ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಟೆಕ್‌ ಪಾರ್ಕ್‌ ವಿರುದ್ಧ ವಿದ್ಯಾರ್ಥಿ ಹೋರಾಟ: ಲಾಠಿಚಾರ್ಜ್‌

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ 100 ಎಕರೆ ಭೂಮಿಯಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕ್‌ ನಿರ್ಮಿಸುವುದನ್ನು ವಿರೋಧಿಸಿ ಗುರುವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಡೆಸಿದ ಮುಷ್ಕರ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸೆಲ್‌ ಸಿಡಿಸಿದರು.

ಈ ಘಟನೆಯಲ್ಲಿ 20 ಪೊಲೀಸರು, ಹಲವು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಗಾಯಗೊಂಡಿದ್ದಾರೆ. ಗಾಂಧೀ ಕೃಷಿ ವಿಜ್ಞಾನ ಕೇಂದ್ರದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ಹಠಾತ್‌ ಮುಷ್ಕರ ಹೂಡಿದರು. ತಮ್ಮ ವಿ.ವಿ.ಗೆ ಸೇರಿದ 100 ಎಕರೆ ಹಸಿರು ಭೂಮಿಯಲ್ಲಿ ಸರಕಾರ ಬಯೋಟೆಕ್‌ ಪಾರ್ಕ್‌ ನಿರ್ಮಿಸಲು ಮರ ಕಡಿಯುತ್ತಿರುವುದನ್ನು ವಿರೋಧಿಸಿದರು. ರಸ್ತೆ ತಡೆ ಚಳವಳಿ ನಡೆಸಿದರು.

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಎಸ್‌.ಕೆ. ವೇಣುಗೋಪಾಲ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮನವೊಲಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ನಂತರ 8ರಿಂದ 10 ಸುತ್ತು ಅಶ್ರುವಾಯು ಪ್ರಯೋಗಿಸಿದರು.

ನ್ಯಾಯಾಂಗ ಬಡಾವಣೆ ಪಕ್ಕದಲ್ಲಿಯೇ ಇರುವ ಜಿಕೆವಿಕೆಗೆ ಸೇರಿದ 100 ಎಕರೆ ಭೂಮಿಯನ್ನು ಪಡೆದು, ಅಲ್ಲಿ ಬಯೋಟೆಕ್‌ ಪಾರ್ಕ್‌ ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಇದನ್ನು ಪ್ರತಿಭಟಸಿ ಕಳೆದ ವಾರದಿಂದಲೂ ಕೃಷಿ ವಿ.ವಿ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.

ಗುರುವಾರ ಬೆಳಗ್ಗೆ 8-30ರಲ್ಲಿ ಮಿಂಚಿನ ಮುಷ್ಕರ ನಡೆಸಿದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿ, ರಸ್ತೆ ತಡೆ ಮಾಡಿದ್ದರಿಂದ ಪರಿಸ್ಥಿತಿ ಪ್ರಕೋಪಕ್ಕೆ ಹೋಯಿತು. ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿದ್ದಲ್ಲದೆ, ಕ್ಯಾಂಪಸ್‌ನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.

ವಿ.ವಿ. ಕ್ಯಾಂಪಸ್‌ನಲ್ಲಿ ಈ ಹೊತ್ತು ಪೊಲೀಸರೇ ತುಂಬಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ವಿಶ್ವವಿದ್ಯಾಲಯ ಆವರಣದಲ್ಲಿ ಸೆಕ್ಷನ್‌ 144ರ ಅನ್ವಯ ಶನಿವಾರ ಬೆಳಗ್ಗೆ 6 ಗಂಟೆವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X