ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್‌ವೇರ್‌ ಎಂಜಿನಿಯರ್‌ ಮೇಲೆ ಎಸ್‌ಐ ರೌದ್ರಾವತಾರ

By Staff
|
Google Oneindia Kannada News

A picture of police atrosity on Bangalore software engineerಬೆಂಗಳೂರು : ತಮ್ಮ ವಾಹನಕ್ಕೆ ಅಡ್ಡ ಬಂದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಯ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರಿಗೆ, ಕಾಮಾಕ್ಷಿಪಾಳ್ಯದ ಪ್ರೊಬೆಷನರಿ ಸಬ್‌ಇನ್ಸ್‌ಪೆಕ್ಟರ್‌ ಚಿತ್ರಹಿಂಸೆ ನೀಡಿದ್ದಾರೆ.

ಎಬಿಬಿ ಸಂಸ್ಥೆಯ ಎಂಜಿನಿಯರ್‌ ಕೆ.ಎಸ್‌. ಸಚ್ಚಿದಾನಂದ ಅವರನ್ನು ಗನ್‌ಪಾಯಿಂಟ್‌ನಲ್ಲಿ ಹೆದರಿಸಿ ಠಾಣೆಗೆ ಕರೆದೊಯ್ದು, ಅವರ ಉಗುರುಗಳನ್ನು ಕಿತ್ತು, ಕ್ರಿಕೆಟ್‌ ಬ್ಯಾಟಿನಿಂದ ಮನಸೋ ಇಚ್ಛೆ ಬೌಂಡರಿ, ಸಿಕ್ಸರ್‌ ಬಾರಿಸಿ, ಲಾಠಿಯಿಂದ ಚಚ್ಚಿ, ಬೂಟಿನಿಂದ ಒದ್ದು ಮೈಯೆಲ್ಲಾ ಗಾಯ ಮಾಡಿದ್ದಾರೆ.

ಇಷ್ಟು ಘೋರ ಶಿಕ್ಷೆ - ಚಿತ್ರಹಿಂಸೆ ನೀಡುವಂತಹ ತಪ್ಪನ್ನು ಸಚ್ಚಿದಾನಂದ ಮಾಡಿದರೆ? ಘಟನೆ ಇಷ್ಟು :

ಅಕ್ಟೋಬರ್‌ 13ರಂದು ಸಂಜೆ ಕೆಲಸ ಮುಗಿಸಿಕೊಂಡು ಸಚ್ಚಿದಾನಂದ ಸ್ನೇಹಿತರೊಬ್ಬರ ಜೊತೆ ನಾಗರಬಾವಿ ಲೇಔಟ್‌ನಲ್ಲಿ ಸೈಟ್‌ ಒಂದನ್ನು ನೋಡಲು ಹೋಗಿದ್ದರು. ತಮ್ಮ ಬೈಕನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಸ್ನೇಹಿತರೊಂದಿಗೆ ಸೈಟ್‌ ಬಗ್ಗೆ ಮಾತನಾಡುತ್ತಿದ್ದರು. ಅಷ್ಟೊತ್ತಿಗೆ ಜೀಪಿನಲ್ಲಿ ಬಂದ ಸಬ್‌ಇನ್ಸ್‌ಪೆಕ್ಟರ್‌ ಕೃಷ್ಣಕುಮಾರ್‌, ತಮ್ಮ ಜೀಪನ್ನು ಸಚ್ಚಿದಾನಂದ ಅವರ ಬೈಕ್‌ಬಳಿ ನಿಲ್ಲಿಸಿದರು.

ಬಹುಶಃ ತಮ್ಮ ಬೈಕ್‌ ಅಡ್ಡ ಇರಬೇಕು ಎಂದು ಊಹಿಸಿದ ಸಚ್ಚಿದಾನಂದ ಬೈಕ್‌ ತೆಗೆಯಲು ಮುಂದಾದಾಗ, ಎಸ್‌.ಐ. ಅವರಿಗೆ ಅವಾಚ್ಯ ಶಬ್ದಗಳಿಂದ ಬೈದರು (ಬೋ... ಸೂ... ಮಗನೆ ಪದ ಬಳಕೆ ಆಯಿತು). ಇದರಿಂದ ಬೇಸತ್ತ ಎಂಜಿನಿಯರ್‌, ಸಾರ್‌ ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಿ, ನಾನೇನು ಕಳ್ಳ ಅಲ್ಲ ಎಂದದ್ದೇ ದೊಡ್ಡ ತಪ್ಪಾಯಿತು.

ನನಗೆ ಎದುರುವಾದ ಮಾಡ್ತೀಯ ಎಂದು ರಿವಾಲ್ವರ್‌ ತೆಗೆದು, ಸುಟ್ಟು ಹಾಕುವುದಾಗಿ ಬೆದರಿಸಿದ ಎಸ್‌.ಐ. ಅವರನ್ನು ಕುರಿಯಂತೆ ಜೀಪಿನಲ್ಲಿ ತುಂಬಿಕೊಂಡು ಸ್ಟೇಷನ್‌ಗೆ ಎಳೆದೊಯ್ದು ಬಟ್ಟೆ ಬಿಚ್ಚಿಸಿ, ಕ್ರಿಕೆಟ್‌ ಬ್ಯಾಟ್‌ನಿಂದ ಥಳಿಸಿದರು. ಸಾರ್‌ ನಾನೊಬ್ಬ ಎಂಜಿನಿಯರ್‌, ನಾನು ಗೌರವಾನ್ವಿತ ಕುಟುಂಬದಿಂದ ಬಂದವನು, ನನ್ನ ಮಡದಿ ಗರ್ಭಿಣಿ, ನಾನು ಮನೆಗೆ ಹೋಗಬೇಕು, ಬಿಟ್ಟು ಬಡಿ ಎಂದು ಸಚ್ಚಿದಾನಂದ ಪರಿಪರಿಯಾಗಿ ಬೇಡಿಕೊಂಡರೂ ಕಲ್ಲೆದೆಯ ರಾಕ್ಷಸ ಎಸ್‌.ಐ. ಮನ ಕರಗಲಿಲ್ಲ.

ಸತತ ಮೂರು ಗಂಟೆಗಳ ಕಾಲ ದನಗಳಿಗೆ ಬಡಿಯುವಂತೆ ಬಡಿದು, ಜುಟ್ಟು ಕಿತ್ತು, ಬೂಟಿನಲ್ಲಿ ಒದ್ದು, ಇಡೀ ರಾತ್ರಿ ಠಾಣೆಯಲ್ಲೇ ಕೂಡಿಹಾಕಲಾಗಿತ್ತು. ವಿಷಯ ತಿಳಿದು, ಠಾಣೆಗೆ ಬಂದ ಸಚ್ಚಿದಾನಂದರ ಅಣ್ಣ ಅತ್ತಿಗೆಯನ್ನೂ ಒಳಗೆ ಬಿಡಲಿಲ್ಲ. ಮಾರನೆ ದಿನ ಭಾನುವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆದೊಯ್ದಾಗ ನೀನೇನಾದರೂ ಪೊಲೀಸರು ಹೊಡೆದರು ಎಂದು ಹೇಳಿದರೆ, ಶೂಟ್‌ ಮಾಡ್ತೀನಿ ಅಂತ ಹೆದರಿಸಿದ್ರು.

ಹೀಗಾಗಿ ಸಚ್ಚಿದಾನಂದ ನ್ಯಾಯಾಧೀಶರ ಮುಂದೆ ಬಾಯಿ ಬಿಡಲಿಲ್ಲ. ಅವರನ್ನು ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲ್‌ಗೆ ಹಾಕಲಾಯಿತು. ಸೋಮವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ, ನ್ಯಾಯಾಲಯದಲ್ಲಿ ತಮ್ಮ ಸೋದರ ಹಾಗೂ ಬಂಧುಗಳನ್ನು ಕಂಡ ಸಚ್ಚಿದಾನಂದ ಧೈರ್ಯ ತಂದುಕೊಂಡು, ಪೊಲೀಸ್‌ ದೌರ್ಜನ್ಯದ ಬಗ್ಗೆ ವಿವರಿಸಿದರು. ಗಾಯಗಳನ್ನು ನ್ಯಾಯಾಧೀಶರಿಗೆ ತೋರಿಸಿದರು.

ಪೊಲೀಸರು ಒಡ್ಡಿರುವ ಜೀವ ಬೆದರಿಕೆಯಿಂದ ಸಚ್ಚಿದಾನಂದ ಅವರ ಇಡೀ ಕುಟುಂಬ ಭಯಭೀತವಾಗಿದೆ. ಈ ಮಧ್ಯೆ ಎಸಿಪಿ ಬೆಳ್ಳಿಯಪ್ಪ ಅವರು ಸಚ್ಚಿದಾನಂದ ಅವರ ಮನೆಗೆ ಬಂದು ಅವರ ತಾಯಿಯ ಬಳಿ ಎಸ್‌.ಐ. ಪರವಾಗಿ ಕ್ಷಮೆ ಯಾಚಿಸಿ, ವಿಷಯ ದೊಡ್ಡದು ಮಾಡದಂತೆ ಮನವಿ ಮಾಡಿದರು. ಅವರಿಂದ ಹೇಳಿಕೆಯನ್ನೂ ದಾಖಲಿಸಿಕೊಂಡರು.

ಅಮಾಯಕರ ಮೇಲೆ ನಡೆದ ಪೊಲೀಸ್‌ ದೌರ್ಜನ್ಯದ ಬಗ್ಗೆ ತಿಳಿದ ರಾಜ್ಯ ರೈತ ಸಂಘದ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಅವರು, ಸಚ್ಚಿದಾನಂದ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಧೈರ್ಯ ತುಂಬಿದರು. ಸಚ್ಚಿದಾನಂದ ಅವರನ್ನು ಬೆಂಗಳೂರು ಪ್ರೆಸ್‌ಕ್ಲಬ್‌ಗೆ ಕರೆತಂದು ಪತ್ರಕರ್ತರೆದುರು ಪೊಲೀಸ್‌ ದೌರ್ಜನ್ಯದ ರುದ್ರನರ್ತನವನ್ನು ತೋರಿಸಿದರು. ನಿರಪರಾಧಿಗಳ ಮೇಲೆ ವಿನಾ ಕಾರಣ ಹಲ್ಲೆ ನಡೆಸುವ ಇವರು ಆರಕ್ಷಕರೋ.. ರಾಕ್ಷಸರೋ ಎಂದು ಪ್ರಶ್ನಿಸಿದರು?

ಪತ್ರಕರ್ತರಿಗೆ ನಡೆದ ಘಟನೆಯನ್ನು ವಿವರಿಸಿದ ಸಾಫ್ಟ್‌ವೇರ್‌ ಎಂಜಿನಿಯರ್‌ ಸಚ್ಚಿದಾನಂದ ಬಿಕ್ಕಿಬಿಕ್ಕಿ ಅತ್ತರು. ಅಂಗಿ ತೆರೆದು ಮೈಮೇಲೆ ಆಗಿರುವ ಗಾಯಗಳನ್ನು ತೋರಿಸಿದರು. ಶಾಸಕ ಪುಟ್ಟಣ್ಣಯ್ಯ ಅವರು ಮುಗ್ಧ ನಾಗರಿಕನ ಮೇಲೆ ವಿನಾ ಕಾರಣ ಹಲ್ಲೆ ನಡೆಸಿ, ರಾಕ್ಷಸನಂತೆ ವರ್ತಿಸಿದ ಸಬ್‌ಇನ್ಸ್‌ಪೆಕ್ಟರ್‌ ಅವರನ್ನು ಸೇವೆಯಿಂದ ವಜಾ ಗೊಳಿಸುವಂತೆ ಆಗ್ರಹಿಸಿದ್ದಾರೆ. ಸರಕಾರಕ್ಕೆ 10 ದಿನಗಳ ಗಡುವು ನೀಡಿದ್ದಾರೆ.

(ಇನ್‌ಫೋ ವಾರ್ತೆ)

Post your views

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X