ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಪತ್ರಿಕೋದ್ಯಮ ಸಾಗುತ್ತಿರುವುದೆತ್ತ ?

By Staff
|
Google Oneindia Kannada News

*ವಿಶಾಖ ಎನ್‌.

Balagangadharanatha Swamijiಕುಂಬಳಗೋಡಿನ ಪತ್ರಿಕೋದ್ಯಮ ಕಾಲೇಜಿನಲ್ಲಿ ಸಣ್ಣದೊಂದು ಅಪಸ್ವರ ಎದ್ದಿದೆ. ಕಳೆದ ವರ್ಷವಷ್ಟೇ ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರವಾದ ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂನಲ್ಲಿ ಡೀನ್‌ ಆಗಿ ಕೆಲಸ ಮಾಡಿದ್ದ ಜ್ಯೋತಿ ಸನ್ಯಾಲ್‌ ಕುಂಬಳಗೋಡಿನ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು. ಕಾಲೇಜಿನ ಸರ್ವಾಧಿಕಾರಿ ಅಬ್ರಹಾಂ ಜಾರ್ಜ್‌ ಅವರಿಗೀಗ ಗೇಟ್‌ ಪಾಸ್‌ ಕೊಟ್ಟಿದ್ದಾರೆ.

ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಚೆನ್ನೈಗೆ ಸ್ಥಳಾಂತರವಾದ ನಂತರ ಬೆಂಗಳೂರಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳಿರುವ ಪತ್ರಿಕೋದ್ಯಮದ ಕಾಲೇಜೇ ಇರಲಿಲ್ಲ. ಬೆಂಗಳೂರು ವಿವಿ ಬೋಧನೆಗಿಂತ ಭಿನ್ನವಾದ, ಪ್ರಾಯೋಗಿಕ ಕಲಿಕೆಗೆ ಒತ್ತು ಕೊಡುವ, ಪತ್ರಿಕೋದ್ಯಮದ ಎಲ್ಲಾ ಮಜಲುಗಳನ್ನು ಎರಕ ಹೊಯ್ದು ಪಕ್ಕಾ ಪತ್ರಕರ್ತರನ್ನು ಹುಟ್ಟುಹಾಕುವ ಉಮೇದಿನಿಂದ ಕಳೆದ ವರ್ಷ ಹುಟ್ಟಿದ್ದೇ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜರ್ನಲಿಸಂ ನ್ಯೂ ಮೀಡಿಯಾ (ಐಐಜೆಎನ್‌ಎಂ).

ಕುಂಬಳಗೋಡಿನ ವಿಶಾಲ ಜಾಗೆ. ಅದು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿಯವರದು ಎನ್ನಲಾಗುತ್ತಿದೆ. ಸ್ವಾಮೀಜಿಯವರ ಕೃಪಾ ಕಟಾಕ್ಷದಿಂದ ಅಲ್ಲಿ ದೊಡ್ಡದೊಂದು ಕಟ್ಟಡ ಎದ್ದಿತು. ಕಂಪ್ಯೂಟರ್‌ಗಳು ಬಂದವು. ಅವೆಲ್ಲಕ್ಕೂ ಇಂಟರ್ನೆಟ್‌ ಸಂಪರ್ಕವನ್ನೂ ಕೊಡಲಾಯಿತು. ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರುಮಾಡಿರುವ ಅನುಭವಿಗಳನ್ನು ಪಾಠ ಮಾಡಲು ನೇಮಿಸಿಕೊಳ್ಳಲಾಯಿತು. ಇಷ್ಟೆಲ್ಲಾ ಮಾಡಿದ್ದು ಅಬ್ರಹಾಂ ಜಾರ್ಜ್‌ ಎಂಬ ಎನ್‌ಆರ್‌ಐ; ನ್ಯೂಜೆರ್ಸಿಯ ಇ-ಮೆಡೆಕ್ಸ್‌ ಆನ್‌ಲೈನ್‌ ಎಂಬ ಸಾಫ್ಟ್‌ವೇರ್‌ ಕಂಪನಿಯ ಅಧ್ಯಕ್ಷ. ಪಾಠ ಹೇಳಲು ನೇಮಿಸಿಕೊಂಡ ಮೇಷ್ಟ್ರುಗಳಲ್ಲಿ ಜ್ಯೋತಿ ಸನ್ಯಾಲ್‌ ಕೂಡ ಒಬ್ಬರು.

ಯಾರೀ ಸನ್ಯಾಲ್‌? : ಕೊಲ್ಕತ್ತಾದ ಸ್ಟೇಟ್ಸ್‌ಮನ್‌ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕೆಲಸ ಮಾಡಿರುವ ಜ್ಯೋತಿ ಸನ್ಯಾಲ್‌, ವರದಿಗಾರರಾಗಿಯೂ ಸಾಕಷ್ಟು ಹೆಸರು ಮಾಡಿದ್ದರು. ಬಾಂಗ್ಲಾ ಯುದ್ಧದ ವೇಳೆ ವೇಷ ಮರೆಸಿಕೊಂಡು, ಒದ್ದಾಡಿ ವರದಿ ಕಲೆ ಹಾಕಿದ ಇವರಲ್ಲಿ ಸದಾ ಒಬ್ಬ ಸಂಶೋಧಕ ಎಚ್ಚೆತ್ತಿರುತ್ತಾನೆ. ಭಾಷೆಯ ಬಗೆಗೆ ಇವರಿಗೆ ಅಪಾರ ಕಾಳಜಿ. ವೈಎನ್ಕೆ ನೆಚ್ಚು. ಪ್ರಜಾವಾಣಿಯ ಸಹಾಯಕ ಸಂಪಾದಕ ನಾಗೇಶ್‌ ಹೆಗಡೆ ಮೆಚ್ಚು. ಪತ್ರಿಕೋದ್ಯಮದ ಮೇಷ್ಟ್ರಾಗಬಲ್ಲ ಅರ್ಹತೆ, ಯೋಗ್ಯತೆ ಇವರಲ್ಲಿ ಸಾಕಷ್ಟಿದೆ.

ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂನಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಿ, ಒಂದು ಹಿಂಡು ಕನ್ನಡ ಹಾಗೂ ಇಂಗ್ಲಿಷ್‌ ಪರಿಣತ ಪತ್ರಕರ್ತರನ್ನು ದೇಶಕ್ಕೆ ಕೊಟ್ಟ ಪ್ರಮುಖ ಕೈಗಳಲ್ಲಿ ಇವರದೂ ಒಂದು. ಈ ಅರ್ಹತೆಯ ಮೇರೆಗೇ ಕುಂಬಳಗೋಡು ಕಾಲೇಜಲ್ಲೂ ಪಾಠ ಹೇಳುವ ಅವಕಾಶ ಸಿಕ್ಕಿತು. ಆದರೆ ಬಲು ಬೇಗ ಗೇಟ್‌ ಪಾಸೂ ಸಿಕ್ಕಿದೆ !

ಅವರ ಮಾತುಗಳನ್ನು ಕೇಳಿ... ಇಲ್ಲಿ ಒಳ್ಳೆ ಸವಲತ್ತು ಇದೆ. ಕಂಪ್ಯೂಟರ್‌ಗಳಿವೆ. ಇಂಟರ್ನೆಟ್‌ ಇದೆ. ಆದರೆ ಯಾವುದೇ ಮಾಧ್ಯಮದ ಜೊತೆ ಕೈಜೋಡಿಕೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಮುದ್ರಿಸುವುದು ಅಸಾಧ್ಯ. ಇದಕ್ಕೆ ಹಣ ಖರ್ಚು ಮಾಡಲು ಮೆನೇಜ್‌ಮೆಂಟ್‌ ಸಿದ್ಧವಿಲ್ಲ. ಫೀಚರ್‌ನಲ್ಲಿ ಅನುಭವ ಇರುವವರಿಗೆ ಸ್ಪೋರ್ಟ್ಸ್‌ ಜರ್ನಲಿಸಂ ಪಾಠ ಮಾಡು ಅಂದರೆ ಹೇಗೆ? ಇಲ್ಲಿ ಮಾಡಿದ್ದು ಅದೇ. ಪುಸ್ತಕ ಓದಿ, ಪಾಠ ಹೇಳಿ ಅಂದರು ಜಾರ್ಜ್‌. ಹೀಗೆ ಮಾಡಿದರೆ, ಮಾಮೂಲಿ ಕಾಲೇಜಿಗೂ ಇದಕ್ಕೂ ಏನು ವ್ಯತ್ಯಾಸ?

ಕನ್ನಡ ಸಾಹಿತ್ಯ ಪರಿಚಾರಕ ಚಿ.ಶ್ರೀನಿವಾಸ ರಾಜು ನಿಮಗೆ ಗೊತ್ತಿರಬೇಕು. ಎಂಥಾ ಒಳ್ಳೆ ಮನುಷ್ಯ ಆತ. ಅವರ ಮಗ ಸುಗತ. ಇಲ್ಲಿ ಪಾಠ ಹೇಳುವ ಈತನಿಗೆ ಹೊಕ್ಕಿದೆ ಫಾರಿನ್‌ ಭೂತ! ಹೀ ಈಸ್‌ ವೆರಿ ಫಾಂಡ್‌ ಆಫ್‌ ಪವರ್‌. ಅದೇಕೋ ಜಾರ್ಜ್‌ಗೆ ಸುಗತ ಮಾತು ಆಪ್ಯಾಯಮಾನ. ನನ್ನ ಮಾತುಗಳು ನಗಣ್ಯ. ‘ಔಟ್‌ಲುಕ್‌’ನ ಮಾಜಿ ಸಹಾಯಕ ಸಂಪಾದಕ ಕೃಷ್ಣ ಪ್ರಸಾದ್‌ ಅವರು ಕಾಲೇಜಿನ ವಿಸಿಟಿಂಗ್‌ ಪ್ರೊಫೆಸರ್‌. ಫೀಚರ್‌ ಸೆಕ್ಷನ್‌ನಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ಫೀಚರ್‌ ರೈಟಿಂಗ್‌ ಬಗೆಗೆ ಅವರು ಪಾಠ ಹೇಳಲಿ ಅನ್ನೋದು ನನ್ನ ಹಠ. ಬೇಡ, ಸುಗತ ಈಸ್‌ ರೈಟ್‌ ಪರ್ಸನ್‌ ಅನ್ನೋದು ಜಾರ್ಜ್‌ ಮತ. ಬೇಕಾದರೆ ಸುಗತ ಅವರಿಗೆ ಕೃಷ್ಣ ಪ್ರಸಾದ್‌ ಸಹಾಯ ಮಾಡಲಿ ಅನ್ನೋದು ನನಗೆ ಅವರ ಪಾಠ.

ವಿದ್ಯಾರ್ಥಿಗಳು ಎರಡು ಸೆಮಿಸ್ಟರ್‌ (1 ವರ್ಷ) ಗೆ 1 ಲಕ್ಷದ 20 ಸಾವಿರ ರುಪಾಯಿ ಫೀಸು ತೆರುತ್ತಾರೆ. ಅವರಿಗೆ ಅನ್ಯಾಯ ಆಗಬಾರದು ಅಂತ ಜಾರ್ಜ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಿ, ಖಾರವಾಗಿ ಪತ್ರ ಬರೆದೆ. ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. ನಿಮ್ಮ ಬರವಣಿಗೆ ಧಾಟಿ ಮಿತಿ ಮೀರಿದೆ. ಜಾಗ ಖಾಲಿ ಮಾಡಿ ಅಂದರು. ನಾನು ಮನೆಗೆ ನಡೆದೆ. ಕೆಲವು ವಿದ್ಯಾರ್ಥಿಗಳು ಬೇಜಾರು ಮಾಡಿಕೊಂಡರು. ನನ್ನ ಮುಖ ನೋಡಿ ಕಾಲೇಜಿಗೆ ಸೇರಿದ್ದೇವೆ ಅಂದವರೂ ಇದ್ದಾರೆ. ಅವರ ತಂದೆ-ತಾಯಂದಿರೂ ಫೋನ್‌ ಮಾಡಿ, ನೀವು ಕಾಲೇಜಿಗೆ ಮತ್ತೆ ಸೇರಿ ಅನ್ನುತ್ತಿದ್ದಾರೆ. ಆದರೆ, ಜಾರ್ಜ್‌ಗೆ ಇದು ಕೇಳಿಸುತ್ತಿಲ್ಲ !


ಮುಖಪುಟ / ಲೋಕೋಭಿನ್ನರುಚಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X