ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಏಡ್ಸ್‌, ಕುಷ್ಠ, ಮಲೇರಿಯಾಕ್ಕಿಂತ ಹೆಚ್ಚು ಜನ ಕ್ಷಯಕ್ಕೆ ಬಲಿ

By Staff
|
Google Oneindia Kannada News

ಬೆಂಗಳೂರು : ಮುಂದಿನ ಹತ್ತು ವರ್ಷಗಳಲ್ಲಿ ಶತಕೋಟಿ ಜನಸಂಖ್ಯೆಯ ಭಾರತದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಕೇವಲ ಕ್ಷಯರೋಗವೊಂದಕ್ಕೇ ಬಲಿಯಾಗಲಿದ್ದಾರೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ 1993ರಲ್ಲಿ ಆರಂಭಿಸಲಾದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅವಧಿಯನ್ನು ಮತ್ತೆ ಮೂರು ವರ್ಷಗಳ ಕಾಲ ವಿಸ್ತರಿಸಲಾಗಿದೆ.

ಭಾರತದಲ್ಲಿ ಎಚ್‌ಐವಿ, ಮಲೇರಿಯಾ, ಕುಷ್ಠರೋಗ ಮತ್ತು ಋತುಮಾನದ ಕಾಯಿಲೆಗಳಿಗೆ ಒಟ್ಟಾರೆಯಾಗಿ ಬಲಿಯಾಗುವವರ ಸಂಖ್ಯೆಗಿಂತಲೂ ಹೆಚ್ಚು ಮಂದಿ ಕ್ಷಯಕ್ಕೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷಯವನ್ನು ನಿರ್ಮೂಲನೆ ಮಾಡಲು ತುರ್ತು ಗಮನ ಹರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಕ್ಷಯರೋಗ ನಿರ್ಮೂಲನೆಯ ಅವಧಿಯನ್ನು 2004ನೇ ಇಸವಿ ವರೆಗೆ ವಿಸ್ತರಿಸಿದೆ. ಈ ವಿಷಯವನ್ನು ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವ ಎ. ರಾಜಾ ಅವರು ತಿಳಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ಷಯ ರೋಗ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರಕಾರ ಪ್ರತಿವರ್ಷ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ 150 ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಕ್ಷಯರೋಗ ನಿರ್ಮೂಲನೆಗಾಗಿ ವಿಶ್ವಬ್ಯಾಂಕ್‌ 748 ಕೋಟಿ ರುಪಾಯಿಗಳನ್ನು ಸರಳ ಬಡ್ಡಿ ಆಧಾರದಲ್ಲಿ ಸಾಲವಾಗಿ ನೀಡಿದೆ. ಇದರಡಿಯಲ್ಲಿ ಪರಿಷ್ಕೃತ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಭಾರತ 1962ರಿಂದಲೂ ಕ್ಷಯರೋಗ ನಿಯಂತ್ರಿಸಲು ಶ್ರಮಿಸುತ್ತಿದೆ. ಈ ರೋಗಕ್ಕೆ ತುತ್ತಾಗುವವರ ಪೈಕಿ ಚಿಕಿತ್ಸೆ ಪಡೆದು ಗುಣಮುಖವಾಗುವವರ ಪ್ರಮಾಣ ಕೇವಲ ಶೇ. 40 ಮಾತ್ರ. ಉಳಿದ ಶೇ.60ರಷ್ಟು ಮಂದಿ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ 1993ರಲ್ಲಿ ಹಮ್ಮಿಕೊಂಡ ಪರಿಷ್ಕೃತ ಕಾರ್ಯಕ್ರಮದಲ್ಲಿ ಕ್ಷಯಕ್ಕೆ ತುತ್ತಾದವರ ಪೈಕಿ ಶೇ.85ರಷ್ಟು ಮಂದಿಯನ್ನು ಪೂರ್ಣವಾಗಿ ಗುಣಪಡಿಸುವ ಯೋಜನೆ ರೂಪಿಸಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮಹಾನಿರ್ದೇಶಕ ಡಾ. ಎಸ್‌.ಪಿ. ಅಗರ್‌ವಾಲ್‌ ಮಾತನಾಡಿ, ಕ್ಷಯ ಒಬ್ಬರಿಂದ ಮತ್ತೊಬ್ಬರಿಗೆ ತೀವ್ರ ಗತಿಯಲ್ಲಿ ಹಬ್ಬುವ ರೋಗವಾಗಿದ್ದು (ಸಾಂಕ್ರಾಮಿಕ) ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.

ಪ್ರತಿವರ್ಷ ಭಾರತದಲ್ಲಿ 75 ಲಕ್ಷ ಮಂದಿಗೆ ಕ್ಷಯದ ಸೋಂಕು ತಗುಲುತ್ತಿದೆ. ಈ ಪೈಕಿ 18.25 ಲಕ್ಷ ಜನರಿಗೆ ಕ್ಷಯ ರೋಗ ಬರುತ್ತಿದೆ. ಇವರಲ್ಲಿ ಸುಮಾರು 3.65ಲಕ್ಷ ಮಂದಿ ಪ್ರತಿವರ್ಷ ಸಾಯುತ್ತಿದ್ದಾರೆ ಎಂದು ವಿವರಿಸಿದರು. ಟಿ.ಬಿ. ಅಸೋಸಿಯೇಷನ್‌ನ ಉಪಾಧ್ಯಕ್ಷ ಪ್ರೊ. ಎಂ.ಎಂ. ಸಿಂಗ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಪಿ.ಟಿ.ಐ /ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X