ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಾಮಾ ಬಿನ್‌ ಲಾಡೆನ್‌ ಹಣೆಬರಹ ನಿರ್ಧರಿಸುವ ಸಭೆ ಮುಂದಕ್ಕೆ

By Staff
|
Google Oneindia Kannada News

ಕಾಬೂಲ್‌ : ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ನನ್ನು ಅಮೆರಿಕಕ್ಕೆ ಒಪ್ಪಿಸಬೇಕೆ ಬೇಡವೆ ಎಂಬುದನ್ನು ನಿರ್ಧರಿಸಲು ಆಫ್ಘಾನಿಸ್ತಾನದಲ್ಲಿ ಮಂಗಳವಾರ ನಡೆಯಬೇಕಿದ್ದ ಉಲೇಮಾಗಳ (ಇಸ್ಲಾಮಿಕ್‌ ಪಂಡಿತರ) ಸಭೆಯನ್ನು ಮುಂದೂಡಲಾಗಿದೆ ಎಂದು ತಾಲಿಬಾನ್‌ ಮೂಲಗಳು ಹೇಳಿವೆ.

ಗೈರು ಹಾಜರಿ : ಸಭೆಯಲ್ಲಿ ಪಾಲ್ಗೊಳ್ಳಬೇಕಿದ್ದ ಪಂಡಿತರು ಇನ್ನೂ ರಾಜಧಾನಿಗೆ ಆಗಮಿಸದ ಕಾರಣ ಸಭೆಯನ್ನು ಮುಂದೂಡಲಾಗಿದೆ ಎಂದೂ ಮೂಲಗಳು ಹೇಳಿವೆ. ಈ ಸಭೆಯು ಬುಧವಾರ ಇಲ್ಲವೇ ಗುರುವಾರ ನಡೆಯಬಹುದು ಎಂದು ಮೂಲಗಳು ತಿಳಿಸಿರುವುದಾಗಿ ಎಎಫ್‌ಪಿ ವಾರ್ತಾ ಸಂಸ್ಥೆಗೆ ವರದಿ ಮಾಡಿದೆ.

ಬಹುಪಾಲು ಇಸ್ಲಾಮಿಕ್‌ ಪಂಡಿತರ ಗೈರು ಹಾಜರಿಯೇ ಮಂಗಳವಾರದ ಸಭೆ ಮುಂದೂಡಲು ಕಾರಣ ಎಂದು ತಾಲಿಬಾನ್‌ ಶಿಕ್ಷಣ ಸಚಿವ ಅಮೀರ್‌ ಖಾನ್‌ ಮುತ್ತಖಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಪಾಕಿಸ್ತಾನ ಮೂಲದ ಆಫ್ಘನ್‌ ಇಸ್ಲಾಮಿಕ್‌ ಪ್ರೆಸ್‌ ವರದಿ ಮಾಡಿದೆ.

ಆದರೆ, ದೂರದ ಪ್ರಾಂತ್ಯಗಳಿಂದ ಪಂಡಿತರು ಆಗಮಿಸುತ್ತಿದ್ದು, ಮಂಗಳವಾರ ಮಧ್ಯಾಹ್ನ ಸಭೆ ಆರಂಭವಾಗಬಹುದು ಎಂಬ ಆಶಾಭಾವನೆಯನ್ನು ಕಾಬೂಲ್‌ ಮೇಯರ್‌ ಮುಲ್ಲಾ ಹಮದ್‌ಉಲ್ಲಾ ನೊಮಾನಿ ವ್ಯಕ್ತಪಡಿಸಿದ್ದಾರೆ.

ಕಳೆದ ಮಂಗಳವಾರ ಅಮೆರಿಕದ ಪೆಂಟಗಾನ್‌ ಹಾಗೂ ವಿಶ್ವ ವ್ಯಾಪಾರ ಕೇಂದ್ರಗಳ ಅವಳಿ ಗಗನಚುಂಬಿ ಕಟ್ಟಡಗಳ ಮೇಲೆ ನಡೆದ ವಿಧ್ವಂಸಕ ಕೃತ್ಯಕ್ಕೆ ಲಾಡೆನ್‌ನೇ ಪ್ರಮುಖ ಹೊಣೆಗಾರ ಎಂದು ಅಮೆರಿಕಾ ಹೇಳಿದ್ದು, ಆತನನ್ನು ಜೀವಂತ ಇಲ್ಲವೇ ಶವವಾಗಿಯಾದರೂ ಒಪ್ಪಿಸುವಂತೆ ತಿಳಿಸಿತ್ತು.

ಈ ಮಧ್ಯೆ ಕೇವಲ ಒಬ್ಬ ವ್ಯಕ್ತಿಗಾಗಿ ಲಕ್ಷಾಂತರ ಆಫ್ಘನ್ನರ ಬಲಿ ಕೊಡದಂತೆ ಪಾಕಿಸ್ತಾನ ರಾಜತಾಂತ್ರಿಕರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಒಸಮಾ ಬಿನ್‌ ಲಾಡೆನ್‌ನ ಅಳಿವು - ಉಳಿವಿನ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಮಂಗಳವಾರ ಮಧ್ಯಾಹ್ನ ಎಲ್ಲ ಪ್ರಾಂತ್ಯಗಳ ಇಸ್ಲಾಮಿಕ್‌ ಪಂಡಿತ ಪ್ರತಿನಿಧಿಗಳ ಸಭೆ ಕರೆಯಲಾಗಿತ್ತು.

ವಾಷಿಂಗ್ಟನ್‌ ವರದಿ : ಸಹಸ್ರಾರು ಅಮಾಯಕರನ್ನು ಬಲಿತೆಗೆದುಕೊಂಡ ಒಸಾಮಾ ಬಿನ್‌ ಲಾಡೆನ್‌ ಬಗ್ಗೆ ಅಮೆರಿಕಕ್ಕೆ ದ್ವೇಷವಿದೆಯೇ ವಿನಾ, ನಮಗೆ ಆಫ್ಘಾನಿಸ್ತಾನದ ಮೇಲೆ ಯಾವುದೇ ಹಗೆ ಇಲ್ಲ ಎಂದು ಅಮೆರಿಕಾ ಹೇಳಿದೆ. ಈ ವಿಷಯವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಲಿನ್‌ ಪೋವೆಲ್‌ ಹೇಳಿದ್ದಾರೆ.

(ಎಎಫ್‌ಪಿ/ಇನ್‌ಫೋ ವಾರ್ತೆ)

ಮುಖಪುಟ / ಭಯೋತ್ಪಾದನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X