ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಋತ್ಯ ರೈಲ್ವೆ ವಲಯ : ಮತ್ತೆಹುಬ್ಬಳ್ಳಿಗೊಲಿದ ಸುಪ್ರೀಂಕೋರ್ಟ್‌

By Staff
|
Google Oneindia Kannada News

ನವದೆಹಲಿ: ನೈಋತ್ಯ ರೈಲ್ವೆ ವಲಯವನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶವನ್ನು ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿದೆ. ರೈಲ್ವೆ ವಲಯ ಕಚೇರಿಯನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಬಾರದೆಂದು ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಅದು ಶುಕ್ರವಾರ ಅನೂರ್ಜಿತಗೊಳಿಸಿದೆ.

ಇದು ಸಂಪೂರ್ಣ ಆಡಳಿತಾತ್ಮಕ ನಿರ್ಧಾರವಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂದು ಸರ್ವೋನ್ನತ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ರೈಲ್ವೆ ಮಂಡಳಿ ಮತ್ತು ರಾಜ್ಯ ವಿರೋಧ ಪಕ್ಷ ನಾಯಕ ಜಗದೀಶ ಶೆಟ್ಟರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಬಿ.ಎನ್‌. ಕೃಪಾಲ್‌ ಮತ್ತು ನ್ಯಾಯಮೂರ್ತಿ ಅಶೋಕ್‌ ಬಾನ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ರೈಲ್ವೆ ವಲಯದ ಕೇಂದ್ರ ಕಚೇರಿಯನ್ನು ಎಲ್ಲಿ ಸ್ಥಾಪಿಸಬೇಕು ಎನ್ನುವುದು ಸರಕಾರಕ್ಕೆ ಸೇರಿದ ವಿಷಯ ಎಂದು ಹೇಳಿದೆ.

ಈ ಮಹತ್ವದ ತೀರ್ಪಿನಿಂದಾಗಿ ನೈಋತ್ಯ ರೈಲ್ವೆ ವಲಯ ಸ್ಥಾಪನೆಗೆ ಎದುರಾಗಿದ್ದ ತೊಡಕು ನಿವಾರಣೆ ಆದಂತಾಗಿದೆ. ರೈಲ್ವೆ ಮಂಡಳಿಯ ಪರ ಸಾಲಿಸಿಟರ್‌ ಜನರಲ್‌ ಹರೀಶ್‌ ಸಾಳ್ವೆ ಮತ್ತು ಜಗದೀಶ ಶೆಟ್ಟರ ಪರ ಎಸ್‌.ಕೆ. ಕುಲಕರ್ಣಿ ಮತ್ತು ಶರದ್‌ ಜವಳಿ ವಾದ ಮಂಡಿಸಿದರು.

ಕಳೆದ ವರ್ಷ ಆಗಸ್ಟ್‌ 18ರಂದು ರೈಲ್ವೆ ಮಂಡಳಿ ಮತ್ತು ಶೆಟ್ಟರ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಪೀಠ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಹುಬ್ಬಳ್ಳಿಗೆ ಒಲಿದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಶೆಟ್ಟರ್‌ ಸಂತಸ: ತಮ್ಮ ಮನವಿಯನ್ನು ಪುರಸ್ಕರಿಸಿ, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸಂತಸ ವ್ಯಕ್ತಪಡಿಸಿದ್ದಾರೆ. ಅತಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ ನೈಋತ್ಯ ವಲಯ ಶಂಕುಸ್ಥಾಪನೆಗೆ ದಿನ ನಿಗದಿ ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದಶಕದ ಹೋರಾಟಕ್ಕೆ ಸಿಕ್ಕ ಫಲ: ದಶಕಗಳ ಹೋರಾಟಕ್ಕೆ ಈಗ ಫಲ ಸಿಕ್ಕಿದೆ ಎಂದಿರುವ ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು, ಕೂಡಲೇ ವಲಯ ಕಚೇರಿ ಸ್ಥಾಪನೆಗೆ ಪೂರಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X