ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಚರಂಡಿಗಳ ಹೂಳೆತ್ತಲು 110 ಕೋಟಿ ರುಪಾಯಿ

By Staff
|
Google Oneindia Kannada News

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರಿ ಮಳೆ ಬಿತ್ತು. ರಸ್ತೆಗಳೆಲ್ಲಾ ಕೆರೆಗಳಾಯ್ತು. ತಗ್ಗು ಪ್ರದೇಶದ ಮನೆಗಳು ಈಜುಕೊಳಗಳಾದವು. ಈ ಸುದ್ದಿಯನ್ನು ನೀವೂ ಓದಿರಬಹುದು. ನೋಡಿರಲೂ ಬಹುದು. ಈಗ ಇದು ರಾಜ್ಯ ಸರಕಾರಕ್ಕೂ, ಬೆಂಗಳೂರು ಮಹಾನಗರ ಪಾಲಿಕೆಗೂ ಗೊತ್ತಾಗಿದೆ.

ಹೀಗಾಗೇ ನಗರದಲ್ಲಿರುವ ಒಳಚರಂಡಿಗಳ ಮತ್ತು ತೆರೆದ ಚರಂಡಿಗಳ ಅಗಲೀಕರಣ ಹಾಗೂ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಸರಕಾರ 110 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಗುರುವಾರ ನಡೆದ ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ವಿಷಯವನ್ನು ಪಾಲಿಕೆ ಆಯುಕ್ತ ಅಶೋಕ್‌ ದಳವಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಳೆಗಾಲ ಬಂತೆಂದರೆ ತೊಂದರೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಒಳಚರಂಡಿಯ ನೀರು ಮನೆಗಳಿಗೆ ನುಗ್ಗುತ್ತದೆ. ರಸ್ತೆಯಲ್ಲಿ ನಾಲ್ಕಾರು ಅಡಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗುತ್ತದೆ. ಕಳೆದ ಶನಿವಾರ ಹಾಗೂ ಭಾನುವಾರ ಬಿದ್ದ ಮಳೆಗೆ 400ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದವು.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ 180ರಿಂದ 200 ಕೋಟಿ ರುಪಾಯಿ ವೆಚ್ಚದಲ್ಲಿ ಚರಂಡಿ ಅಗಲೀಕರಣ ಮಾಡುವ ಮತ್ತು ಹೂಳು ತೆಗೆಸುವ ನಿರ್ಧಾರ ತಳೆದಿವೆ. ಸರಕಾರ ಈ ಕಾಮಗಾರಿಗಾಗಿ ಈಗಾಗಲೇ 110 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ.

ಇನ್ನುಳಿದ ಹಣವನ್ನು ಹುಡ್ಕೋದಿಂದ ಸಾಲ ರೂಪದಲ್ಲಿ ಪಡೆಯಾಲಾಗುತ್ತಿದೆ. ಈ ಯೋಜನೆಯಲ್ಲಿ ವೃಷಭಾವತಿ, ಅಲಸೂರು ಮತ್ತು ಯಡೆಯೂರು ಕೆರೆಗಳೂ ಸೇರಿದ್ದು, ಕಾಮಗಾರಿ ಮುಗಿಸಲು ಮೂರು ವರ್ಷಗಳ ಕಾಲಾವಧಿ ನೀಡಲಾಗಿದೆ.

ಬೆಂಗಳೂರಲ್ಲಿ ಅತಿಸಣ್ಣ, ಸಣ್ಣ ಹಾಗೂ ದೊಡ್ಡ ಚರಂಡಿಗಳಿವೆ. 2 ಸಾವಿರ ಕಿ.ಮೀಟರ್‌ ಉದ್ದದ ಸಣ್ಣ ಚರಂಡಿಗಳು ಮತ್ತು 104 ಕಿ.ಮೀಟರ್‌ ಉದ್ದದ ದೊಡ್ಡ ಚರಂಡಿಗಳಿದ್ದು, ಇವುಗಳಲ್ಲಿ ಮಣ್ಣು, ಪ್ಲಾಸ್ಟಿಕ್‌ ತುಂಬಿರುವ ಕಾರಣ ನೀರು ಸರಾಗವಾಗಿ ಸಾಗದೆ, ಮನೆಗಳಿಗೆ ನುಗ್ಗುತ್ತಿದೆ. ಇದರ ಹೂಳು ತೆಗೆಸಲು 2 ಕೋಟಿ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ದಳವಾಯಿ ತಿಳಿಸಿದರು.

ಮೇಯರ್‌ ಪ್ರೇಮಾ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರೂ ಪಕ್ಷಭೇದ ಮರೆತು, ಬೆಂಗಳೂರು ನಿವಾಸಿಗಳ ಈ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದರು.

(ಇನ್‌ಫೋ ವರದಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X