ಕಾವೇರಿ ಪ್ರಾಧಿಕಾರ ಸಭೆ : ಯಾರ ಮಾತು ನಂಬುವುದು?
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಬುಧವಾರ ನಡೆದ ಕಾವೇರಿ ಪ್ರಾಧಿಕಾರದ ಸಭೆ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ವಿಫಲವಾದ ಬೆನ್ನಿಗೇ- ನಾಟಕೀಯ ಬೆಳವಣಿಗೆಗಳು ನಡೆದಿವೆ.
ನ್ಯಾಯಮಂಡಳಿ ಸೂಚಿಸಿದಂತೆ ಮೆಟ್ಟೂರು ಜಲಾಶಯಕ್ಕೆ ಕರ್ನಾಟಕ ನೀರು ಬಿಡುಗಡೆ ಮಾಡುವ ಕುರಿತಂತೆ ಖಾತರಿ ನೀಡಲು ಹಾಗೂ ವಿವಾದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾವೇರಿ ಕಣಿವೆಯ ರಾಜ್ಯಗಳು ಪರಸ್ಪರ ಒಪ್ಪಿಗೆಯ ಕಾರ್ಯವಿಧಾನವನ್ನು ರೂಪಿಸಲು ಕಾವೇರಿ ನದಿ ಪ್ರಾಧಿಕಾರ ಸೂಚನೆ ನೀಡಿತು.
ಕಾವೇರಿ ಜಲವಿವಾದ ನ್ಯಾಯಾಧಿಕರಣ ನೀಡಿರುವ ಮಧ್ಯಂತರ ಆದೇಶದ ಅನ್ವಯ ತಮಿಳುನಾಡಿಗೆ ನೀರು ಬಿಡಬೇಕೆಂದು ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ ಎಂದು ಬುಧವಾರ ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ಸುದ್ದಿ ಹೇಳಿಕೆ ತಿಳಿಸಿದೆ. ಆದರೆ, ಇಂಥ ಯಾವ ನಿರ್ದೇಶನ ಅಥವಾ ನಿರ್ಣಯವನ್ನೂ ಪ್ರಾಧಿಕಾರದ ಸಭೆ ಕೈಗೊಳ್ಳಲಿಲ್ಲ ಎಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯ ನಂತರ ಸ್ಪಷ್ಟಪಡಿಸಿದ್ದರು.
ಬುಧವಾರದ ಇತರ ಬೆಳವಣಿಗೆಗಳು
ಸಂಕಷ್ಟದ ಪರಿಸ್ಥಿತಿಯನ್ನು ಪ್ರಮಾಣಬದ್ಧವಾಗಿ ಹಂಚಿಕೊಳ್ಳುವಂತೆ 1992ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ವಿವರಣಾತ್ಮಕ ಆದೇಶದಲ್ಲಿ ನಿರ್ದೇಶಿಸಿತ್ತು. ಈ ಪ್ರಸ್ತಾವನೆಯ ಬಗ್ಗೆ ತಮ್ಮ ತಮ್ಮ ಸಲಹೆಗಳನ್ನು ಕಳಿಸಿಕೊಡುವಂತೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯ ಪ್ರಾಧಿಕಾರದ ಸಭೆ ಕಾವೇರಿ ಕಣಿವೆಯ ನಾಲ್ಕೂ ರಾಜ್ಯಗಳನ್ನು ಕೇಳಿಕೊಂಡಿತು.
ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ, ಪಾಂಡಿಚೇರಿ ಮುಖ್ಯಮಂತ್ರಿ ಷಣ್ಮುಗಂ, ಕೇರಳ ನೀರಾವರಿ ಸಚಿವ ಜೇಕಬ್, ಕೇಂದ್ರ ಜಲಸಂಪನ್ಮೂಲ ಸಚಿವ ಅರ್ಜುನ್‌ಚರಣ್ ಸೇಠಿ ಮತ್ತಿತರ ಅಧಿಕಾರಿಗಳು ಹಾಗೂ ಪ್ರಾಧಿಕಾರದ ನಡುವೆ ಎರಡೂವರೆ ತಾಸು ಕಾಲ ಸಭೆ ನಡೆಯಿತು. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳು ಬರ ಪರಿಸ್ಥಿತಿ ಎದುರಿಸುತ್ತಿರುವುದರಿಂದ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡವು.
ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳ ನೀರಿನ ಮಟ್ಟವನ್ನು ಇನ್ನು ಮುಂದೆ ಕಾವೇರಿ ಪ್ರಾಧಿಕಾರ ಉಸ್ತುವಾರಿ ಸಮಿತಿಯೇ ಪ್ರತಿ ತಿಂಗಳು ಪರಿಶೀಲಿಸಲಿದೆ. ಏನಾದರೂ ತಕರಾರು ಇದ್ದಲ್ಲಿ ಸಮಿತಿಯೇ ಪ್ರಾಧಿಕಾರಕ್ಕೆ ನೇರವಾಗಿ ತಿಳಿಸಲಿದೆ. ಪ್ರಸಕ್ತ ವರ್ಷ ಕಾವೇರಿ ಕಣಿವೆಯಲ್ಲಿ ಸಾಕಷ್ಟು ನೀರಿಲ್ಲ. ಕರ್ನಾಟಕದಲ್ಲಿರುವ ನಾಲ್ಕೂ ಜಲಾಶಯಗಳು ಶೇ.77ರಷ್ಟು ತುಂಬಿವೆ. ಆದರೆ ಮೆಟ್ಟೂರು ಜಲಾಶಯ ಭರ್ತಿಯಾಗಿರುವುದು ಶೇ.55ರಷ್ಟು ಮಾತ್ರ. ಇಂಥಾ ಪರಿಸ್ಥಿತಿಯಲ್ಲಿ ಲಭ್ಯವಿರುವ ನೀರನ್ನು ಉಭಯ ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಪ್ರಾಧಿಕಾರ ಸೂಚಿಸಿತು.
ಪ್ರಾಧಿಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡದ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಅಸಾಧ್ಯ. ಕಳೆದ ಹತ್ತು ವರ್ಷಗಳಲ್ಲಿ ನ್ಯಾಯಮಂಡಳಿ ಸೂಚಿಸಿದಷ್ಟು ನೀರನ್ನು ಕರ್ನಾಟಕ ಬಿಟ್ಟಿಲ್ಲ. ಈ ಬಾರಿಯಂತೂ ಜಿನುಗಿದ ನೀರು ಹರಿದು ಬರುತ್ತಿರುವುದನ್ನು ಹೊರತುಪಡಿಸಿದರೆ, ಕರ್ನಾಟಕ ಒಂದು ತೊಟ್ಟೂ ನೀರು ಬಿಟ್ಟಿಲ್ಲ. ತಮಿಳುನಾಡು ಮಳೆಗಾಗಿ ಮೋಡ ನೋಡುವ ಪರಿಸ್ಥಿತಿ ತಮಿಳುನಾಡಿಗೆ ಯಾವತ್ತೂ ಇದ್ದದ್ದೇ ಎಂದು ತಮಿಳುನಾಡು ಕಾನೂನು ಸಚಿವ ಪೊನ್ನಿಯನ್ ದೂರಿದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...