ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್‌ ಅಡಗುತಾಣದ ಮೇಲೆ ದಾಳಿಗೆ ಅಮೆರಿಕ ಸನ್ನದ್ಧ

By Staff
|
Google Oneindia Kannada News

ವಾಷಿಂಗ್ಟನ್‌ : ಅಮೆರಿಕದ ಹೆಮ್ಮೆಯ ಗಗನಚುಂಬಿ ಕಟ್ಟಡಗಳನ್ನು ನೆಲಸಮಗೊಳಿಸಿ, ಸಾವಿರಾರು ಜನರನ್ನು ಬಲಿತೆಗೆದುಕೊಂಡನೆನ್ನಲಾದ ಸಿರಿವಂತ ಭಯೋತ್ಪಾದಕ ಒಸಾಮ ಬಿನ್‌ ಲಾಡೆನ್‌ ಅಡಗುತಾಣದ ಮೇಲೆ ಉಗ್ರ ದಾಳಿಗೆ ಅಮೆರಿಕ ಸಂಸತ್ತು ಅಸ್ತು ಎಂದಿದೆ.

ನ್ಯೂಯಾರ್ಕ್‌ ಹಾಗೂ ವಾಷಿಂಗ್ಟನ್‌ ಮೇಲೆ ವಾಯು ದಾಳಿ ನಡೆಸಿದ ವಿಧ್ವಂಸಕರನ್ನು ಬಗ್ಗು ಬಡಿಯುತ್ತೇವೆ ಎಂಬ ಅಮೆರಿಕದ ಘೋಷಣೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ಈಗ ನಿಚ್ಚಳವಾಗಿವೆ. ವಿಧ್ವಂಸಕರನ್ನು ಬಗ್ಗು ಬಡಿಯುವ ಕಾರ್ಯದಲ್ಲಿ ಬಲವಂತದ ಕ್ರಮಗಳನ್ನು ಕೈಗೊಳ್ಳಲು ಸಹ ಸಂಸತ್ತು ಸಮ್ಮತಿ ನೀಡಿದೆ.

ಭಯೋತ್ಪಾದಕರ ಮೂಲೋತ್ಪಾಟನೆ ಮಾಡಲು ಹಾಗೂ ಇನ್ನಿತರ ಅವಶ್ಯಕತೆಗಳಿಗಾಗಿ ಅಮೆರಿಕ ಸೆನೆಟ್‌ 40 ಶತಕೋಟಿ ಡಾಲರ್‌ಗಳ ತುರ್ತು ನಿಧಿಯನ್ನು ಮಂಜೂರು ಮಾಡಿದೆ. ಪ್ರತಿದಾಳಿ ನಡೆಸಲು ಸಜ್ಜಾಗಿರುವಂತೆ 50 ಸಾವಿರ ಯೋಧರ ಮೀಸಲು ಪಡೆಗೆ ನಿರ್ದೇಶನ ನೀಡಲಾಗಿದೆ ಎಂದು ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿ ಹೇಳಿದೆ.

ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ಅಡಗಿರುವನೆನ್ನಲಾದ ಸೌದಿ ಮೂಲದ ಲಾಡೆನ್‌ ಮೇಲೆ ದಾಳಿ ನಡೆಸಲು ನೆರವು ನೀಡುವುದಾಗಿ ಪಾಕ್‌ ಹೇಳಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಒತ್ತಡಕ್ಕೆ ಮಣಿದ ಮುಷರ್ರಫ್‌ ವಾಯು ನೆಲೆಯನ್ನು ಬಳಸಿಕೊಳ್ಳಲು ಸಮ್ಮತಿಸುವ ಇಂಗಿತ ವ್ಯಕ್ತಪಡಿಸಿರುವರಾದರೂ, ಭೂಸೇನೆಯ ನೆಲೆ ಬಳಕೆಗೆ ಅನುಮತಿಸಿಲ್ಲ ಎಂದು ಅದು ತಿಳಿಸಿದೆ.

ಆಫ್ಘಾನಿಸ್ತಾನದ ಮೇಲಿನ ದಾಳಿಗೆ ಭೂಸೇನಾ ಪ್ರದೇಶವನ್ನು ಬಳಸಿಕೊಂಡರೆ ಉಗ್ರಗಾಮಿ ಇಸ್ಲಾಮಿಕ್‌ ತಂಡಗಳಿಂದ ಹಿಂಸಾತ್ಮಕ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬ ಆತಂಕ ಪಾಕಿಸ್ತಾನಕ್ಕಿದೆ ಎಂದು ಪೋಸ್ಟ್‌ ವರದಿ ತಿಳಿಸಿದೆ. ಪಾಕಿಸ್ತಾನಕ್ಕೆ ತೈಲ ಸರಬರಾಜು ನಿಷೇಧಿಸುವ ಸಲಹೆಯನ್ನು ಪಾಕ್‌ ನಿರಾಕರಿಸಿದೆ.

ಕಾಬೂಲ್‌ನಲ್ಲಿ ಆತಂಕದ ಕಾರ್ಮೋಡ : ಬಿನ್‌ ಲಾಡೆನ್‌ನಂತಹ ರಕ್ತಪಿಪಾಸಿಗೆ ನೆರವು ನೀಡುವುದು ಸೂಕ್ತವಲ್ಲ ಎಂದು ಅಮೆರಿಕ ನೇರವಾಗಿಯೇ ತಾಲಿಬಾನ್‌ ಆಡಳಿತಕ್ಕೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದ ಮೇಲೆ ಅಮೆರಿಕಾ ದಾಳಿ ಮಾಡುವುದು ನಿಶ್ಚಿತ ಎಂಬುದನ್ನು ಮನಗಂಡಿರುವ ಅಲ್ಲಿನ ಕೆಲವು ನಾಗರಿಕರು ಗುಳೆ ಏಳುತ್ತಿದ್ದಾರೆ.

ದೂರದ ಪ್ರದೇಶಗಳಲ್ಲಿ ಕಂದಕ ತೋಡುತ್ತಿದ್ದಾರೆ. ಒಟ್ಟಾರೆಯಾಗಿ ಕಾಬೂಲ್‌ನಲ್ಲಿ ಆತಂಕದ ಕಾರ್ಮೋಡ ಕವಿದಿದೆ. ವಿಶ್ವಸಂಸ್ಥೆ ಸಹ ತನ್ನ ಅಧಿಕಾರಿಗಳನ್ನು ಕಾಬೂಲ್‌ನಿಂದ ವಾಪಸ್‌ ಕರೆಸಿಕೊಂಡಿದೆ. ಈ ಮಧ್ಯೆ ಅಮೆರಿಕದ ದಾಳಿಯನ್ನು ಎದುರಿಸಲು ಸಿದ್ಧ ಎಂದು ಆಫ್ಘಾನಿಸ್ತಾನ ಹೇಳಿದೆ.

ಅಮೆರಿಕ ತನ್ನ ಮೇಲೆ ದಾಳಿ ಮಾಡಿದರೆ, ಪ್ರತಿದಾಳಿ ಮಾಡಲೂ ಆಫ್ಘಾನಿಸ್ತಾನ ಸಜ್ಜಾಗುತ್ತಿದೆ. ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಸೇಡು ತೀರಿಸಿಕೊಳ್ಳಲು ಯಾವುದೇ ಬೆಲೆ ತೆರಲೂ ಸಿದ್ಧ ಎಂದು ತಾಲಿಬಾನ್‌ ನಾಯಕ ಮುಲ್ಲಾ ಮೊಹಮ್ಮದ್‌ ಒಮರ್‌ ಹೇಳಿದ್ದಾರೆಂದು ವಕ್ತಾರರನ್ನು ಉದ್ದರಿಸಿ ಎಎಫ್‌ಪಿ ವರದಿ ಮಾಡಿದೆ.

ಈ ಎಲ್ಲ ಬೆಳವಣಿಗೆಗಳನ್ನೂ ಮೂರನೇ ಮಹಾಯುದ್ಧದ ಸೂಚನೆ ಎನ್ನಬಹುದಲ್ಲವೆ?

(ಪಿಟಿಐ/ಎಎಫ್‌ಪಿ/ಇನ್‌ಫೋ ವಾರ್ತೆ)

Post Your Views

ಮುಖಪುಟ / ಭಯೋತ್ಪಾದನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X