ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಾಮ ಹಾಗೂ ಮುಲ್ಲಾ ಒಮರ್‌ ಕಾಂದಹಾರ್‌ನಿಂದ ಪೇರಿ : ರಷ್ಯಾ

By Staff
|
Google Oneindia Kannada News

ಆಫ್ಘಾನಿಸ್ತಾನದ ಮೇಲೆ ಏಮೆರಿಕಾ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಒಮರ್‌ ಹಾಗೂ ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಕಾಂದಹಾರ್‌ನಿಂದ ಪೇರಿ ಕಿತ್ತಿದ್ದಾರೆ.

ಇಬ್ಬರು ಕೂರಬಲ್ಲ ಪುಟ್ಟ ವಿಮಾನಗಳಲ್ಲಿ ಒಸಾಮನ ಕುಟುಂಬ ಮತ್ತು ಮುಲ್ಲಾ ಒಮರ್‌ ಸಂಸಾರ ಗೊತ್ತಿಲ್ಲದ ಜಾಗೆಗೆ ಹಾರಿವೆ. ಗಲ್ಫ್‌ ನ್ಯೂಸ್‌ ಈ ಕುರಿತು ವರದಿ ಮಾಡಿರುವುದಾಗಿ ರಷ್ಯಾ ಸುದ್ದಿ ಸಂಸ್ಥೆ ಸೋಮವಾರ ಪ್ರಕಟಿಸಿದೆ.

ದಾಳಿಗೊಳಗಾದ ಕಾಬೂಲ್‌ ಈಗ ಹೇಗಿದೆ?
ಕಾಬೂಲಿನ ಮಾರುಕಟ್ಟೆಯಲ್ಲಿ ಏನೂ ಆಗೇ ಇಲ್ಲವೇನೋ ಎಂಬ ವಾತಾವರಣ. ಅಂಗಡಿ ಮುಂಗಟ್ಟುಗಳು ಮಾಮೂಲಿನಂತೆ ಕದ ತೆರಕೊಂಡವು. ಆದರೆ ಕರ್ಫ್ಯೂ ಹೇರಲಾಗಿರುವುದರಿಂದ ಗಿರಾಕಿಗಳಿಗೆ ಸಾಕಷ್ಟು ಕೊರತೆ. ಬಾಂಬು ಎಲ್ಲಿ ಬಿದ್ದಿರಬಹುದು ಎಂದು ನೋಡುವ ತವಕ ಜನರಲ್ಲಿ. ಆಫ್ಘಾನಿಸ್ತಾನದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅವುಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವ ಜನ ಸುರಕ್ಷಿತ ಸ್ಥಳಗಳಿಗೆ ಗುಳೆ ಹೊರಟಿದ್ದಾರೆ.

ಅಮೆರಿಕಾದ ಯುದ್ಧ ವಿಮಾನಗಳು ಬಾಂಬ್‌ ಸುರಿಸತೊಡಗಿದ ತಕ್ಷಣ ಕತ್ತಲೆಯಲ್ಲಿ ಮುಳುಗಿದ ಕಾಬೂಲ್‌ನಲ್ಲಿ ಭಾನುವಾರ ಮಧ್ಯರಾತ್ರಿ ದೀಪಗಳು ಹೊತ್ತಿಕೊಂಡವು. ಜನ ಇಂಥಾ ಸ್ಥಿತಿಯ ನಿರೀಕ್ಷೆ ಹೊತ್ತು ಬಹು ದಿನಗಳೇ ಕಳೆದಿದ್ದರಿಂದ ಯುದ್ಧ ಭೀತಿ ಹೆಚ್ಚೇನೂ ಕಾಣುತ್ತಿಲ್ಲ. ಯುದ್ಧ ಪ್ರಾರಂಭವಾದ ಅರ್ಧ ತಾಸಿನ ನಂತರ ತಾಲಿಬಾನ್‌ ಕರ್ಫ್ಯೂ ವಿಧಿಸಿದ್ದು, ಜನಜಂಗುಳಿ ಎಲ್ಲೂ ಇಣುಕುತ್ತಿಲ್ಲ. ಸೋಮವಾರ ಮೊದಲ ಜಾವದಲ್ಲಿ ಕಾಬೂಲ್‌ನ ಉತ್ತರ ಅಂಚಿನ ಮೇಲೆ ಅಮೆರಿಕಾ ಮತ್ತೊಂದು ಬಾಂಬ್‌ ಸಿಡಿಸಿದ್ದರಿಂದ ಮತ್ತೆ ವಿದ್ಯುತ್‌ ಕಡಿತ ಉಂಟಾಗಿದೆ.

ಒಸಾಮ- ಅಮೆರಿಕಾ ಇಬ್ಬರೂ ಕಡಿಮೆಯಿಲ್ಲ. ಇಬ್ಬರಿಗೂ ಭಯವಿಲ್ಲ. ಏನಾಗುತ್ತದೋ ನೋಡಬೇಕು ಎನ್ನುತ್ತಾರೆ ಲಾರಿ ಚಾಲಕ ಫಿದಾ ಮೊಹಮ್ಮದ್‌. ಸುರಕ್ಷಿತವಾದ ಸ್ಥಳದಲ್ಲಿರುವ ತಮ್ಮನ ಮನೆಗೆ ಈತ ಗುಳೇ ಹೊರಟಿದ್ದಾನೆ. ಆಫ್ಘಾನಿಸ್ತಾನ ಇಂಥಾ ದುರಂತ ಹಿಂದೆಂದೂ ಕಂಡಿರಲಿಲ್ಲ. ಬಡತನದ ಬೇಗೆಯಲ್ಲಿ ಬೇಯುತ್ತಿರುವ, ತಾಲಿಬಾನಿಗಳ ತುಳಿತಕ್ಕೆ ಸಿಲುಕಿರುವ ಅಮಾಯಕರು ತಮ್ಮ ತಮ್ಮ ಮಕ್ಕಳ ಜೀವ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ಆಯಕಟ್ಟಿನ ಜಾಗೆಗಳ ಜನ ಮುಷ್ಟಿ ಬಿಗಿಹಿಡಿದು ಕ್ಷಣ ತಳ್ಳುತ್ತಿದ್ದಾರೆ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X