರಾತ್ರಿ ದರಬಾರು ಹೆಸರು ವಾಸಿ. ತುಂಗಾ ಸ್ನಾನದ ಬಳಿಕ ತಾಯಿ ಶಾರದೆ ಹಾಗೂ ಚಂದ್ರಮೌಳೇಶ್ವರನ ಪೂಜಾ ನಂತರ ಶೃಂಗೇರಿಯ ಜಗದ್ಗುರುಗಳು ವರ್ಣರಂಜಿತ ಪಟ್ಟೆ ಪೀತಾಂಬರದ ದರ್ಬಾರು ಉಡುಗೆ ತೊಟ್ಟು, ಹೈದರಾಬಾದ್‌ ನಿಜಾಮರು ನೀಡಿರುವ ವಜ್ರಖಚಿತ ಕಿರೀಟ ಧರಿಸಿ, ರತ್ನಖಚಿತ ಕಂಠೀಹಾರಗಳನ್ನು ಧರಿಸಿ, ಕೈಯಲ್ಲೊಂದು ಜಪಮಾಲೆ ಹಿಡಿದು ನರಸಿಂಹ ವನದಿಂದ ಶಾರಾದಾ ದೇಗುಲಕ್ಕೆ ಬಂದು ಪ್ರದಕ್ಷಿಣೆ ನಮಸ್ಕಾರ ಹಾಕುತ್ತಾರೆ.

ಆನಂತರ ಗರ್ಭಗೃಹದಲ್ಲಿರುವ ಶಾರದಾಮಾತೆಯ ವಿಗ್ರಹಕ್ಕೆ ಮುಖಮಾಡಿ ಸಿಂಹಾಸನವನ್ನೇರಿ ಕುಳಿತುಕೊಳ್ಳುತ್ತಾರೆ. ಶ್ರೀಗಳು ಸಿಂಹಾಸನಾರೂಢರಾಗುವ ಆ ಕ್ಷಣಗಳನ್ನು ನೋಡುವುದೇ ಒಂದು ಸೊಗಸು. ಒಂದು ಗಂಟೆಗಳ ಕಾಲ ನಡೆಯುವ ಈ ದರ್ಬಾರಿನಲ್ಲಿ ದೇವಿ ಸಪ್ತಶತಿ ಪಾರಾಯಣ, ಅಷ್ಟಾವಧಾನ, ಶತಾವಧಾನ, ಪಂಡಿತರು, ಕಲಾವಿದರಿಗೆ ಸನ್ಮಾನ, ಬಿರುದು ಬಾವುಲಿಗಳ ಸಮರ್ಪಣೆಯೇ ಮೊದಲಾದ ಹತ್ತು ಹಲವು ವಿಧಿಗಳು ನಡೆಯುತ್ತವೆ.

ದೇಶ- ವಿದೇಶಗಳಲ್ಲಿ ನೆಲೆಸಿರುವ ಶ್ರೀಗಳವರ ಶಿಷ್ಯರು ದಸರೆಯ ಕಾಲದಲ್ಲಿ ಇಲ್ಲಿಗೆ ಆಗಮಿಸಿ, ಸಿಂಹಾಸನಾರೂಢರಾದ ಶ್ರೀಗಳಿಗೆ ಕಾಣಿಕೆಗಳನ್ನು ಸಮರ್ಪಿಸುವುದು ಅನೂಚಾನವಾಗಿ ನಡೆದುಬಂದ ನಡೆವಳಿಕೆ. ನವಮಿಯ ದಿನ ಶಾರದಾಪೀಠದಲ್ಲಿ ಇರುವ ಎಲ್ಲ ವಾಹನಗಳಿಗೂ, ಆಯುಧಗಳಿಗೂ ಪೂಜೆ ನೆರವೇರುತ್ತದೆ. ಗಜಪೂಜೆ, ಅಶ್ವಪೂಜೆ, ಗೋಪೂಜೆಯೂ ಜರುಗುತ್ತದೆ. ಪವಿತ್ರಗ್ರಂಥಗಳ ಪಾರಾಯಣವೂ ನಡೆಯುತ್ತದೆ.

ಶೃಂಗಾರ: ನವರಾತ್ರಿಯ ಕಾಲದಲ್ಲಿ ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸುವ ದೇವಾಲಯದ ಸೌಂದರ್ಯವನ್ನು ನೋಡುವುದೇ ಒಂದು ಸೊಗಸು. ಈ ಸೊಬಗನ್ನು ಕಾಣಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

ಮೈಸೂರು ದಸರೆಯ ರೀತಿಯಲ್ಲೇ ಇಲ್ಲೂ ವೈಭವೋಪೇತ ನವರಾತ್ರಿ ಉತ್ಸವ ಜನಾಕರ್ಷಣೆಯ ಕೇಂದ್ರವಾಗಿದೆ. ದಶಮಿಯ ದಿನ ಬನ್ನಿ ಪತ್ರೆಯ ವಿತರಣೆಯಾಂದಿಗೆ ಉತ್ಸವ ಪರಿಸಮಾಪ್ತಿಗೊಳ್ಳುತ್ತದೆ.

ಮುಖಪುಟ / ಮೈಸೂರು ದಸರಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more