ರೈತರ ಬಗ್ಗೆ ಮೊಸಳೆ ಕಣ್ಣೀರು ಹರಿಸುವುದರಿಂದ ಪ್ರಯೋಜನವಿಲ್ಲ-ಕೃಷ್ಣ
ಬೆಂಗಳೂರು: ರೈತರ ಸಮಸ್ಯೆಗಳನ್ನೆಲ್ಲ ಸೆರಗಿನಲ್ಲಿ ಕಟ್ಟಿಕೊಂಡವರಂತೆ ವರ್ತಿಸುತ್ತಿರುವ ರಾಜ್ಯದ ಕೆಲವು ಮುಖಂಡರ ವರ್ತನೆಯ ಬಗ್ಗೆ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು , ಮೊಸಳೆ ಕಣ್ಣೀರು ಹರಿಸುವುದರಿಂದ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲವೆಂದು ಅವರಿಗೆ ಕಿವಿಮಾತು ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪರೋಕ್ಷವಾಗಿ ಟೀಕಿಸಿದ ಮುಖ್ಯಮಂತ್ರಿ ಕೃಷ್ಣ , ರೈತರ ಸಮಸ್ಯೆಗಳ ತೀವ್ರತೆಯನ್ನು ಕಡಿಮೆ ಮಾಡಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆ ಹೊರತು ಬರಿದೇ ಕಣ್ಣೀರು ಸುರಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದರು. ಎಪ್ಪತ್ತೆೈದನೇ ವರ್ಷಕ್ಕೆ ಕಾಲಿಟ್ಟ ಸಚಿವ ಎಚ್.ಕೆ.ರಂಗನಾಥ್ ಅವರನ್ನು ಅಭಿನಂದಿಸಲು ಭಾನುವಾರ ನಡೆದ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರೈತರ ಸಮಸ್ಯೆಗಳು ಹೆಚ್ಚುತ್ತಿವೆ. ಎಲ್ಲವನ್ನೂ ಸರ್ಕಾರ ಪರಿಹರಿಸಲು ಸಾಧ್ಯವಿಲ್ಲ . ಸೋವಿಯತ್ ಒಕ್ಕೂಟದ ವಿಭಜನೆಯಿಂದ ನಮ್ಮ ಕನಸುಗಳೆಲ್ಲ ಭಗ್ನವಾಗಿದ್ದು , ವಿಶ್ವದ ಆರ್ಥಿಕ ಸೂತ್ರಗಳಿಗೆ ಅನಿವಾರ್ಯವಾಗಿ ಬದ್ಧವಾಗಿರಬೇಕಾಗಿದೆ ಎಂದು ಕೃಷ್ಣ ವಿಷಾದ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅರಣ್ಯ ಸಚಿವ ರಂಗನಾಥ್ ನೀರಾ ಇಳಿಸಲು ಅನುಮತಿ ನೀಡದಿರುವ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಕೆಲವು ಜನರ ಹಿತಾಸಕ್ತಿಗೋಸ್ಕರ ಬಹುಸಂಖ್ಯಾತರಿಗೆ ಹೆಂಡ ಕುಡಿಸಲು ಸಾಧ್ಯವಿಲ್ಲ ಎಂದ ರಂಗನಾಥ್, ತಿಳಿವಳಿಕೆಯುಳ್ಳ ನೀರಾದ ಬಗ್ಗೆ ಜನ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಕರೆ ನೀಡಿದರು.












Click it and Unblock the Notifications