ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿಜ್ಞಾನಿಗಳ ಶೋಧ ‘ಸಿಂಪ್ಯೂಟರ್‌’ ಸಾರ್ಕ್‌ ರಾಷ್ಟ್ರಗಳತ್ತ

By Staff
|
Google Oneindia Kannada News

ಬೆಂಗಳೂರು : ಇಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ನಾಲ್ವರು ವಿಜ್ಞಾನಿಗಳು ಕಂಪ್ಯೂಟರ್‌ಗೆ ಪರ್ಯಾಯವಾದ ಹಾಗೂ ಕಡಿಮೆ ಖರ್ಚಿನ ‘ಸಿಂಪ್ಯೂಟರ್‌’ ಅಭಿವೃದ್ಧಿಪಡಿಸಿದ್ದು , ಇದನ್ನು ಸಾರ್ಕ್‌ ರಾಷ್ಟ್ರಗಳಲ್ಲಿ ಪ್ರದರ್ಶಿಸಲು ಉದ್ದೇಶಿಸಿದ್ದಾರೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸಿಂಪ್ಯೂಟರ್‌ ತಯಾರಿಸುತ್ತಿದ್ದು , ಸಿಂಪ್ಯೂಟರ್‌ ಬಗೆಗೆ ಕಾರ್ಪೊರೇಟ್‌ ವಲಯ ಆಸಕ್ತಿ ವ್ಯಕ್ತಪಡಿಸಿದೆ. ಸಿಂಪ್ಯೂಟರ್‌ನ ಬೆಲೆ 9 ಸಾವಿರ ರುಪಾಯಿಗಳು ಎಂದು ಸಿಂಪ್ಯೂಟರ್‌ ಟೆಕ್ನಾಲಜಿ ಕಂಪನಿಯ ಪೈಕೊಪೆಟ ಸಿಂಪ್ಯೂಟರ್ಸ್‌ ಲಿಮಿಟೆಡ್‌ ತಿಳಿಸಿದೆ. ಸಿಂಪ್ಯೂಟರ್‌ನ ನಾಲ್ವರು ಸಂಶೋಧಕರು ಈ ಕಂಪನಿ ಸ್ಥಾಪಿಸಿದ್ದಾರೆ.

ಸಿಂಪ್ಯೂಟರ್‌ನ ಸಂಶೋಧಕರಾದ ವಿಜಯ್‌ ಚಂದ್ರು, ಸ್ವಾಮಿ ಮನೋಹರ್‌, ವಿ. ವಿನಯ್‌ ಮತ್ತು ರಮೇಶ್‌ ಹರಿಹರನ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಿಂಪ್ಯೂಟರ್‌ ಬಗೆಗಿನ ವಿವರಗಳನ್ನು ಒದಗಿಸಿದರು. ಲಾಭರಹಿತ ಸಂಸ್ಥೆಯಾದ ದಕ್ಷಿಣ ಏಷ್ಯಾ ಫೌಂಡೇಶನ್‌ ಸಾರ್ಕ್‌ ರಾಷ್ಟ್ರಗಳಲ್ಲಿ ಶಿಕ್ಷಣ ಚಟುವಟಿಕೆಗಳನ್ನು ಚುರುಕುಗೊಳಿಸಲು ನಿರ್ಧರಿಸಿದ್ದು , ಈ ಹಿನ್ನೆಲೆಯಲ್ಲಿ ತನ್ನ ಯೋಜನೆಗಳನ್ನು ತೊಡಗಿಸುವಂತೆ ಪೈಕೊಪೆಟವನ್ನು ಕೇಳಿದೆ ಎಂದು ಅವರು ಹೇಳಿದರು.

ಬಸ್ತರ್‌ನಿಂದ ಸಾರ್ಕ್‌ಗೆ ಸಿಂಪ್ಯೂಟರ್‌ ಅಭಿಯಾನ

ಮುಂದಿನ ಆರು ತಿಂಗಳಲ್ಲಿ ಛತ್ತೀಸ್‌ಘಡ್‌ನ ಬಸ್ತರ್‌ನಲ್ಲಿ ಪೈಕೊಪೆಟದ ಮೊದಲ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದ್ದೇವೆ. ಸಿಂಪ್ಯೂಟರ್‌ ಆಧಾರಿತ ಈ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ತೊಡಗುವ ನಿರೀಕ್ಷೆಯಿದೆ. ರೈನ್‌ಬೋ ಪಾರ್ಟ್‌ನರ್‌ ಷಿಫ್‌ ಸಂಸ್ಥೆ (ಆರ್‌ಪಿಓ) ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು , ಬಸ್ತರ್‌ ಯೋಜನೆಯ ನಂತರ ಸಾರ್ಕ್‌ ರಾಷ್ಟ್ರಗಳಿಗೆ ಸಿಂಪ್ಯೂಟರ್‌ನ ಅಭಿಯಾನ ಮುಂದುವರಿಯಲಿದೆ ಎಂದು ಸಿಂಪ್ಯೂಟರ್‌ ಜನಕರು ತಿಳಿಸಿದರು.

ಸಿಂಪ್ಯೂಟರ್‌ ತಯಾರಿಕೆಗೆ ವಿಪ್ರೋ, ಟಿಸಿಎಸ್‌ ಆಸಕ್ತಿ

ಪ್ರಸ್ತುತ ಸಾರ್ವಜನಿಕ ವಲಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸಿಂಪ್ಯೂಟರ್‌ ಉತ್ಪಾದಿಸುತ್ತಿದ್ದು , ವಿಪ್ರೋ ಹಾಗೂ ಟಿಸಿಎಸ್‌ ಕೂಡ ಸಿಂಪ್ಯೂಟರ್‌ ತಯಾರಿಕೆಗೆ ಒಲವು ತೋರಿವೆ ಎಂದು ಪೈಕೊಪೆಟದ ನಿರ್ದೇಶಕ ಚಂದ್ರು ಹೇಳಿದರು.

ಪೈಕೊಪೆಟದ ಸಿಇಓ ಮನೋಹರ್‌ ಹೇಳುವಂತೆ, ಕಳೆದ ಏಪ್ರಿಲ್‌ನಲ್ಲಿ ಪರಿಚಯಿಸಿದ ಸಿಂಪ್ಯೂಟರ್‌ ಬಗೆಗೆ ವ್ಯಾಪಕ ಜಾಗತಿಕ ಪ್ರತಿಕ್ರಿಯೆ ಬಂದಿದೆ. ಅಮೆರಿಕ, ಯುರೋಪ್‌, ಮಧ್ಯ ಪ್ರಾಚ್ಯ ಹಾಗೂ ಲ್ಯಾಟಿನ್‌ ಅಮೇರಿಕೆಗಳು ಸಿಂಪ್ಯೂಟರ್‌ ಕುರಿತು ವಿಚಾರಿಸಿವೆ.

ಅಭಿವೃದ್ಧಿ ಕಾರ್ಯಗಳಲ್ಲಿ ಸಿಂಪ್ಯೂಟರ್‌ ಬಳಸಿಕೊಳ್ಳುವಂತೆ ವಿವಿಧ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಲಾಗಿದೆ, ಚರ್ಚೆಗಳೂ ನಡೆದಿವೆ. ಇ-ಆಡಳಿತ ಕ್ಷೇತ್ರದಲ್ಲಿ ಕರ್ನಾಟಕ, ತಮಿಳುನಾಡಿನಲ್ಲಿ ಮೈಕ್ರೋ ಫೈನಾನ್ಸಿಂಗ್‌ ಹಾಗೂ ಆಂಧ್ರಪ್ರದೇಶದಲ್ಲಿ ಬಡತನ ನಿರ್ಮೂಲನೆ ಕ್ಷೇತ್ರಗಳಲ್ಲಿ ಸಿಂಪ್ಯೂಟರ್‌ ಬಳಸುವ ಪ್ರಸ್ತಾವನೆಗಳು ಜಾರಿಗೊಳ್ಳುವ ನಿರೀಕ್ಷೆಯೂ ಇದೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X